ಕರ್ನಾಟಕ

ಪತಿಯ ಮನೆ ಬಿಟ್ಟು ಪರಾರಿಯಾಗಿದ್ದ ಗೃಹಿಣಿ: 100 ಅಡಿ ಬಾವಿಗೆ ತಳ್ಳಿದ ಪ್ರಿಯಕರ; 4 ದಿನ ಬಾವಿಯಲ್ಲೇ ಉಳಿದ ಗೃಹಿಣಿ!

Pinterest LinkedIn Tumblr


ದೇವನಹಳ್ಳಿ: ಪತಿಯ ಮನೆ ಬಿಟ್ಟು ಪರಾರಿಯಾಗಿದ್ದ ಗೃಹಿಣಿಯನ್ನು ಪ್ರಿಯಕರ 100 ಅಡಿ ಆಳದ ಪಾಳು ಬಾವಿಗೆ ತಳ್ಳಿದ ಘಟನೆ ವರದಿಯಾಗಿದೆ.

ನಾಪತ್ತೆಯಾದವಳ ಪತ್ತೆಗಾಗಿ ನಾಲ್ಕು ದಿನ ಹುಡುಕಾಡಿದ ಪೊಲೀಸರಿಗೆ ಪಾಳುಬಾವಿಯಲ್ಲಿ ಬಿದ್ದು ನರಳಾಡುತ್ತಿದ್ದ ಗೃಹಿಣಿ ಸಿಕ್ಕಿದ್ದಾಳೆ. 4 ರಾತ್ರಿ ಮತ್ತು 4 ಹಗಲುಗಳನ್ನು ಗೃಹಿಣಿ ಅಲ್ಲಿಯೇ ಕಾಲ ಕಳೆದಿದ್ದಾರೆ. ಆಕೆಯನ್ನು ಅಗ್ನಿಶಾಮಕ ದಳದವರು ರಕ್ಷಣೆ ಮಾಡಿದ್ದಾರೆ. ಸಾವು ಬದುಕಿನ ನಡುವೆ ಹೋರಾಡುತ್ತಿರುವ ಆಕೆಯನ್ನ ಪ್ರಿಯಕರನೇ ಬಾವಿಗೆ ತಳ್ಳಿ, ಕೊಲ್ಲುವ ಯತ್ನ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಎ. ರಂಗನಾಥಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಾಲೂರು ತಾಲೂಕಿನ ಸೊಣ್ಣಹಳ್ಳಿ ಗ್ರಾಮದ 23 ವರ್ಷದ ಗೃಹಿಣಿ ಅಮೃತಾ ಎಂಬಾಕೆಯನ್ನು ಪಾಳು ಬಾವಿಯಿಂದ ರಕ್ಷಣೆ ಮಾಡಲಾಗಿದೆ.

ಅಮೃತಾಳಿಗೆ ಸೊಣ್ಣಹಳ್ಳಿಯ ಅಶೋಕ್ ಎಂಬ ಯುವಕನೊಂದಿಗೆ ಎರಡು ವರ್ಷಗಳ ಹಿಂದೆ ಮದುವೆಯಾಗಿತ್ತು. ಇವರಿಗೆ ಒಂದು ಗಂಡು ಮಗು ಸಹ ಇದೆ. ಇವರ ದಾಂಪತ್ಯ ಜೀವನದ ಮಧ್ಯೆ ಬಂದ ಪ್ರಿಯಕರ ಅಮೃತಾಳನ್ನು ಪಾಳುಬಾವಿಯಲ್ಲಿ ನರಳುವಂತೆ ಮಾಡಿದ್ದಾನೆ. ಕಳೆದ ಶನಿವಾರ ಎಂದಿನಂತೆ ಗಂಡ ಅಶೋಕ್ ಕೆಲಸಕ್ಕೆ ತೆರಳಿದ್ದಾನೆ. ಅತ್ತೆ- ಮಾವ ಹೊಲಕ್ಕೆ ಹೋಗಿದ್ದಾರೆ. ಆಗ ಮಗುವನ್ನು ಪಕ್ಕದ ಮನೆಯವರಿಗೆ ಕೊಟ್ಟು ಮಾಲೂರಿಗೆ ಹೋಗುವುದ್ದಾಗಿ ಹೇಳಿದ ಅಮೃತಾ ಮಾಲೂರಿನ ಗಂಡನ ಮನೆ ಸೊಣ್ಣಹಳ್ಳಿ ಗ್ರಾಮದಿಂದ ನಾಪತ್ತೆಯಾಗಿದ್ದಳು. ಅಂದು ನಾಪತ್ತೆಯಾಗಿದ್ದ ಅಮೃತಾಳನ್ನು ಗಂಡನ ಮನೆ ಕಡೆಯವರು ಹುಡುಕಾಟ ನಡೆಸಿದ್ದರೂ ಆಕೆಯ ಪತ್ತೆಯಾಗಿರಲಿಲ್ಲ.

ಅಮೃತಾಳನ್ನು ಶನಿವಾರವೇ ಕರೆಸಿಕೊಂಡಿದ್ದ ರಂಗನಾಥಪುರದಲ್ಲಿದ್ದ ಪ್ರಿಯಕರ ಆದರ್ಶ ಆಕೆಯನ್ನು 100 ಅಡಿ ಆಳದ ಪಾಳು ಬಾವಿಗೆ ತಳ್ಳಿ ಕೊಲೆ ಮಾಡಲು ಯತ್ನಿಸಿ ಪರಾರಿಯಾಗಿದ್ದಾನೆ. ಕಳೆದ ನಾಲ್ಕು ದಿನಗಳಿಂದ ಬಾವಿಯಲ್ಲೆ ಬಿದ್ದಿದ್ದ ಅಮೃತಾ ಮೇಲೆ ಬರಲು ಆಗದೇ ಕಾಪಾಡಿ ಎಂದು ಕೂಗಿಕೊಂಡಿದ್ದಾಳೆ. ಆದರೆ, ಯಾರೊಬ್ಬರೂ ಸಹಾಯಕ್ಕೆ ಬಂದಿರಲಿಲ್ಲ. ಪಾಳು ಬಾವಿಯಿಂದ ನಿರಂತರವಾಗಿ ಕೂಗಾಟದ ಶಬ್ದ ಕೇಳಿದ ಅಕ್ಕಪಕ್ಕದ ತೋಟದವರು ಭಯಗೊಂಡು ಹತ್ತಿರಕ್ಕೆ ಹೋಗದೆ ಪೊಲೀಸರಿಗೆ ಮಾಹಿತಿ ನೀಡಿದ್ದರು ನಿರ್ಜನ ಪ್ರದೇಶವಾದ್ದರಿಂದ‌ ಬಾವಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಅರಣ್ಯ ಸಹ ಇದ್ದು ಮರ-ಗಿಡಗಳ ಮಧ್ಯೆ ದೊಡ್ಡ ಬಾವಿಯ ಸಮೀಪಕ್ಕೆ ಯಾರೂ ಹೋಗುತ್ತಿರಲಿಲ್ಲ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬಾವಿಯಲ್ಲಿ ಬಿದ್ದಿದ್ದ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಇನ್ನೂ ಅಸ್ವಸ್ಥವಾಗಿರುವ ಅಮೃತಾಳನ್ನು ದೇವನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಬಾವಿಗೆ ತಳ್ಳಿದ್ದ ಆದರ್ಶನ ಮಾಹಿತಿ ಪಡೆದಿರುವ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಪ್ರಕರಣವನ್ನ ದಾಖಲಿಸಿಕೊಂಡಿರುವ ವಿಜಯಪುರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಸುಖ ಸಂಸಾರಕ್ಕೆ ಸಾಕ್ಷಿಯಾಗಿದ್ದ ಪುಟ್ಟ ಮಗು, ಗಂಡನಿಗೆ ಕೈ ಕೊಟ್ಟು ಪ್ರಿಯತಮನ ಮಾತಿಗೆ ಮರುಳಾಗಿ ಮನೆ ಬಿಟ್ಟು ಹೋದ ಅಮೃತಾ ಬಾವಿಯಲ್ಲಿ ನರಳಿ, ಜೀವನದ ಪಾಠ ಕಲಿತಿದ್ದು ಎಷ್ಟೋ ಗೊತ್ತಿಲ್ಲ. ಸಾಂಸಾರಿಕ ಜೀವನ ಬಿಟ್ಟು ಪರ ಪುರುಷರು, ಮಹಿಳೆಯರ ಹಿಂದೆ ಬೀಳುವರಿಗೆ ಈ ಘಟನೆ ಒಂದು ಪಾಠವಾಗಿದೆ.

Comments are closed.