ಕರ್ನಾಟಕ

ಬಾಲ್ಯವಿವಾಹವಾದ ಪತಿಯನ್ನು ತೊರೆದು ಪ್ರಿಯಕರನ ಮದುವೆಯಾದ ಯುವತಿ: ರಕ್ಷಣೆ ನೀಡುತ್ತಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ?

Pinterest LinkedIn Tumblr


ಬಾಗಲಕೋಟೆ: ಬಾಲ್ಯವಿವಾಹವಾಗಿದ್ದ ಯುವತಿಯೊಬ್ಬಳು ಪತಿಯನ್ನು ತೊರೆದು ಪ್ರಿಯಕರನೊಂದಿಗೆ ಮದುವೆಯಾದ ಘಟನೆ ಇಲ್ಲಿಂದ ವರದಿಯಾಗಿದೆ.

2017ರಲ್ಲಿ ಬಾಲ್ಯ ವಿವಾಹಕ್ಕೊಳಗಾಗಿದ್ದ ಯುವತಿ, ಪತಿಯ ಕಿರುಕುಳ ತಾಳಲಾರದೇ ಮದುವೆಗೂ ಮುನ್ನ ಪ್ರೇಮಿಸುತ್ತಿದ್ದ ಪ್ರೀಯಕರನ ಊರು ಬಾಗಲಕೋಟೆಗೆ ಬಂದು ಮುಚಖಂಡಿ ವೀರಭದ್ರೇಶ್ವರ ದೇಗುಲದಲ್ಲಿ ಪ್ರೀಯಕರನ ಕೈಹಿಡಿದಿದ್ದಾಳೆ. ತುಮಕೂರು ಜಿಲ್ಲೆಯ ಮೂಲದ 21 ವರ್ಷದ ಐಶ್ವರ್ಯ ಬಾಗಲಕೋಟೆ ನವನಗರದ 26ವರ್ಷದ ಆಕಾಶ್ ಸೊನ್ನ ಎಂಬಾತನನ್ನು ಮದುವೆಯಾಗಿ ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಇನ್ನು ಮೊದಲನೇ ವಿವಾಹ ವಿಚ್ಚೇದನ ಪಡೆಯದೇ ಇದೀಗ ಯುವತಿ ಪ್ರಿಯಕರನ ಕೈಹಿಡಿದಿದ್ದು ಕಾನೂನಾತ್ಮಕ ಕಗ್ಗಂಟು ಎದುರಾಗಿದೆ. ಈ ವಿಲಕ್ಷಣ ಪ್ರಕರಣವೊಂದು ಬಾಗಲಕೋಟೆ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಅಂಗಳಕ್ಕೆ ಬಂದು ಬಿದ್ದಿದೆ.

ಬಾಗಲಕೋಟೆ ನವನಗರದ ಆಕಾಶ್ ಸೊನ್ನ 2016ರಲ್ಲಿ ಚಿತ್ರದುರ್ಗಕ್ಕೆ ಪ್ರವಾಸಕ್ಕೆ ಹೋಗಿದ್ದಾನೆ. ಅದೇ ಸಂದರ್ಭದಲ್ಲಿ ತುಮಕೂರು ಜಿಲ್ಲೆಯ ಮೂಲದ ಐಶ್ವರ್ಯ ಕೂಡಾ ಚಿತ್ರದುರ್ಗಕ್ಕೆ ಪ್ರವಾಸಕ್ಕೆ ಹೋಗಿದ್ದಾಳೆ. ಆಗ ಇಬ್ಬರ ಮಧ್ಯೆ ಪರಿಚಯವಾಗಿದೆ. ಆಕಾಶ್ ಮೊಬೈಲ್ ನಂಬರ್ ಪಡೆದಿದ್ದ ಐಶ್ವರ್ಯ, ತನ್ನ ತಂದೆಯ ಮೊಬೈಲ್ ನಂಬರ್ ನಿಂದ ಆಕಾಶ್ ನೊಂದಿಗೆ ಮಾತನಾಡುತ್ತಾ ಇಬ್ಬರ ಮಧ್ಯೆ ಪ್ರೇಮ ಗಟ್ಟಿಯಾಗಿದೆ. ಆಗ ಇವರ ಪ್ರೀತಿಗೆ ಜಾತಿ ಅಡ್ಡಿ ಬರುತ್ತದೆ, ಅನ್ಯಜಾತಿ ಯುವಕನೊಂದಿಗೆ ಮದುವೆಗೆ ಒಪ್ಪುವುದಿಲ್ಲವೆಂದು ಪ್ರೀತಿ ವಿಚಾರವನ್ನು ತಮ್ಮ ಕುಟುಂಬಸ್ಥರೊಂದಿಗೆ ಐಶ್ವರ್ಯ ಹೇಳಿಕೊಂಡಿಲ್ಲ ಎಂದು ತಿಳಿದು ಬಂದಿದೆ.

ಆಕೆಯ ವಿರೋಧದ ಮಧ್ಯೆ 2017ರಲ್ಲಿ ಐಶ್ವರ್ಯಗೆ 17 ವರ್ಷ ಇರುವಾಗ ಆಕೆಯ ಕುಟುಂಬಸ್ಥರು, ಬಳ್ಳಾರಿ ಮೂಲದ ಯುವಕನಿಗೆ ಬಾಲ್ಯ ವಿವಾಹ ಮಾಡಿಕೊಟ್ಟಿದ್ದಾರೆ. ಬಳ್ಳಾರಿ ಮೂಲದ ಐಶ್ವರ್ಯ ಪತಿ, ಮಾಜಿ ಸಚಿವ ಸಂತೋಷ್ ಲಾಡ್ ಅವರ ಬೆಂಗಳೂರಿನ ಕಚೇರಿಯಲ್ಲಿ ಕೆಲ್ಸ ಮಾಡ್ತಿದ್ದಾನಂತೆ. ಪತಿ ಹಾಗೂ ಮಾವನ ಕಿರುಕುಳ ಹೆಚ್ಚಾಗಿ, ಒಮ್ಮೆ ನನಗೆ ಮಾವ ವಿಷ ಹಾಕಿ ಸಾಯಿಸಲು ಬಂದಿದ್ರು ಎಂದು ಐಶ್ವರ್ಯ ಹೇಳುತ್ತಿದ್ದಾಳೆ.

ಮದುವೆಯಾದ ನಂತರವೂ ಪ್ರಿಯಕರ ಆಕಾಶ್ ಐಶ್ವರ್ಯ ಮಧ್ಯೆ ಸಂಪರ್ಕದಲ್ಲಿದ್ದರಂತೆ. ಆಗಾಗ ಇವರಿಬ್ಬರು ಬೆಂಗಳೂರಿನಲ್ಲಿ ಭೇಟಿ ಆಗುತ್ತಿದ್ರಂತೆ. ಬೆಂಗಳೂರಿನಿಂದ ತನ್ನ ತವರೂರಿಗೆ ಬಂದಿದ್ದ ಐಶ್ವರ್ಯ ಎರಡು ದಿನಗಳ ಹಿಂದೆ ಯುವತಿ ಬಾಗಲಕೋಟೆಗೆ ಬಂದಿದ್ದಾಳೆ. ಇವತ್ತು ಮುಚಖಂಡಿ ವೀರಭದ್ರೇಶ್ವರ ದೇಗುಲದಲ್ಲಿ ಪ್ರಿಯಕರನೊಂದಿಗೆ ವಿವಾಹವಾಗಿದ್ದಾಳೆ. ತುಮಕೂರು ಜಿಲ್ಲೆಯಲ್ಲಿ ಐಶ್ವರ್ಯ ಕಾಣೆಯಾಗಿದ್ದಾಳೆಂದು ದೂರಿನನ್ವಯ ತುಮಕೂರು ಪೊಲೀಸರು ಐಶ್ವರ್ಯ ಮೊಬೈಲ್ ನಂಬರ್ ಟವರ್ ಆಧರಿಸಿ, ಬಾಗಲಕೋಟೆಯಲ್ಲಿರುವುದನ್ನು ಪತ್ತೆ ಹಚ್ಚಿದ್ದಾರೆ.

ಮಂಗಳವಾರ ಸಂಜೆ ಐಶ್ವರ್ಯ ತಂದೆ ದೇವರಾಜ್ ಎಂ ಟಿ , ಅಣ್ಣ, ಮೊದಲ ಗಂಡ, ಬಾಗಲಕೋಟೆಗೆ ಬಂದಿದ್ದಾರೆ. ತನ್ನ ಗಂಡನ ಮನೆಯಿಂದ ನನಗೆ, ನನ್ನ ಪ್ರೀಯಕರನಿಗೆ ಜೀವ ಭಯವಿದೆ ಎಂದು ರಕ್ಷಣೆಗಾಗಿ ಬಾಗಲಕೋಟೆ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಬಂದಿದ್ದ ಐಶ್ವರ್ಯಳನ್ನು ಕಂಡು ತಂದೆ ದೇವರಾಜ್, ಬಾರಮ್ಮಾ ಮಗಳೇ ಊರಿಗೆ ಹೋಗೋಣವೆಂದು ಗೋಳಾಡಿ ಕಣ್ಣೀರು ಹಾಕಿದ್ದಾರೆ. ಆಗ ಮಗಳು ಕೂಡಾ ಕಣ್ಣೀರು ಹಾಕಿದ್ದಾಳೆ. ನಮ್ಮ ಮಗಳನ್ನು ಕಳಿಸಿಕೊಡು ಎಂದು ಪ್ರಿಯಕರ ಆಕಾಶ್ ಕಾಲಿಗೆ ಐಶ್ವರ್ಯ ತಂದೆ ಬೀಳಲು ಮುಂದಾಗಿದ್ದಾರೆ, ಆಗ ಆಕಾಶ್ ನಿಮ್ಮ ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಐಶ್ವರ್ಯ ತಂದೆ ಕಾಲಿಗೆ ಬಿದ್ದು ಕೇಳಿಕೊಂಡ‌ ಘಟನೆಯೂ ನಡೆದಿದೆ.ಆಗ ಕಣ್ಣೀರಿನೊಂದಿಗೆ ಪ್ರಿಯಕರನ ಕೈಹಿಡಿದು ರಕ್ಷಣೆಗಾಗಿ ಬಾಗಲಕೋಟೆ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮೆಟ್ಟಿಲೇರಿದರು. ಮಗಳು ನಮ್ಮನ್ನು ಕೈ ಬಿಟ್ಟು ಹೋದಳು ಎಂದು ತಂದೆ ತನ್ನ ಮಗನನ್ನು ತಬ್ಬಿಕೊಂಡ ಕಣ್ಣೀರು ಹಾಕಿದ ದೃಶ್ಯ ಮನಕಲಕುವಂತಿತ್ತು. ಸದ್ಯ ಐಶ್ವರ್ಯ ಗೆ 21ವಯಸ್ಸು, ಆಕಾಶ್ ಗೆ 26ವರ್ಷ ವಯಸ್ಸು, ಆಕಾಶ್ ಬಿಪಿಇಡಿ ಓದಿದ್ದಾನೆ. ಇವತ್ತು ದೇಗುಲದಲ್ಲಿ ವಿವಾಹವಾಗಿದ್ದೇವೆ, ನಾಳೆ ವಿವಾಹ ನೊಂದಣಿ ಕಚೇರಿಗೆ ಹೋಗುತ್ತೇವೆ ಎನ್ನುತ್ತಿದ್ದಾರೆ ನವವಿವಾಹಿತ ಪ್ರೇಮಿಗಳು.

3ವರ್ಷದ ಹಿಂದೆ ಬಾಲ್ಯ ವಿವಾಹವಾಗಿದ್ದ ಯುವತಿ ಇದೀಗ ಮೊದಲನೇ ಗಂಡ ಬೇಡುವೆಂದು ಪ್ರಿಯಕರನೊಂದಿಗೆ ಮತ್ತೊಂದು ಮದುವೆ ಆಗಿರುವ ವಿಚಿತ್ರ ಪ್ರೇಮ ಕಹಾನಿ ಪೊಲೀಸ್ ವರಿಷ್ಠಾಧಿಕಾರಿ ಅಂಗಳಕ್ಕೆ ಬಿದ್ದಿದೆ. ಕಾನೂನಾತ್ಮಕ ತೊಡಕಿನ ಮಧ್ಯೆ ಕೈ ಹಿಡಿದ ಪ್ರೇಮ ಹಕ್ಕಿಗಳಿಗೆ ರಕ್ಷಣೆ ಸಿಗುತ್ತಾ ಎನ್ನುವುದು ಸದ್ಯದ ಪ್ರಶ್ನೆ.

ಪ್ರೇಮಿಗಳು ವಯಸ್ಕರಾಗಿದ್ದರೆ, ರಕ್ಷಣೆ ಬೇಕಾಗಿದ್ದಲ್ಲಿ ಕೊಡಲಾಗುವುದು. ಈ ಹಿಂದೆ ಯುವತಿ ಬಾಲ್ಯ ವಿವಾಹ, ಇದೀಗ ಪ್ರೀಯಕರನೊಂದಿಗೆ ವಿವಾಹ ಈ ಎರಡು ವಿಚಾರಗಳನ್ನು ಕಾನೂನಾತ್ಮಕ ಚೌಕಟ್ಟಿನಲ್ಲಿ ಪರಿಶೀಲಿಸಿ, ದೂರು ದಾಖಲಾದ ಠಾಣೆಗೆ ವರ್ಗಾಯಿಸಲಾಗುವುದು ಎಂದು ಬಾಗಲಕೋಟೆ ಎಸ್ ಪಿ ಲೋಕೇಶ್ ಜಗಲಾಸರ ತಿಳಿಸಿದ್ದಾರೆ.

Comments are closed.