ಕರ್ನಾಟಕ

ನಿಂಬೆಹಣ್ಣು ಮಾರಾಟಕ್ಕೆ ಮಂಡ್ಯದಿಂದ ಶಿವಮೊಗ್ಗಕ್ಕೆ ಬಂದವರು ಯಡಿಯೂರಪ್ಪ; ಬೇಳೂರು ಗೋಪಾಲಕೃಷ್ಣ

Pinterest LinkedIn Tumblr


ಶಿವಮೊಗ್ಗ: ಮುಖ್ಯಮಂತ್ರಿ ಯಡಿಯೂರಪ್ಪನವರು ಮಂಡ್ಯದಿಂದ ಶಿವಮೊಗ್ಗಕ್ಕೆ ನಿಂಬೆಹಣ್ಣು ಮಾರಾಟಕ್ಕೆ ಬಂದವರು ಎಂದು ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲ ಕೃಷ್ಣ ವಾಗ್ದಾಳಿ ನಡೆಸಿದ್ದಾರೆ.

ಭೂ ಕಾಯ್ದೆ ತಿದ್ದುಪಡಿ ಕುರಿತು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಹಿಂದೆ ಚೆಕ್ ಮೂಲಕ ಹಣ ಪಡೆದು ಯಡಿಯೂರಪ್ಪನವರು ಜೈಲಿಗೆ ಹೋಗಿದ್ದರು, ಈಗ ಆರ್ ಟಿಜಿಎಸ್ ಮೂಲಕ ಹಣ ವರ್ಗಾವಣೆ ಆಗುತ್ತಿದೆ ಎಂದು ಆರೋಪಿಸಿದರು. ಶಿವಮೊಗ್ಗದ ಕಾಂಗ್ರೇಸ್ ಕಚೇರಿಯಲ್ಲಿ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ಮುಖ್ಯಮಂತ್ರಿ ಯಡೂಯೂರಪ್ಪ ಮತ್ತು ಅವರ ಮಕ್ಕಳ ವಿರುದ್ಧ ಕಿಡಿಕಾರಿದರು. ಸಿಎಂ ಬಿಎಸ್ ವೈ ಮತ್ತು ಅವರ ಮಕ್ಕಳು ಹಾಗೂ ಸಚಿವ ಅಶೋಕ್ ಕಾರ್ಪೋರೇಟರ್ ಕಂಪನಿಯ ಗುಲಾಮರು. ಅವರಿಗೆ ಅನುಕೂಲ ಮಾಡಿಕೊಡಲು ಭೂ ಸುಧಾರಾಣ ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದು ಆರೋಪಿಸಿದರು.

ಸಿಎಂ ಯಡಿಯೂರಪ್ಪನವರ ಮಕ್ಕಳಾದ ಬಿ ವೈ ವಿಜಯೇಂದ್ರ, ಸಂಸದ ಬಿ.ವೈ ರಾಘವೇಂದ್ರ ಹಾಗೂ ಕುಟುಂಬದವರು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. ಮುಂದೆ ಅಧಿಕಾರ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ, ಈ ಹಿನ್ನೆಲೆಯಲ್ಲಿ ನಿರಂತರವಾಗಿ ಭ್ರಷ್ಟಾಚಾರದಲ್ಲಿ ಸಿಎಂ ಮತ್ತು ಅವರ ಕುಟುಂಬ ತೊಡಗಿದೆ. ಹಿಂದೆ ಚೆಕ್ ಮೂಲಕ ಹಣ ಪಡೆದು ಸಿಎಂ ಬಿಎಸ್​ವೈ ಜೈಲಿಗೆ ಹೋಗಿದ್ದರು. ಈಗ ಆರ್ ಟಿಜಿಎಸ್ ಮೂಲಕ ಹಣ ವರ್ಗಾವಣೆ ಆಗುತ್ತಿದೆ. ಇದೊಂದು ನಾಚಿಗೇಡಿನ ಸಂಗತಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು

ಇನ್ನು ಬಿಜೆಪಿ ಸರ್ಕಾರ ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ 24 ಗಂಟೆಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುತ್ತೇವೆ ಎಂದು ಘೋಷಣೆ ಮಾಡಿದ್ದರು. ಆದರೆ. ಸರ್ಕಾರ ಬಂದು ಒಂದು ವರ್ಷ ಆಗಿದೆ. ಇನ್ನೂ ಕಾಯ್ದೆ ಯಾಕೆ ಜಾರಿಯಾಗಿಲ್ಲ ಎಂದು ಹೇಳಿದರು.

ಈಗ ಸಚಿವ ಈಶ್ವರಪ್ಪನವರು ಇದರ ಬಗ್ಗೆ ಮಾತನಾಡುತ್ತಲೇ ಇಲ್ಲ. ಬಿಜೆಪಿ ಇವರೆಲ್ಲರೂ ಸೀರೆ ತೊಟ್ಟುಕೊಳ್ಳಬೇಕು ಎಂದು ಬೇಳೂರು ಹೇಳಿದ್ದಾರೆ. ಸಚಿವ ಈಶ್ವರಪ್ಪನವರಿಗೆ ಮತ್ತು ಅವರ ಮಗನಿಗೆ ಮಾತ್ರ ಅಧಿಕಾರ ಬೇಕು. ಅವರು ಯಾರಿಗೂ ಅಧಿಕಾರ ಕೊಡುವುದಿಲ್ಲ. ನಿಮ್ಮ ಸರಕಾರಕ್ಕೆ ತಾಕತ್ತು ಇಲ್ಲ ಎಂದು ತರಾಟೆಗೆ ತೆಗೆದುಕೊಂಡಿರು.

ಸಂಸದ ತೇಜಸ್ವಿ ಸೂರ್ಯ ರಾಜ್ಯಕ್ಕೆ ಭಯೋತ್ಪಾದನೆ ಪಟ್ಟ ಕಟ್ಟಿದ್ದಾರೆ. ರಾಜ್ಯದ ಹೆಸರು ವಿನಾಕಾರಣ ಹಾಳು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕನ್ನಡಿಗರನ್ನು ಕೆಣಕಿದರೆ ಸುಮ್ಮನೆ ಇರುವುದಿಲ್ಲ. ಸಂಸದ ತೇಜಸ್ವಿ ಸೂರ್ಯ ಅವರ ನಡವಳಿಕೆ ಸರಿಪಡಿಸಿ ಕೊಳ್ಳಬೇಕು ಎಂದು ಗೋಪಾಲಕೃಷ್ಣ ಆಗ್ರಹಿಸಿದರು.

Comments are closed.