ಕರ್ನಾಟಕ

ರಾಜ್ಯದಲ್ಲಿ ವರುಣನ ಆರ್ಭಟಕ್ಕೆ ಜನ ತತ್ತರ; ನೆರೆಯಿಂದ ಸಾವಿರಾರು ಮನೆಗಳು ಜಲಾವೃತ; ಜನಜೀವನ ಅಸ್ತವ್ಯಸ್ತ

Pinterest LinkedIn Tumblr

ಬೆಂಗಳೂರು: ಕರ್ನಾಟಕದಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನ ತತ್ತರಿಸಿ ಹೋಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಬಹುತೇಕ ಭಾಗಗಳಲ್ಲಿ ನೆರೆಯಿಂದಾಗಿ ಜನ ಹೊರ ಬಾರದ ಪರಿಸ್ಥಿತಿ ಬಂದೊದಗಿದ್ದು, ಸಾವಿರಾರು ಮನೆಗಳು ಜಲಾವೃತಗೊಂಡಿದೆ.

ಕಳೆದೆರಡು ದಿನಗಳಿಂದ ರಾಜ್ಯಾದ್ಯಂತ ಮಳೆಯಾಗುತ್ತಿರುವುದರಿಂದ ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇನ್ನೆರಡು ದಿನ ರೆಡ್ ಅಲರ್ಟ್​ ಘೋಷಣೆ ಮಾಡಲಾಗಿದೆ.

ಸೆ. 22ರವರೆಗೆ ರಾಜ್ಯದ ಬಹುತೇಕ ಕಡೆ ಮಳೆಯ ಅಬ್ಬರ ಮುಂದುವರೆಯಲಿದೆ. ಬೆಂಗಳೂರು, ಮೈಸೂರಿನಲ್ಲಿಯೂ ಮಳೆಯ ಅಬ್ಬರ ಹೆಚ್ಚಾಗಿದೆ. ಉತ್ತರ ಕರ್ನಾಟಕದಲ್ಲೂ ನಿನ್ನೆಯಿಂದ ಮಳೆಯ ಅಬ್ಬರ ಹೆಚ್ಚಾಗಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ. ಉಡುಪಿಯಲ್ಲಿ ಕಳೆದ 4 ದಶಕದಲ್ಲೇ ಅತಿಹೆಚ್ಚು ಮಳೆ ದಾಖಲಾಗಿದೆ.

ಕೊಡಗಿನಲ್ಲೂ ರೆಡ್ ಅಲರ್ಟ್​…
ಕೊಡಗು ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿದೆ. ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಉಡುಪಿ ಮತ್ತು ಕೊಡಗಿನಲ್ಲಿ ಸೆಪ್ಟೆಂಬರ್ 22ರವರೆಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಕೊಡಗು ಸೇರಿದಂತೆ ಮಲೆನಾಡಿನ ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ ಇದ್ದು, ಅಲ್ಲಲ್ಲಿ ಗುಡುಗು ಸಹಿತ ಸಾಧಾರಣದಿಂದ ಭಾರಿ ಮಳೆಯೂ ಸುರಿಯುವ ಸಾಧ್ಯತೆ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದರಿಂದ ಆರೆಂಜ್‌ ಮತ್ತು ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ಶನಿವಾರ ಮಧ್ಯಾಹ್ನದಿಂದಲೇ ಉತ್ತರಕನ್ನಡ, ದಕ್ಷಿಣಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಹಾಗೂ ಹಾಸನ ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗಿದೆ.

ಉತ್ತರ ಕರ್ನಾಟಕದಲ್ಲಿ ಮಳೆಯ ಅಬ್ಬರ…
ಉತ್ತರ ಕರ್ನಾಟಕದಲ್ಲೂ ಮಳೆ ಹೆಚ್ಚಾಗಿದ್ದು, ಇಂದು ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ, ಯಾದಗಿರಿಯಲ್ಲಿ ರೆಡ್ ಅಲರ್ಟ್​ ಘೋಷಿಸಲಾಗಿದೆ. ದಾವಣಗೆರೆ, ಮೈಸೂರು, ಚಾಮರಾಜನಗರ ಹಾಗೂ ಮಂಡ್ಯದಲ್ಲಿ ಸೆ. 23ರವರೆಗೆ ಮಳೆ ಮುಂದುವರಿಯಲಿದೆ. ಚಿಕ್ಕಮಗಳೂರಿನಲ್ಲಿ ಮಳೆ ಹೆಚ್ಚಾಗಿದ್ದು, ಶೃಂಗೇರಿಯ ಸುತ್ತಮುತ್ತ ಹಾಗೂ ಕುದುರೆಮುಖ ಭಾಗದಲ್ಲಿ ಸತತ ಮಳೆಯಾಗುತ್ತಿದ್ದು ತುಂಗಾ ನದಿಯ ಪ್ರವಾಹದ ನೀರು ಬೈಪಾಸ್ ರಸ್ತೆಗೆ ನುಗ್ಗಿದೆ. ಕೆವಿಆರ್ ರಸ್ತೆಗೆ ನೀರು ನುಗ್ಗಿದ್ದು, ಮಳೆ ಹೆಚ್ಚಾಗುತ್ತಿರುವುದರಿಂದ ತುಂಗಾ, ಭದ್ರಾ ಮತ್ತು ಹೇಮಾವತಿ ನದಿಗಳು ಉಕ್ಕಿ ಹರಿಯುತ್ತಿವೆ.

Comments are closed.