
ನಂದಗುಡಿ (ಬೆಂಗಳೂರು ಗ್ರಾಮಾಂತರ): ಶಿಕ್ಷಕರಿಬ್ಬರು ವಿದ್ಯಾರ್ಥಿನಿಯೊಂದಿಗೆ ವಾಟ್ಸ್‌ಆ್ಯಪ್‌ನಲ್ಲಿ ಅಸಭ್ಯ ಚಾಟಿಂಗ್ ಮಾಡಿದ್ದೇ ಅಲ್ಲದೆ, ಲೈಂಗಿಕ ದೌರ್ಜನ್ಯ ಎಸಗಿ, ಪ್ರಕರಣವನ್ನು ಪೊಲೀಸರು ಮುಚ್ಚಿ ಹಾಕಲು ಯತ್ನಿಸಿದ ಘಟನೆಯೊಂದು ವರದಿಯಾಗಿದೆ.
ನಂದಗುಡಿಯ ಖಾಸಗಿ ಶಾಲೆಯೊಂದರ ಶಿಕ್ಷಕರು 10ನೇ ತರಗತಿ ವಿದ್ಯಾರ್ಥಿನಿ ಮೊಬೈಲ್‌ಗೆ ಲೈಂಗಿಕ ಪ್ರಚೋದನಕಾರಿ ಸಂದೇಶಗಳನ್ನು ಕಳಿಸಿದ್ದಲ್ಲದೆ, ಬಾಲಕಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಶಿಕ್ಷಕ ಗಂಗರಾಜು 3 ಬಾರಿ ಬಾಲಕಿ ಮನೆಗೆ ಬಂದು ಲೈಂಗಿಕ ಕಿರುಕುಳ ನೀಡಿದ್ದಾನೆ.
ಲಾಕ್‌ಡೌನ್‌ನಿಂದಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಂದೂಡಿದ್ದರಿಂದ ಆನ್‌ಲೈನ್ ಮುಖೇನ ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಿದ್ದರು. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕಿಯ ಪೋಷಕರು ಪರೀಕ್ಷೆ ದೃಷ್ಟಿಯಿಂದ ಮೊಬೈಲ್ ಕೊಡಿಸಿದ್ದರು. ಈ ಸಂದರ್ಭದಲ್ಲಿ ಶಾಲೆಯ ಕನ್ನಡ ಶಿಕ್ಷಕರಿಬ್ಬರು ವಾಟ್ಸ್‌ಆ್ಯಪ್‌ನಲ್ಲಿ ವಿದ್ಯಾರ್ಥಿನಿ ಜತೆ ಅನುಚಿತವಾಗಿ ವರ್ತಿಸುತ್ತಿರುವ ವಿಚಾರ ಆಗಸ್ಟ್ 3 ರಂದು ಪೋಷಕರು ಮೊಬೈಲ್ ಪರಿಶೀಲಿಸಿದಾಗ ಪತ್ತೆಯಾಗಿದೆ.
ಪೋಷಕರು ಬಾಲಕಿಯನ್ನು ವಿಚಾರಿಸಿದಾಗ ಸಂಪೂರ್ಣ ಮಾಹಿತಿ ನೀಡಿದ್ದಾಳೆ. ಈ ಬಗ್ಗೆ ಆ.3ರಂದು ಪೋಷಕರು ನಂದಗುಡಿ ಪೊಲೀಸ್ ಠಾಣೆಗೆ ದೂರು ದಾಖಲಿಸಲು ಹೋದಾಗ, ನಿಮಗೆ ನ್ಯಾಯ ದೊರಕಿಸಿ ಕೊಡುತ್ತೇವೆ ಎಂದು ಹೇಳಿದ ಪೊಲೀಸರು, ಶಾಲೆಯ ಪದಾಧಿಕಾರಿಗಳಿಗೆ ಫೋನ್ ಮೂಲಕ ಮಾಹಿತಿ ನೀಡಿ, ರಾಜಿ ಮೂಲಕ ಪ್ರಕರಣ ಇತ್ಯರ್ಥಗೊಳಿಸುವಂತೆ ಪೋಷಕರನ್ನು ಶಾಲೆಗೆ ಕಳುಹಿಸಿದ್ದಾರೆ.
ಪೊಲೀಸ್ ಸಿಬ್ಬಂದಿ ಸಲಹೆಯಂತೆ ಪೋಷಕರು ಶಾಲೆಗೆ ಭೇಟಿ ನೀಡಿದ ವೇಳೆ, ಎಸ್‌ಡಿಎಂಸಿ ಪದಾಧಿಕಾರಿಗಳು ಹಾಗೂ ಶಿಕ್ಷಕ ವೃಂದದ ಸಮ್ಮುಖ ಚರ್ಚೆ ನಡೆಯಿತು. ಕೃತ್ಯದಲ್ಲಿ ಭಾಗಿಯಾದ ಶಿಕ್ಷಕರನ್ನು ಶಾಲೆಯಿಂದ ಬೇರೆಡೆಗೆ ವರ್ಗವಣೆ ಮಾಡಲು ಕ್ರಮ ಕೈಗೊಳ್ಳುತ್ತೇವೆ. ಈ ವಿಚಾರ ಬೆಳಕಿಗೆ ಬಂದರೆ ಶಾಲೆಯ ಮರ್ಯಾದೆ ಹಾಳಾಗುತ್ತದೆ ಎಂದು ಶಾಲೆಯ ಆಡಳಿತ ಮಂಡಳಿ ಪೋಷಕರನ್ನು ಸಂತೈೖಸಿ ಕಳುಹಿಸಿದ್ದರು.
ಪೋಷಕರು ಹಲವು ದಿನ ಕಾದರೂ ನ್ಯಾಯ ಸಿಗದೆ ಇದ್ದಾಗ ಮಹಿಳಾ ಆಯೋಗಕ್ಕೆ ಲಿಖಿತ ದೂರು ಸಲ್ಲಿಸಿದರು. ಕೃತ್ಯದ ಮಾಹಿತಿ ಅರಿತಿದ್ದ ಪೊಲೀಸ್ ಸಿಬ್ಬಂದಿ ಪ್ರಕರಣ ಮುಚ್ಚಿ ಹಾಕಲು ಹೊಸಕೋಟೆ ತಾಲೂಕು ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪ್ರಭಾವಿ ನಾಯಕನ ಮೂಲಕ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಒತ್ತಡ ತಂದರು ಎನ್ನಲಾಗಿದೆ.
ಪೋಷಕರು ತಮ್ಮ ಮಗಳಿಗಾದ ಅನ್ಯಾಯ ಬೇರೆ ಮಕ್ಕಳಿಗೂ ಆಗಬಾರದು. ಆರೋಪಿಗಳಿಗೆ ತಕ್ಕ ಶಿಕ್ಷೆ ಕೊಡಿಸಬೇಕೆಂದು 12.09.2020 ರಂದು ನಂದಗುಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು. ದೂರು ದಾಖಲಿಸುವಾಗ ಮತ್ತೊಬ್ಬ ಆರೋಪಿ ಶಿಕ್ಷಕನ ಹೆಸರು ಸೇರದಂತೆ ವ್ಯವಸ್ಥಿತವಾಗಿ ಮುಚ್ಚು ಹಾಕಿದ್ದಾರೆ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ.
ನಂದಗುಡಿ ಠಾಣೆಯಲ್ಲಿ ಮಹಿಳಾ ಆಯೋಗದ ಸೂಚನೆಯಂತೆ ಶಾಲೆಯ ಕನ್ನಡ ಶಿಕ್ಷಕ ಗಂಗರಾಜು ವಿರುದ್ಧ ಪೋಸ್ಕೊ ಕಾಯಿದೆ ಅಡಿ ಪ್ರಕರಣ ದಾಖಲಾಗಿದೆ.
Comments are closed.