ಕರ್ನಾಟಕ

ಡ್ರಗ್ಸ್​ ಕುರಿತ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ: ಗೃಹ ಸಚಿವ ಬಸವರಾಜ ಬೊಮ್ಮಾಯಿ

Pinterest LinkedIn Tumblr


ಬೆಂಗಳೂರು: ಡ್ರಗ್​ ಮಾಫಿಯಾ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ತಾರ್ಕಿಕ ಅಂತ್ಯ ನೀಡುತ್ತೇವೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಇಂದು ಸುದ್ದಿಗಾರರ ಜತೆ ಮಾತನಾಡಿ, ತನಿಖೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ. ಪೊಲೀಸರು ಸ್ವತಂತ್ರ್ಯವಾಗಿ ತನಿಖೆ ನಡೆಸುತ್ತಿರುವುದರಿಂದ ಹೊಸಹೊಸ ವಿಷಯಗಳು ಬೆಳಕಿಗೆ ಬರುತ್ತಿವೆ. ದಿನಕ್ಕೊಂದು ಹೊಸ ಸಾಕ್ಷಿ ಸಿಗುತ್ತಿವೆ. ಮುಕ್ತವಾಗಿ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದರಿಂದ ಹಲವಾರು ಮಂದಿ ಪ್ರಕರಣದಲ್ಲಿ ಸಿಕ್ಕಿಬೀಳುತ್ತಿದ್ದಾರೆ ಎಂದು ಹೇಳಿದರು.

ಹೊರರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಡ್ರಗ್ಸ್​ ಪೂರೈಕೆ ಆಗುತ್ತಿರುವುದು ಬೆಳಕಿಗೆ ಬಂದಿದೆ. ಗಡಿಭಾಗದ ಜಿಲ್ಲೆಗಳಲ್ಲಿನ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠರಿಗೆ ಸದಾ ನಿಗಾ ಇಡುವಂತೆ ಸೂಚಿಸಲಾಗಿದೆ. ಚೆಕ್​ಪೋಸ್ಟ್, ಹೆದ್ದಾರಿಗಳಲ್ಲಿ ತಪಾಸಣೆ ಬಿಗಿಗೊಳಿಸಲಾಗುವುದು. ನೆರೆಯ ರಾಜ್ಯಗಳ ಹಾಗೂ ಗಡಿ ರಾಜ್ಯಗಳ ಪೊಲೀಸ್ ಅಧಿಕಾರಿಗಳ ಜತೆ ನಿರಂತರವಾಗಿ ಸಂಪರ್ಕದಲ್ಲಿರುವಂತೆ ಡಿಜಿಗೆ ಸೂಚಿಸಲಾಗಿದೆ. ಮಾದಕ ವಸ್ತುಗಳು ರಾಜ್ಯಕ್ಕೆ ಸರಬರಾಜಾಗದಂತೆ ಎಲ್ಲ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.

ಡ್ರಗ್ಸ್ ಹಾವಳಿಯನ್ನು ಕಾನೂನಿನ ಮೂಲಕ ಮಟ್ಟ ಹಾಕಲು ಎಷ್ಟು ಸಾಧ್ಯವೋ ಅಷ್ಟು ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಹೇಳಿದರು.

ಸಿಸಿಬಿ ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಿದ್ದಾರೆ.ಇದರಲ್ಲಿ ಯಾವುದೇ ರಾಜಕೀಯ ಒತ್ತಡ ಇಲ್ಲ. ಪೊಲೀಸರು ತಮ್ಮನ್ನು ಬಂಧಿಸಬಹುದೆಂಬ ಭಯದಿಂದಾಗಿ ಕೆಲವರು ಬೆಂಗಳೂರು ಬಿಟ್ಟು ಬೇರೆ ಬೇರೆ ಭಾಗದಲ್ಲಿ ತಲೆಮರೆಸಿಕೊಂಡಿದ್ದಾರೆ. ಅವರ ಬಂಧನಕ್ಕೂ ತನಿಖಾ ತಂಡ ಕಾರ್ಯೋನ್ಮುಖವಾಗಿದೆ ಎಂದು ತಿಳಿಸಿದರು.

Comments are closed.