ಕರ್ನಾಟಕ

ಪ್ರತ್ಯೇಕ ಟಿವಿ ವಾಹಿನಿ ಪ್ರಾರಂಭಿಸಲು ಚಿಂತನೆ: ವಾರ್ತಾ ಇಲಾಖೆ ಆಯುಕ್ತ ಹರ್ಷ

Pinterest LinkedIn Tumblr

ಹಾಸನ: ಸರಕಾರ ಮಾಡುತ್ತಿರುವ ಜನಪರ ಕಾರ್ಯಕ್ರಮಗಳ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಪ್ರತ್ಯೇಕ ಟಿವಿ ವಾಹಿನಿಯನ್ನು ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆ. ಈ ಸಂಬಂಧ ಸಿದ್ಧತೆ ಮಾಡಿಕೊಳ್ಳಲು ಅಧಿಕಾರಿಗಳು ಪೂರಕ ಪ್ರಯತ್ನಗಳು ಆರಂಭಿಸಬೇಕಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾದ ಡಾ. ಪಿ.ಎಸ್.ಹರ್ಷ ತಿಳಿಸಿದ್ದಾರೆ.

ಹಾಸನ ಜಿಲ್ಲಾ ಕಚೇರಿಗೆ ಭೇಟಿ ನೀಡಿ ಪರಿಶೀಲನೆ‌‌ ನಡೆಸಿದ ಅವರು ಸರಕಾರ ಸಾಕಷ್ಟು ಅಭಿವೃದ್ಧಿ ಕಾರ್ಯಗಳು, ಸಕಾರಾತ್ಮಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಅವುಗಳನ್ನು ಜನರಿಗೆ ತಲುಪಿಸಬೇಕಿದೆ .ಹಲವು ಜಾಗೃತಿ, ಅರಿವಿನ ಚಟುವಟಿಕೆಗಳನ್ನು ಮಾಡಬೇಕಿದೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಇ-ಬುಕ್ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಲಾಗುತ್ತಿದ್ದು, ಅದರ ಬಗ್ಗೆ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕು.
ಕೋವಿಡ್‌-19 ನಿಯಂತ್ರಣ ಕ್ರಮಗಳು, ಯಶೋಗಾಥೆಗಳ ಬಗ್ಗೆ ಪ್ಯಾನಲ್ ಚರ್ಚೆಗಳನ್ನು ಏರ್ಪಡಿಸಬೇಕು. ತಮ್ಮ ಕಾರ್ಯಕ್ಷಮತೆಯನ್ನು ಅಧಿಕಾರಿಗಳು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಅವರು ಹೇಳಿದರು.

ಯಾವುದೇ ಸಮಸ್ಯೆ ಇದ್ದರೂ, ತಮ್ಮ ಗಮನಕ್ಕೆ ತರುವಂತೆ ತಿಳಿಸಿದ ಅವರು ಮುಂದಿನ ದಿನಗಳಲ್ಲಿ ಇಲಾಖೆಯನ್ನು ಇನ್ನಷ್ಟು ಬಲ ಪಡಿಸಲಾಗುವುದು ಎಂದರು. ಯಾವುದೇ ಕಡತವನ್ನು ಬಾಕಿ ಇರಿಸಿಕೊಳ್ಳದೇ ತ್ವರಿತವಾಗಿ ವಿಲೇವಾರಿ ಮಾಡಬೇಕು. ಸಾಮಾಜಿಕ ಜಾಲತಾಣವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ಪತ್ರಕರ್ತರ ಮಾಸಾಶನ, ಅರೋಗ್ಯ ಕಾರ್ಡ್ ಸೇರಿದಂತೆ ಇತರೆ ಪತ್ರಕರ್ತರ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನವನ್ನು ಸಮರ್ಪಕವಾಗಿ ಮಾಡಬೇಕು ಎಂದು ತಿಳಿಸಿದರು.

ರಾಜ್ಯ ವ್ಯಾಪ್ತಿಯಲ್ಲಿ ವಾರ್ತಾ ಇಲಾಖೆಯ ಆಸ್ತಿಗಳನ್ನು ಗುರುತಿಸಲು ಎಲ್ಲಾ ಜಿಲ್ಲಾ ವಾರ್ತಾಧಿಕಾರಿಗಳ ಜೊತೆ ಸಮನ್ವಯ ಮಾಡಿಕೊಂಡು ವರದಿಯನ್ನು ನೀಡುವಂತೆ ಹಾಸನ ಜಿಲ್ಲೆಯ ಹಿರಿಯ ಸಹಾಯಕ ನಿರ್ದೇಶಕರಾದ ವಿನೋದ್ ಚಂದ್ರ ಅವರಿಗೆ ಸೂಚನೆ ನೀಡಿದ ಆಯುಕ್ತರು, ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ವೃತ್ತಿಪರ ತರಬೇತಿಯನ್ನು ನೀಡಲು ಯೋಜನೆ ರೂಪಿಸಿ ಪ್ರಸ್ತಾವನೆ ಸಿದ್ದಪಡಿಸುವಂತೆ ಅವರು ತಿಳಿಸಿದರು.
ಈ ವೇಳೆ ಸಹಾಯಕ ನಿರ್ದೇಶಕರಾದ ಮೀನಾಕ್ಷಮ್ಮ ಸೇರಿದಂತೆ ಸಿಬ್ಬಂದಿ ವರ್ಗ ಹಾಜರಿದ್ದರು.

Comments are closed.