ಬೆಂಗಳೂರು: ಕೊರೊನಾ ಆತಂಕದಲ್ಲಿಯೇ ವಿಧಾನಮಂಡಲ ಅಧಿವೇಶನ ನಡೆಸಲು ಸರಕಾರ ತೀರ್ಮಾನಿಸಿದ್ದು, ಸೆಪ್ಟೆಂಬರ್ 21 ರಿಂದ 30ರವರೆಗೆ ಒಟ್ಟು 10 ದಿನಗಳ ಕಾಲ ಅಧಿವೇಶನ ನಡೆಯಲಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಯಿತು.
ಸಚಿವ ಸಂಪುಟ ಸಭೆ ನಂತರ ಈ ಬಗ್ಗೆ ಮಾಹಿತಿ ನೀಡಿದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ.ಮಾಧುಸ್ವಾಮಿ, ಸೆಪ್ಟೆಂಬರ್ 21 ರಿಂದ 30ರವರೆಗೆ ಒಟ್ಟು 10 ದಿನಗಳ ಕಾಲ ಅಧಿವೇಶನ ನಡೆಯಲಿದೆ. ಅಧಿವೇಶನ ನಡೆಸುವ ವಿಚಾರವಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ವಿಧಾನ ಪರಿಷತ್ ಸಭಾಪತಿಗಳ ಜೊತೆಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.
ಅಗತ್ಯ ಬಿದ್ದರೆ ಅಧಿವೇಶನವನ್ನು ಎರಡು ದಿನ ವಿಸ್ತರಣೆ ಮಾಡಲಾಗುವುದು ಎಂದು ಮಾಧುಸ್ವಾಮಿ ಹೇಳಿದ್ದಾರೆ. ಇನ್ನು, ಮಾರ್ಚ್‌ನಲ್ಲಿ ಅಧಿವೇಶನ ನಡೆದಿದ್ದು, ಸೆಪ್ಟೆಂಬರ್ ಒಳಗೆ ಅಧಿವೇಶನ ನಡೆಸಬೇಕಾಗಿದೆ. ಆರ್ಟಿಕಲ್ 174ರ ಪ್ರಕಾರ ಎರಡು ಅಧಿವೇಶನಗಳ ನಡುವೆ 6 ತಿಂಗಳಿಗಿಂತ ಹೆಚ್ಚಿನ ಅಂತರ ಇರಬಾರದು ಎಂಬ ನಿಯಮವಿದೆ. ಆದ್ದರಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಆದರೆ, ಕೊರೊನಾ ಭೀತಿ ಹಿನ್ನೆಲೆ ಅಧಿವೇಶನ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಸರಕಾರಕ್ಕೆ ದೊಡ್ಡ ತಲೆನೋವಾಗುವ ಸಾಧ್ಯತೆ ಇದೆ. ಕೊರೊನಾ ಪರಿಸ್ಥಿತಿ ಹಿನ್ನೆಲೆ ಅಧಿವೇಶನ ಹೇಗೆ ನಡೆಸುವುದು..? ಎಲ್ಲಿ ನಡೆಸುವುದು ಎಂಬುದರ ಬಗ್ಗೆ ಮಾಹಿತಿ ನೀಡಲು ಈಗಾಗಲೇ ಅಧಿಕಾರಿಗಳಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚಿಸಿದ್ದಾರೆ. ಸಚಿವರು ಮತ್ತು ಶಾಸಕರಿಗಾಗಿ ಯಾವ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎನ್ನುವುದರ ಬಗ್ಗೆ ಸರಕಾರ ಯೋಜನೆ ರೂಪಿಸುತ್ತಿದೆ.
ಶಾಸಕರು ಕೂರುವ ಕುರ್ಚಿಗಳ ನಡುವೆ ಗ್ಲಾಸ್‌ನ ಶೀಲ್ಡ್ ಅಳವಡಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು. ಶಾಸಕರು ಕುಳಿತುಕೊಳ್ಳುವ ಆಸನಗಳ ಮಧ್ಯೆ ಅಂತರ ಕಾಯ್ದು ಕೊಳ್ಳಬೇಕಾಗಿರುವುದು ಅನಿವಾರ್ಯವಾಗಿದ್ದು, ಈ ಬಾರಿಯ ಅಧಿವೇಶನ ಯಾವ ರೀತಿ ನಡೆಯುತ್ತದೆ ಎಂಬ ಕುತೂಹಲ ಎಲ್ಲರಲ್ಲಿದೆ.
Comments are closed.