
ಬೆಂಗಳೂರು (ಆಗಸ್ಟ್ 18): ಡಿಜೆ ಹಳ್ಳಿ ಗಲಭೆ ವೇಳೆ ಪೊಲೀಸರ ಗುಂಡೇಟಿಗೆ ನಾಲ್ವರು ಬಲಿಯಾಗಿದ್ದರು. ಮತ್ತೋರ್ವ ವ್ಯಕ್ತಿ ಗುಂಡೆಟು ತಿಂದರೂ ಅಲ್ಲಿಂದ ತಪ್ಪಿಸಿಕೊಂಡಿದ್ದ. ಅಚ್ಚರಿಯ ವಿಚಾರ ಎಂದರೆ, ಗುಂಡೇಟಿನ ನೋವು, ರಕ್ತ ಸಿಕ್ತ ದೇಹ ಇಟ್ಟುಕೊಂಡು ಬರೋಬ್ಬರಿ 13 ಕಿಲೋಮೀಟರ್ ಓಡಿದ್ದ.
ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಸಂಬಂಧಿ ಫೇಸ್ಬುಕ್ನಲ್ಲಿ ಹಾಕಿದ್ದ ಅವಹೇಳನಾಕಾರಿ ಪೋಸ್ಟ್ನಿಂದ ಕೆಲವರು ಸಿಟ್ಟಿಗೆದ್ದಿದ್ದರು. ಅಖಂಡ ಶ್ರೀನಿವಾಸ ಮನೆ ಮೇಲೆ ಹಾಗೂ ಪೋಲಿಸ್ ಠಾಣೆಯನ್ನು ಧ್ವಂಸ ಮಾಡಿದ್ದರು. ಈ ಗಲಭೆ ನಿಯಂತ್ರಿಸಲು ಪೊಲೀಸರು ಗುಂಡು ಹಾರಿಸಿದ್ದರು. ಈ ವೇಳೆ ಸ್ಥಳದಲ್ಲೇ ಮೂವರು ಸತ್ತಿದ್ದರು. ಮತ್ತೋರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಇಮ್ರಾನ್ ಪಾಷ ಎಂಬಾತ ಗುಂಡೇಟು ತಿಂದರೂ 13 ಕಿಲೋಮೀಟರ್ ಓಡಿದ್ದ.
ಇಮ್ರಾನ್ ಪಾಷ ಗುಂಡು ದೇಹ ಹೊಕ್ಕಿದ್ದರೂ ಸಂಜಯಗಾಂಧಿ ಅಸ್ಪತ್ರೆ ವರೆಗೆ ಓಡಿಯೇ ಸಾಗಿದ್ದ. ನಂತರ ಅಲ್ಲಿಯೇ ದಾಖಲಾಗಿದ್ದ. ಆಸ್ಪತ್ರೆಗೆ ದಾಖಲಾಗಿ ವೈದ್ಯರಿಗೆ ಕಥೆ ಕಟ್ಟಿದ್ದ. ಗೇಟ್ ಮೇಲೆ ಬಿದ್ದಿದ್ದೇನೆ ಎಂದು ಎಲ್ಲರೂ ನಂಬುವಂಥ ಕಥೆ ಹೇಳಿದ್ದ.
ಇಮ್ರಾನ್ ಪಾಷಾನ ದೇಹದ ಎಕ್ಸ್ರೇ ಮಾಡಿದಾಗ ವೈದ್ಯರಿಗೆ ಶಾಕ್ ಕಾದಿತ್ತು. ಇಮ್ರಾನ್ ಎದೆ ಒಳಗೆ ಗುಂಡ ಇರುವ ವಿಚಾರ ಪತ್ತೆ ಆಗಿತ್ತು. ಕೂಡಲೇ ಸಂಜಯ್ ಗಾಂಧಿ ಅಸ್ಪತ್ರೆ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ಪರಿಶೀಲನೆ ವೇಳೆ ಗುಂಡೇಟು ತಿಂದಿರುವುದು ಸಾಬೀತಾಗಿದೆ. ಪೊಲೀಸರು ಸ್ಥಳಕ್ಕೆ ಬಂದಾಗ ನಿಜ ವಿಚಾರ ಗೊತ್ತಾಗಿದೆ. ಸದ್ಯ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿಯೇ ಇಮ್ರಾನ್ ಪಾಷಗೆ ಶಸ್ತ್ರಚಿಕಿತ್ಸೆ ಮಾಡಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
Comments are closed.