ಕರ್ನಾಟಕ

ರಾಜ್ಯದ ಹಲವೆಡೆ 3 ದಿನ ಭಾರೀ ಮಳೆ

Pinterest LinkedIn Tumblr


ಬೆಂಗಳೂರು (ಆ. 17): ಕರ್ನಾಟಕದಲ್ಲಿ ಐದಾರು ದಿನಗಳಿಂದ ಮಳೆಯ ಅಬ್ಬರ ಕಡಿಮೆಯಾಗಿತ್ತು. ಆದರೆ, ನಿನ್ನೆಯಿಂದ ಮತ್ತೆ ಮಳೆ ಬಿರುಸು ಪಡೆದುಕೊಂಡಿದೆ. ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗಿದೆ. ಇಂದು ಕೂಡ ರಾಜ್ಯದಲ್ಲಿ ಮಳೆ ಹೆಚ್ಚಾಗಲಿದ್ದು, ಕರಾವಳಿ ಜಿಲ್ಲೆಗಳು, ಕೊಡಗು, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಇಂದು ಯೆಲ್ಲೋ ಅಲರ್ಟ್​ ಘೋಷಣೆ ಮಾಡಲಾಗಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಪ್ರಮುಖವಾಗಿ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಇನ್ನು ಮೂರು ದಿನ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ಕರ್ನಾಟಕದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಕೊಡಗು, ವಿಜಯಪುರ, ಯಾದಗಿರಿ, ರಾಯಚೂರು, ಕೊಪ್ಪಳ, ಕಲಬುರ್ಗಿ, ಹಾವೇರಿ, ಧಾರವಾಡ, ಬೆಳಗಾವಿ, ಗದಗ, ಬಾಗಲಕೋಟೆಯಲ್ಲಿ ಇಂದು ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ, ಈ ಜಿಲ್ಲೆಗಳಲ್ಲಿ ಇಂದು ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಮಹಾರಾಷ್ಟ್ರದಲ್ಲಿ 2 ದಿನಗಳಿಂದ ಭಾರೀ ಮಳೆಯಾಗುತ್ತಿರುವುದರಿಂದ ಮತ್ತು ರಾಜ್ಯದಲ್ಲೂ ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ರಾಯಚೂರು ಜಿಲ್ಲೆಗಳಲ್ಲಿ ಈ ಬಾರಿಯೂ ಪ್ರವಾಹದ ಭೀತಿ ಎದುರಾಗಿದೆ.

ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಆ. 19ರವರೆಗೆ ಮಳೆಯ ಪ್ರಮಾಣ ಹೆಚ್ಚಾಗಲಿದೆ. ಹೀಗಾಗಿ, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಮಲೆನಾಡಿನ ಜಿಲ್ಲೆಯಾದ ಚಿಕ್ಕಮಗಳೂರಿನಲ್ಲೂ ಮಳೆಯ ಅಬ್ಬರ ಜೋರಾಗಿದೆ. ಭಾರೀ ಗಾಳಿ ಮಳೆಗೆ ಮೂಡಿಗೆರೆ ತಾಲೂಕಿನ ಹೊರಟ್ಟಿ ಹಾಗೂ ಕಲ್ಮನೆ ಗ್ರಾಮದಲ್ಲಿ ಎರಡು ಮನೆಗಳು ಸಂಪೂರ್ಣ ಜಖಂಗೊಂಡಿವೆ.

ಕೊಡಗಿನಲ್ಲಿ ಕೂಡ ನಿನ್ನೆಯಿಂದ ಮಳೆಯ ಪ್ರಮಾಣ ಮತ್ತೆ ಹೆಚ್ಚಳವಾಗಿದೆ. ಇಂದು ಮತ್ತು ನಾಳೆ ಕೊಡಗಿನಲ್ಲಿ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಉತ್ತರ ಕರ್ನಾಟಕದಲ್ಲಿ ಮಳೆ ಹೆಚ್ಚಾಗಿರುವುದರಿಂದ ಘಟಪ್ರಭಾ, ಕೃಷ್ಣಾ, ಮಲಪ್ರಭಾ ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಹಲವು ಸೇತುವೆಗಳು ಮುಳುಗಿವೆ. ಮಹಾರಾಷ್ಟ್ರದಲ್ಲಿ ಮಳೆ ಹೆಚ್ಚಾಗಿರುವುದರಿಂದ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ. ಇದರಿಂದ ಉತ್ತರ ಕರ್ನಾಟಕದಲ್ಲಿ ಪ್ರವಾಹದ ಭೀತಿ ಎದುರಾಗಿದೆ.

…………………………

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಕಳೆದ ಎರಡು ದಿನಗಳಿಂದ ರಾತ್ರಿ ವೇಳೆ ಬೀಸುತ್ತಿರುವ ಭಾರೀ ಗಾಳಿ ಜೊತೆಗೆ ಗುಡುಗು ಸಹಿತ ಧಾರಾಕಾರ ಮಳೆ ಸುರಿಯುತ್ತಿದೆ. ಇದರಿಂದಾಗಿ ಜನಜೀವವ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಇನ್ನು ಭಾರೀ ಗಾಳಿ ಮಳೆಗೆ ಮೂಡಿಗೆರೆ ತಾಲೂಕಿನ ಹೊರಟ್ಟಿ ಹಾಗೂ ಕಲ್ಮನೆ ಗ್ರಾಮದಲ್ಲಿ ಎರಡು ಮನೆಗಳು ಸಂಪೂರ್ಣ ಜಖಂಗೊಂಡಿವೆ.

ಹೊರಟ್ಟಿ ಗ್ರಾಮದ ವಸಂತ ಪೂಜಾರಿ ಎಂಬುವರ ಮನೆಗೆ ಶೀತ ಹೆಚ್ಚಾಗಿದ್ದು ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದು, ಮನೆಯ ಅರ್ಧ ಭಾಗ ಕುಸಿದು ಬಿದ್ದಿದೆ. ಭಾನುವಾರ ಬೆಳಗಿನ ಜಾವ 3.30ಕ್ಕೆ ಭಾರೀ ಗಾಳಿಯೊಂದಿಗೆ ಸುರಿದ ಧಾರಾಕಾರ ಮಳೆಗೆ ಮನೆಯ ಗೋಡೆ ಹಾಗೂ ಮೇಲ್ಛಾವಣಿ ಕುಸಿದು ಬಿದ್ದಿದೆ. ಶಬ್ಧ ಬರುತ್ತಿದ್ದಂತೆ ಮನೆಯಲ್ಲಿದ್ದ ಮೂವರು ಓಡಿ ಬಂದು ಜೀವ ಉಳಿಸಿಕೊಂಡಿದ್ದಾರೆ.

ಶೀತ ಹೆಚ್ಚಾಗಿ ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದು ಮತ್ತೆ ಮಳೆಯಾದರೆ ಮನೆ ಸಂಪೂರ್ಣ ಕುಸಿಯುವ ಭೀತಿಯಲ್ಲಿ ವಸಂತ್ ಪೂಜಾರಿ ಕುಟುಂಬವಿದೆ. ಜೊತೆಗೆ ತಾಲೂಕಿನ ಕಲ್ಮನೆ ಗ್ರಾಮದ ರವಿ ಎಂಬುವರ ಮನೆಯ ಗೋಡೆ ಕೂಡ ಕುಸಿದು ಬಿದ್ದಿದೆ. ಶನಿವಾರ ರಾತ್ರಿ 11.30ಕ್ಕೆ ಗೋಡೆ ಕುಸಿದು ಬಿದ್ದಿದ್ದು, ಮನೆಯಲ್ಲಿ ಮಲಗಿದ್ದ ರತ್ನ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಇನ್ನು ಕಳೆದ ಎರಡು ದಿನಗಳಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ರಾತ್ರಿ ವೇಳೆಯಲ್ಲಿ ಭಾರೀ ಗುಡುಗು ಸಹಿತ ಮಳೆ ಜೊತೆ ಗಾಳಿ ಬೀಸುತ್ತಿದ್ದು, ಮಲೆನಾಡಿಗರು ಆತಂಕಕ್ಕೀಡಾಗಿದ್ದಾರೆ. ಆಗಸ್ಟ್ ಮೊದಲ ವಾರದಲ್ಲಿ ಸುರಿದ ಮಳೆ ಐದೇ ದಿನಕ್ಕೆ ಮಲೆನಾಡಿಗರಲ್ಲಿ ಆತಂಕ ಹುಟ್ಟಿಸಿತ್ತು.

ಇದೀಗ, ಎರಡು ದಿನಗಳಿಂದ ರಾತ್ರಿ ವೇಳೆ ಸುರಿಯುತ್ತಿರುವ ಭಾರೀ ಮಳೆಗಾಳಿ ಮಲೆನಾಡಿಗರಲ್ಲಿ ಭಯ ಹುಟ್ಟಿಸಿದೆ. ಇನ್ನು ಭಾನುವಾರ ರಾತ್ರಿ ಕೂಡ ಮಳೆಯ ಆರ್ಭಟ ಜೋರಾಗಿದ್ದು ಮಳೆಯ ಆರ್ಭಟಕ್ಕೆ ಮಲೆನಾಡಿಗರು ಮತ್ತೆ ಆತಂಕ ಮೂಡಿಸಿದೆ.

Comments are closed.