ಮುಂಬೈ: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಇಬ್ಬರು ಆರೋಪಿಗಳಿಗೆ ಕೋರ್ಟ್ ಗಲ್ಲು ಶಿಕ್ಷೆ ವಿಧಿಸುತ್ತಿದ್ದಂತೆಯೇ ಪೊಲೀಸ್ ಠಾಣೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಇಡೀ ಠಾಣೆಯನ್ನು ದೀಪಗಳಿಂದ ಅಲಂಕರಿಸಿ ಹಬ್ಬದಂತೆ ಕಂಗೊಳಿಸುವಂತೆ ಮಾಡಲಾಗಿತ್ತು.
ಇಂಥದ್ದೊಂದು ಘಟನೆ ನಡೆದಿರುವುದು ಮಹಾರಾಷ್ಟ್ರದ ಬುಲ್ಖಾನದಲ್ಲಿ. ಇಲ್ಲಿಯ ಸೆಷನ್ಸ್ ಕೋರ್ಟ್ ಸಾಗರ್ ಮತ್ತು ನಿಖಿಲ್ ಎಂಬುವವರಿಗೆ ಮರಣದಂಡನೆ ವಿಧಿಸಿದ್ದಕ್ಕೆ ಈ ಸಂಭ್ರಮ ಠಾಣೆಯಲ್ಲಿ ನಡೆದಿತ್ತು.
2019ರ ಏಪ್ರಿಲ್ 26ರಂದು ಈ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಸಂತ್ರಸ್ತೆಯ ತಂದೆ ಚಿಕ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ತಕ್ಷಣವೇ ಕಾರ್ಯೋನ್ಮುಖರಾಗಿದ್ದ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿ, ಶೀಘ್ರದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆಯ ಸೆಕ್ಷನ್ 376 ರ ಅಡಿ ಇಬ್ಬರು ಆರೋಪಿಗಳಿಗೆ ಗಲ್ಲುಶಿಕ್ಷೆ ಘೋಷಿಸಿತು.
ಇದರಿಂದ ಸಂತ್ರಸ್ತೆಯ ಕುಟುಂಬಸ್ಥರಿಗೆ ನ್ಯಾಯ ದೊರಕಿಸಿ ಕೊಟ್ಟ ಖುಷಿಯಲ್ಲಿ ಪೊಲೀಸರು, ಪೊಲೀಸ್ ಠಾಣೆಯನ್ನು ಸಿಂಗರಿಸಿ, ಠಾಣೆಯ ಮುಂದೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ತೀರ್ಪಿನ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅಪರಾಧಿಗಳಿಗೆ ಇನ್ನೂ ಸಮಯ ಇರುವುದರಿಂದ ಅವರ ಗಲ್ಲಿಗೇರಿಸುವ ದಿನಾಂಕವನ್ನು ನ್ಯಾಯಾಲಯ ನಿಗದಿಪಡಿಸಿಲ್ಲ.
Comments are closed.