
ಚಿಕ್ಕಮಗಳೂರು(ಆಗಸ್ಟ್.12): ಕಾಫಿನಾಡಿನಲ್ಲಿ ಕಳೆದೊಂದು ವಾರ ಅಬ್ಬರಿಸಿದ ಮಳೆ ಇದೀಗ ಶಾಂತವಾಗಿದ್ದು, ಮಲೆನಾಡಿನಲ್ಲಿ ಜನಜೀವನ ಸಹಜಸ್ಥಿತಿಯತ್ತ ಮರುಳುತ್ತಿದೆ. ಮಲೆನಾಡು ಭಾಗದಲ್ಲಿ ಸಾಧಾರಣ ಮಳೆಯಾಗುತ್ತಿದ್ದರೇ, ಬಯಲು ಭಾಗದಲ್ಲಿ ಆಗೀಗ ತುಂತುರು ಮಳೆಯಾಗುತ್ತಿದೆ.
ಜಿಲ್ಲೆಯಲ್ಲಿ ಕಳೆದ ಒಂದು ವಾರ ಧಾರಾಕಾರ ಮಳೆಯಾಗಿದ್ದು, ನಿರಂತರವಾಗಿ ಸುರಿದ ಧಾರಾಕಾರ ಮಳೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರೀ ಹಾನಿ ಉಂಟಾಗಿತ್ತು. ಮಲೆನಾಡಿನ ಪ್ರಮುಖ ನದಿಗಳಾದ ಹೇಮಾವತಿ, ತುಂಗಾ, ಭದ್ರಾ ನದಿಗಳು ಅಪಾಯದ ಮಟ್ಟದಲ್ಲಿ ಹರಿದ ಪರಿಣಾಮ ನದಿ ಪಾತ್ರದ ಹೊಲ, ಗದ್ದೆ, ತೋಟಗಳು ಜಲಾವೃತಗೊಂಡಿದ್ದವು. ಮಲೆನಾಡು ಭಾಗದಲ್ಲಿ ಕೆಲ ಪ್ರಮುಖ ರಸ್ತೆ ಮಾರ್ಗಗಳು ಬಂದ್ ಆಗಿದ್ದು, ನೂರಕ್ಕೂ ಹೆಚ್ಚು ಮನೆಗಳು ಜಖಂಗೊಂಡಿದ್ದವು. ಅಲ್ಲದೇ ಮಳೆ ಸೃಷ್ಟಿಸಿದ ಅವಾಂತರಗಳಿಂದಾಗಿ ಜಿಲ್ಲೆಯಲ್ಲಿ ಒಂದೇ ವಾರದಲ್ಲಿ ಐವರು ಮೃತಪಟ್ಟಿದ್ದರು.
ಚಾರ್ಮಾಡಿ ಮಾರ್ಗವಾಗಿ ಚಿಕ್ಕಮಗಳೂರು-ಮಂಗಳೂರು ಸಂಪರ್ಕದ ಹೆದ್ದಾರಿ ಒಂದು ವಾರದ ಕಾಲ ಬಂದ್ ಮಾಡಲಾಗಿತ್ತು. ಇದೀಗ ಜಿಲ್ಲೆಯಾದ್ಯಂತ ಮಳೆಯ ಆರ್ಭಟ ಕಡಿಮೆಯಾಗಿದ್ದು, ಮಲೆನಾಡು ಭಾಗದ ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ತಾಲೂಕು ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಗುತ್ತಿದ್ದರೇ, ಚಿಕ್ಕಮಗಳೂರು, ಕಡೂರು, ತರೀಕೆರೆ ತಾಲೂಕುಗಳ ವ್ಯಾಪ್ತಿಯಲ್ಲಿ ಆಗೀಗ ತುಂತುರು ಮಳೆಯಾಗುತ್ತಿದೆ.
ಮಂಗಳವಾರ ಜಿಲ್ಲಾದ್ಯಂತ ಮೋಡ ಕವಿದ ವಾತಾವರಣ ಇತ್ತಾದರೂ ಎಲ್ಲೂ ಭಾರೀ ಮಳೆಯಾದ ಬಗ್ಗೆ ವರದಿಯಾಗಿಲ್ಲ. ಮಳೆಯ ಆರ್ಭಟ ಕಡಿಮೆಯಾಗಿರುವುದರಿಂದ ಜಿಲ್ಲಾದ್ಯಂತ ಜನಜೀವನ ಸಹಜಸ್ಥಿತಿಯ ಮರುಳುತ್ತಿದೆ. ಬಾಳೆ ಹೊನ್ನೂರು, ಕೊಪ್ಪ, ನರಸಿಂಹರಾಜಪುರ, ಮೂಡಿಗೆರೆ ವ್ಯಾಪ್ತಿಯಲ್ಲಿ ಹರಿಯುವು ತುಂಗಾ, ಭದ್ರಾ, ಹೇಮಾವತಿ ನದಿಗಳಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು, ಜಲಾವೃತಗೊಂಡಿದ್ದ ಹೊಲ, ಗದ್ದೆ, ಕಾಫಿ, ಅಡಿಕೆ ತೋಟಗಳಲ್ಲಿ ನೀರು ಇಳಿಕೆಯಾಗಿದೆ. ಜಿಲ್ಲಾಡಳಿತ ಹದಗೆಟ್ಟ ರಸ್ತೆ, ಸೇತುವೆಗಳ ದುರಸ್ತಿಗೆ ಮುಂದಾಗಿದ್ದು, ಜಖಂಗೊಂಡಿದ್ದ ಮನೆಗಳ ಮಾಹಿತಿ ಸಂಗ್ರಹಿಸಿ ಪರಿಹಾರ ವಿತರಣೆಗೆ ಕ್ರಮವಹಿಸಿದೆ.
ಸಚಿವ ಸಿ.ಟಿ.ರವಿ ಭೇಟಿ, ಪರಿಶೀಲನೆ :
ಮಲೆನಾಡಲ್ಲಿ ಸುರಿದ ಧಾರಾಕಾರ ಮಳೆಯಿಂದ ಸಾಕಷ್ಟು ಬೆಳೆ, ರಸ್ತೆ, ಮನೆಗಳು ಹಾನಿಯಾಗಿದ್ದು, ಅಂತಹ ಹಾನಿಯಾದ ಪ್ರದೇಶಕ್ಕೆ ಉಸ್ತುವಾರಿ ಸಚಿವ ಸಿ.ಟಿ.ರವಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಿಕ್ಕಮಗಳೂರು ತಾಲೂಕಿನ ಅಂಡುವಾನೆ ಗ್ರಾಮದಲ್ಲಿ ಭದ್ರಾ ಹಿನ್ನೀರಿನಲ್ಲಿ ಕಾಲು ಜಾರಿ ಬಿದ್ದು ಶಂಕರ್ ಎಂಬ ವ್ಯಕ್ತಿ ಸಾವನಪ್ಪಿದ್ದರು. ಸಾವನಪ್ಪಿದ್ದ ವ್ಯಕ್ತಿ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಿ.ಟಿ.ರವಿ ಸಾಂತ್ವನ ಹೇಳಿದರು. ಶಂಕರ್ ಪತ್ನಿ ಮಮತಾಗೆ 5 ಲಕ್ಷದ ಪರಿಹಾರದ ಚೆಕ್ ವಿತರಣೆ ಮಾಡಿದರು, ನಂತರ ಕೊಪ್ಪ ತಾಲೂಕಿನ ಜಲದುರ್ಗ ಹಾಗೂ ಶುಂಠಿಗದ್ದೆ ಗ್ರಾಮಕ್ಕೆ ಭೇಟಿ, ಪರಿಶೀಲನೆ ನಡೆಸಿದರು.
ಇದೇ ವೇಳೆ ಮಾತಾನಾಡಿದ ಸಚಿವರು ಸರ್ಕಾರ ಸಾವನ್ನಪ್ಪಿದವರನ್ನು ವಾಪಸ್ಸು ತರಲು ಸಾಧ್ಯವಿಲ್ಲ, ಕುಟುಂಬ ನರೆವಿಗೆ ಬರುವುದು ಸರ್ಕಾರ ಮಾನವೀಯ ಕರ್ತವ್ಯ ಎಂಬ ನೆಲೆಯಲ್ಲಿ ಅವರಿಗೆ ಪರಿಹಾರ ನೀಡಿದ್ದೇವೆ. ಇನ್ನು ಹಾನಿಯ ಸಮೀಕ್ಷೆ ನಡೆಯುತ್ತಿದ್ದು ಹಾನಿ ಪಟ್ಟಿ ಬಿಡುಗಡೆಯಾದ ತಕ್ಷಣ ಎನ್ ಡಿ ಆರ್ ಎಫ್ ಮಾರ್ಗದರ್ಶಿ ಸೂಚನೆ ಅನ್ವಯ ಹಣ ಬಿಡುಗಡೆಯಾಗುತ್ತೆ, ಹೆಚ್ಚುವರಿ ಹಣ ಬಿಡುಗಡೆಗೆ ಸಿಎಂ ಜೊತೆ ಮಾತಾನಾಡುತ್ತೇನೆ ಎಂದರು.ಇದನ್ನೂ ಓದಿ : ಪಿಎಸ್ಎಸ್ಕೆ ಸಕ್ಕರೆ ಕಾರ್ಖಾನೆಗೆ ಕೊನೆಗೂ ಕಾಯಕಲ್ಪ ; ನಿರಾಣಿ ಒಡೆತನದಲ್ಲಿ ವಿದ್ಯುಕ್ತ ಆರಂಭ
ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿ ಕಳೆದೊಂದು ವಾರ ಭಾರೀ ಮಳೆಯಾದ ಪರಿಣಾಮ ಚಿಕ್ಕಮಗಳೂರು-ಮಂಗಳೂರು ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲಿ ಭಾರೀ ಭೂ ಕುಸಿತದೊಂದಿಗೆ ಮರಗಳು, ಕಲ್ಲು ಬಂಡೆಗಳು ರಸ್ತೆಗುರುಳಿದ್ದ ಪರಿಣಾಮ ಆಗಸ್ಟ್ 5 ರಿಂದ ಆಗಸ್ಟ್ 11 ರವರೆಗೆ ಈ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಜಿಲ್ಲಾಡಳಿತ ನಿಷೇಧಿಸಿತ್ತು.
ಇದೀಗ ಮಳೆ ಕಡಿಮೆಯಾಗಿರುವುದಲ್ಲದೇ ರಸ್ತೆ ಮೇಲಿದ್ದ ಮಣ್ಣ, ಕಲ್ಲು, ಮರಗಳನ್ನು ತೆರವು ಮಾಡಿ ಹದಗೆಟ್ಟಿದ್ದ ರಸ್ತೆಯನ್ನು ದುರಸ್ತಿ ಮಾಡಲಾಗಿದೆ. ಪರಿಣಾಮ ಹೆದ್ದಾರಿಯಲ್ಲಿ ವಾಹನ ಸಂಚಾರ ಮುನಾರಂಭಕ್ಕೆ ಜಿಲ್ಲಾಡಳಿತ ಹಸಿರು ನಿಶಾನೆ ತೋರಿದ್ದು, ಆಗಸ್ಟ್ 12 ರಿಂದ ಚಾರ್ಮಾಡಿ ಘಾಟ್ ಹೆದ್ದಾರಿಯಲ್ಲಿ ಲಘು ವಾಹನಗಳ ಸಂಚಾರ ಆರಂಭವಾಗಲಿದೆ. ಈ ರಸ್ತೆಯಲ್ಲಿ ಬೆಳಗ್ಗೆ 7 ರಿಂದ ರಾತ್ರಿ 7 ರವರೆಗೆ ಮಾತ್ರ ಲಘು ವಾಹನಗಳ ಸಂಚಾರಕ್ಕೆ ಅನುಮತಿ ನೀಡಿ ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿ, ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿದ್ದಾರೆ.
Comments are closed.