ಕರ್ನಾಟಕ

ರಾಜ್ಯದಲ್ಲಿ ಇಂದು (ಸೋಮವಾರ) 4752 ಕೊರೋನಾ ಪ್ರಕರಣಗಳು ಪತ್ತೆ: 98 ಜನ ಸಾವು!

Pinterest LinkedIn Tumblr


ರಾಜ್ಯ ಇಂದು ಒಂದೇ ದಿನ 4752 ಜನರಲ್ಲಿ ಕೊರೋನಾ ಸೋಂಕು ಕಂಡುಬಂದಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,39,571ಕ್ಕೆ ಏರಿಕೆಯಾಗಿದೆ. ಅಲ್ಲದೆ, 98 ಜನ ಮೃತಪಟ್ಟಿದ್ದು ಸಾವಿನ ಸಂಖ್ಯೆಯೂ 2594ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 1497 ಜನರಿಗೆ ಸೋಂಕು ದೃಢಪಟ್ಟಿದ್ದು 27 ಜನ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಇಂದಿನ Heath Bulletienನಲ್ಲಿ ತಿಳಿಸಿದೆ.

ಲಾಕ್‌ಡೌನ್‌ ಸಡಿಲಿಕೆ ಆರಂಭವಾದ ನಂತರ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಊಹೆಗೂ ಮೀರಿ ಏರಿಕೆಯಾಗುತ್ತಲೇ ಇದೆ. ಸರಾಸರಿಯಾಗಿ ಪ್ರತಿದಿನ ನಾಲ್ಕು ಸಾವಿರಕ್ಕೂ ಅಧಿಕ ಈ ಸೋಂಕಿಗೆ ತುತ್ತಾಗುತ್ತಿದ್ದಾರೆ ಎನ್ನಲಾಗುತ್ತಿದೆ.

ಈ ನಡುವೆ ರಾಜ್ಯಾದ್ಯಂತ 4,776 ಜನ ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ಬೆಂಗಳೂರಿನಲ್ಲಿ 2693 ಜನ ಗುಣಮುಖರಾಗಿ ಮನೆಗೆ ತೆರಳಿರುವುದು ತುಸು ನೆಮ್ಮದಿ ನೀಡಿದೆ. ಆದರೆ, 629 ಸೋಂಕಿತರು ಐಸಿಯುಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇನ್ನೂ ಮಾರಣಾಂತಿಕ ಕೊರೋನಾ ಸೋಂಕಿಗೆ ತುತ್ತಾಗಿ ಆಗಸ್ಟ್ 2 ರಂದು ರಾತ್ರಿ 11 ಗಂಟೆಗೆ ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿದ್ದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಆರೋಗ್ಯ ಉತ್ತಮವಾಗಿದೆ ಎಂದು ವೈದ್ಯರ ತಂಡ ಮಾಹಿತಿ ನೀಡಿದೆ.

ಈ ಕುರಿತು ಬುಲೆಟಿನ್‌ ಬಿಡುಗಡೆ ಮಾಡಿವರು ಮಣಿಪಾಲ್‌ ಆಸ್ಪತ್ರೆಯ ವೈದ್ಯರ ತಂಡ, “ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಲ್ಲಿ ಕೊರೋನಾ ರೋಗದ ಲಕ್ಷಣದ ತೀವ್ರತೆ ಕಡಿಮೆ ಇದೆ. ಅವರ ಆರೋಗ್ಯ ಸ್ಥಿರವಾಗಿದೆ. ಪ್ರೋಟೋಕಾಲ್‌ಗಳ ಪ್ರಕಾರ ಸೂಕ್ತ ಚಿಕಿತ್ಸೆಯನ್ನು ಪ್ರಾರಂಭಿಸಲಾಗಿದೆ. ಮಲ್ಟಿಡಿಸಿಪ್ಲಿನರಿ ವೈದ್ಯರ ತಂಡದಿಂದ ಸಿಎಂಗೆ ಚಿಕಿತ್ಸೆ ನೀಡುತ್ತಿದ್ದು, ಹೆದರುವ ಅಗತ್ಯ ಇಲ್ಲ” ಎಂದು ತಿಳಿಸಿದೆ.

ಈಗಾಗಲೇ ಯಡಿಯೂರಪ್ಪನವರ ಜೊತೆ ನಿಕಟ ಸಂಪರ್ಕ ಹೊಂದಿದ್ದ ಹಾಗೂ ಅವರನ್ನು ಭೇಟಿ ಮಾಡಿದ್ದ ಎಲ್ಲರನ್ನೂ ಹೋಮ್​​ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಜತೆಗೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿ ಮತ್ತು ಕಚೇರಿಯನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಿಸಿ ಕುಟುಂಬ ಸದಸ್ಯರು ಯಾರಿಗೆ ಪ್ರವೇಶಕ್ಕೆ ಅವಕಾಶ ನೀಡದೆ ನಿರ್ಬಂಧಿಸಲಾಗಿದೆ.

ಸಿಎಂ ನಿವಾಸದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳಿಗೆ ಕೋವಿಡ್-19 ಪರೀಕ್ಷೆ ಮಾಡಲಾಗುತ್ತಿದೆ. ಸಿಎಂಗೆ ಕೊರೋನಾ ಕಾಣಿಸಿಕೊಂಡ ಬೆನ್ನಲ್ಲೇ ಇಂದು ಬೆಳಗ್ಗೆ ಆಗಮಿಸಿದ ಬೆಂಗಳೂರು ಮಹಾನಗರ ಪಾಲಿಕೆ ಸಿಬ್ಬಂದಿ, ಗೃಹ ಕಚೇರಿ ಕೃಷ್ಣಾ ಮತ್ತು ಅಧಿಕೃತ ನಿವಾಸ ಕಾವೇರಿ ಆವರಣವನ್ನು ಸ್ಯಾನಿಟೈಸ್ ಮಾಡಿದ್ದಾರೆ.

ಗೃಹ ಕಚೇರಿ ಕೃಷ್ಣಾ ಮತ್ತು ಸಿಎಂ ಅಧಿಕೃತ ನಿವಾಸಕ್ಕೆ ಹೊರಗಡೆಯಿಂದ ಪ್ರವೇಶ ನಿರ್ಬಂಧಿಸಲಾಗಿದೆ. ರಜೆ ಮೇಲೆ ಊರಿಗೆ ತೆರಳಿದ್ದ ಸಿಬ್ಬಂದಿ ಮತ್ತು ಸಿಎಂ ಕುಟುಂಬ ಸದಸ್ಯರನ್ನು ಕೋವಿಡ್​-19 ಟೆಸ್ಟ್​ಗೆ ಒಳಪಡಿಸಲಾಗಿದೆ. ಜತೆಗೆ ಆಂಟಿಜನ್ ಟೆಸ್ಟ್ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.

Comments are closed.