ಕರ್ನಾಟಕ

ಹುಬ್ಬಳ್ಳಿಯಲ್ಲಿ ಬಿಜೆಪಿ ಮುಖಂಡನಿಂದ ಆಸ್ತಿ ವಿವಾದಕ್ಕೆ ಎರಡನೇ ಹೆಂಡತಿ ಮೇಲೆ ಹಲ್ಲೆ ಆರೋಪ

Pinterest LinkedIn Tumblr


ಹುಬ್ಬಳ್ಳಿ(ಜು.26): ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕನ ಮನೆಯಲ್ಲಿ ಕಲಹ ಉಂಟಾಗಿದೆ. ಬಿಜೆಪಿ ಮುಖಂಡನಿಗೆ ಇಬ್ಬರು ಹೆಂಡತಿಯರಿದ್ದು, ಆಸ್ತಿ ವಿಚಾರಕ್ಕೆ ಗಲಾಟೆಯಾಗಿದೆ. ಬಿಜೆಪಿ ನಾಯಕ ಮತ್ತವರ ಮೊದಲನೇ ಹೆಂಡತಿ ಇಬ್ಬರೂ ಸೇರಿ ಎರಡನೇ ಹೆಂಡತಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಘಟನೆ ಹುಬ್ಬಳ್ಳಿಯ ವಿದ್ಯಾನಗರದಲ್ಲಿ ನಡೆದಿದೆ.

ಎರಡನೇ ಪತ್ನಿ ಅನಿತಾ ರೇವಣಕರ್‌ರನ್ನು ರಸ್ತೆ ಮಧ್ಯೆ ಎಳೆದಾಡಿ ಥಳಿಸಲಾಗಿದೆ. ಬಿಜೆಪಿ ಮುಖಂಡ ಹಾಗೂ ಆತನ ಮೊದಲ ಪತ್ನಿ, ಮಕ್ಕಳು ಸೇರಿ ಹಲ್ಲೆ ನಡೆಸಿದ್ದಾರೆ. ಕಲಘಟಗಿ ತಾಲೂಕಿನ ಹಿರೇಹೊನಳ್ಳಿಯ ಬಿಜೆಪಿ ಮುಖಂಡ ಬಸವರಾಜ ಕೆಲಗೇರಿ ಕುಟುಂಬದಿಂದ ಹಲ್ಲೆ ನಡೆದಿದೆ. ಮೊದಲ ಪತ್ನಿ ಮೃತಪಟ್ಟಿದ್ದಾಳೆ ಎಂದು ನಂಬಿಸಿ ಬಸವರಾಜ್ ಕೆಲಗೇರಿ ವಿಧವೆಯಾಗಿದ್ದ ಅನಿತಾಳನ್ನು ಮದುವೆ ಆಗಿದ್ದನಂತೆ. ಮದುವೆ ನಂತರ ಮೊದಲ ಪತ್ನಿಯ ಕಣ್ತಪ್ಪಿಸಿ ಕೆಲ ವರ್ಷಗಳ ಕಾಲ ಅನಿತಾಳ ಜೊತೆ ಸಂಸಾರ ನಡೆಸಿದ್ದ ಎನ್ನಲಾಗಿದೆ.

ಬಸವರಾಜ್ ಕೆಲಗೇರಿಗೆ ಮೊದಲ ಪತ್ನಿ ಮತ್ತು ಮಕ್ಕಳಿರುವ ವಿಚಾರ ತಿಳಿದಾಗ ಅನಿತಾ ಜೊತೆ ಜಗಳವಾಗಿತ್ತು. ಪ್ರೀತಿಯ ನಾಟಕವಾಡಿದ್ದ ಬಸವರಾಜ್ ಚೆನ್ನಾಗಿ ನೋಡಿಕೊಳ್ಳವುದಾಗಿ ಹೇಳಿದ್ದ. ನಂತರ ಅನಿತಾ ಹೆಸರಲ್ಲಿದ್ದ ಜಮೀನನ್ನು ಮಾರಾಟ ಮಾಡಿಸಿ 28 ಲಕ್ಷ ರೂಪಾಯಿ ಹಣ ಪಡೆದಿದ್ದ ಎಂಬ ಆರೋಪ ಕೇಳಿಬಂದಿದೆ.

ಆ ಹಣ ವಾಪಸ್ ಕೇಳಿದಾಗ ಮೊದಲ ಪತ್ನಿಯ ಮನೆ ಸೇರಿದ್ದ. ಹಣ ಮರಳಿ ಕೊಡುವಂತೆ ಒತ್ತಾಯಿಸಿದಾಗಿ ಮನೆಗೆ ಕರೆಸಿ ಹಲ್ಲೆ ಮಾಡಿದ್ದಾರೆಂದು ಅನಿತಾ ಆರೋಪಿಸಿದ್ದಾರೆ. ಈ ಕುರಿತು ಅನಿತಾ ಅವರು ಹುಬ್ಬಳ್ಳಿಯ ಮಹಿಳಾ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ಆದರೆ ಬಿಜೆಪಿ ನಾಯಕನಾಗಿರುವ ಬಸವಾರಜ್ ಕೆಲಗೇರಿಯ ರಾಜಕೀಯ ಪ್ರಭಾವದಿಂದಾಗಿ ಪೊಲೀಸರು ಆತನನ್ನು ಬಂಧಿಸಿಲ್ಲ ಎಂದು ಅನಿತಾ ಆರೋಪಿಸುತ್ತಿದ್ದಾರೆ.

ಅನಿತಾಳ ಜಮೀನು ಮಾರಿ ಬಂದಿದ್ದ ಹಣದಲ್ಲಿ ಬಸವರಾಜ್ ಕಲಘಟಗಿ ತಾಲ್ಲೂಕಿನ ಹಿರೇಹೊನ್ನಳ್ಳಿ ಗ್ರಾಮದಲ್ಲಿ ಜಮೀನು ಖರೀದಿಸಿದ್ದಾನೆ. ಚಿನ್ನದ ಆಭರಣಗಳನ್ನು ಖರೀದಿಸಿದ್ದಾನೆ. ಈಗ ಅನಿತಾ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾಳೆ. ತನ್ನ ಮಗಳಿಗೆ ಕಾಲೇಜು ಅಡ್ಮಿಷನ್ ಮಾಡಿಸಲು ಹಣವಿಲ್ಲ. ಹೀಗಾಗಿ ಕೊಟ್ಟ ಹಣ ವಾಪಸ್ ಕೇಳಿದ್ರೆ ಬಸವರಾಜ ಮೃಗೀಯವಾಗಿ ವರ್ತಿಸಿದ್ದಾನೆ. ಪತ್ನಿ, ಮೂವರು ಮಕ್ಕಳ ಜೊತೆಗೆ ಸೇರಿ ಅನಿತಾಳನ್ನು ಎಳೆದಾಡಿ ಬಟ್ಟೆ ಹರಿದು ಹಲ್ಲೆ ನಡೆಸಿದ್ದಾನೆ. ಕಾಲಿನಿಂದ ಒದ್ದು ಕೂದಲು ಹಿಡಿದು ಎಳೆದಾಡಿದ್ದಾನೆ ಎಂದು ತಿಳಿದು ಬಂದಿದೆ,

ಹೆಣ್ಣು ಎಂಬುದನ್ನೂ ಮರೆತು ನಡುರಸ್ತೆಯಲ್ಲಿ ಅವಮಾನಿಸಿದ್ದಾನೆ. ಹಣ ಕೊಡುವುದಿಲ್ಲ, ಕೇಳಲು ಬಂದರೆ ಪ್ರಾಣ ತೆಗೆಯುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ಅನಿತಾ ಆರೋಪಿಸಿದ್ದಾರೆ. ಬಸವರಾಜ್ ಕೆಲಗೇರಿ ಕುಟುಂಬದ ಬೀದಿ ರಂಪಾಟದ ದೃಶ್ಯಗಳನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಕೆಲವು ದಿನಗಳ ಹಿಂದೆ ಅನಿತಾ ಮತ್ತವರ ಮಕ್ಕಳು ಹಿರೆಹೊನ್ನಳ್ಳಿ ಗ್ರಾಮಕ್ಕೆ ಹಣ ಕೇಳಲು ಹೋಗಿದ್ದರು‌. ಆ ವೇಳೆಯೂ ಬಸವರಾಜ ಗಲಾಟೆ ಮಾಡಿ ಬೆದರಿಕೆ ಹಾಕಿದ್ದ. ಇದಕ್ಕೆ ಸಂಬಂಧಿಸಿದಂತೆ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈಗ ವಿದ್ಯಾ ನಗರದಲ್ಲಿ ಗಲಾಟೆ ನಡೆದಿದ್ದು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ಪೊಲೀಸರು ಮಾತ್ರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವ ಆರೋಪವಿದೆ. ಈ ಕುರಿತು ಸ್ಪಷ್ಟನೆ ಕೇಳಲು ಹೋದರೆ ಬಸವರಾಜ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಫೋನ್ ಕರೆ ಸ್ವೀಕರಿಸುತ್ತಿಲ್ಲ. ತನಗಿರುವ ರಾಜಕೀಯ ಪ್ರಭಾವ ಬಳಸಿ ಸೇಫ್ ಆಗಿದ್ದಾನೆ ಎನ್ನಲಾಗುತ್ತಿದೆ.

Comments are closed.