ಕರ್ನಾಟಕ

ರಾಯಚೂರಿನಲ್ಲಿ ಧಾರಾಕಾರ ಮಳೆಗೆ 6 ಜನ ಬಲಿ

Pinterest LinkedIn Tumblr


ರಾಯಚೂರು(ಜು.25): ಬಿಸಿಲುನಾಡು ರಾಯಚೂರು ಈಗ ಮಲೆನಾಡು ಆದಂತಾಗಿದೆ. ಜಿಲ್ಲೆಯಲ್ಲಿ ಮುಂಗಾರು ಮಳೆಯು ಉತ್ತಮವಾಗಿ ಸುರಿಯುತ್ತಿದೆ. ಈಗಾಗಲೇ ಬಿತ್ತ‌ನೆ ಮಾಡಿದ ಬೆಳೆಯು ನಾಶವಾಗುವ ಭೀತಿ, ಹಳ್ಳ-ಕೊಳ್ಳಗಳು ತುಂಬಿಕೊಂಡಿವೆ. ಮೈದುಂಬಿದ ಜಲಪಾತ ನೋಡಲು ಹೋಗಿ ಇಬ್ಬರು ಸಾವನ್ನಪ್ಪಿದ್ದಾರೆ.

ರಾಯಚೂರು ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಸಾಕಷ್ಟು ಮಳೆಯಾಗುತ್ತಿದೆ. ಜಿಲ್ಲೆಯ ಹಲವು ಕಡೆ ಎಡೆಬಿಡದೆ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಬಿತ್ತನೆ ಮಾಡಿದ ಬೆಳೆಯು ನಾಶವಾಗುವ ಸಾಧ್ಯತೆ ಇದೆ. ಅಧಿಕ ಮಳೆಯಾಗುತ್ತಿರುವುದರಿಂದ ಒಣಭೂಮಿ ಪ್ರದೇಶವು ಸಹ ಗದ್ದೆಗಳಾಗಿವೆ. ಜಿಲ್ಲೆಯಲ್ಲಿ ಜೂನ್​ ಹಾಗೂ ಜುಲೈ ತಿಂಗಳವರೆಗೆ ವಾಡಿಕೆಯಂತೆ 153 ಎಂ ಎಂ ಮಳೆಯಾಗಬೇಕಿತ್ತು. ಆದರೆ ಮಳೆಯಾಗಿದ್ದು ಬರೋಬ್ಬರಿ 255 ಎಂ ಎಂ ಮಳೆ. ವಾಡಿಕೆಗಿಂತ ಶೇ 55 ರಷ್ಟು ಮಳೆ ಹೆಚ್ಚಳವಾಗಿದೆ.

ಈ ಮಧ್ಯೆ ಮಳೆಯಿಂದಾಗಿ ನಗರ ಪ್ರದೇಶದಲ್ಲಿ ಚರಂಡಿ ನೀರು ಹಾಗು ಮಳೆ ನೀರು ಸೇರಿಕೊಂಡು ತಗ್ಗು ಪ್ರದೇಶಗಳಿಗೆ ನುಗ್ಗುತ್ತಿದೆ. ಇದರಿಂದಾಗಿ ಮನೆಯೊಳಗೆ ನೀರು ತುಂಬಿಕೊಂಡಿದ್ದರಿಂದ ಮನೆಯ ನೀರನ್ನು ಹೊರಹಾಕಲು ಸಾಹಸ ಪಡಬೇಕಾಗಿದೆ. ನಗರ ಪ್ರದೇಶದ ರಸ್ತೆಗಳು ಸಹ ಗುಂಡಿಗಳಾಗಿವೆ. ನಗರಸಭೆಯ ನಿರ್ಲಕ್ಷ್ಯ ಕ್ಕೆ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯೆ ಕೇವಲ 24 ಗಂಟೆಯಲ್ಲಿ 6 ಜನರು ಸಾವನ್ನಪ್ಪಿದ್ದಾರೆ.

ಮಹಾರಾಷ್ಟ್ರದಲ್ಲಿ ಚಿತ್ರಕಲಾ ಶಿಕ್ಷಕರಾದ ಕೃಷ್ಣಪ್ಪ ಹಾಗು ಆತನ ಮಗ ಧನುಷ್ ಸಾವನ್ನಪ್ಪಿದ್ದಾರೆ. ದೇವದುರ್ಗಾ ತಾಲೂಕಿನ ಮೂಡಲಗುಂಡಾದ ಕೃಷ್ಣಪ್ಪ, ಧನುಷ್, ಮಹಾಂತೇಶ ಹಾಗು ಸಿದ್ದಣ್ಣ ಸೇರಿ ಲಿಂಗಸಗೂರು ತಾಲೂಕಿನ ಗುಂಡಲಬಂಡಾ ಜಲಪಾತ ನೋಡಲು ಹೋಗಿದ್ದರು. ಈ ಸಂದರ್ಭದಲ್ಲಿ ಕಾಲು ಜಾರಿ ಬಿದ್ದು ನಾಲ್ಕು ಜನರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು, ಅದರಲ್ಲಿ ಸಿದ್ದಣ್ಣ ಈಜಿಕೊಂಡು ದಡ ಸೇರಿದ್ದ, ಮಹಾಂತೇಶ ಒಂದು ಗುಂಡು ಕಲ್ಲಿನ ಮೇಲೆ ಕುಳಿತಿದ್ದ, ಇವರನ್ನು ಪೊಲೀಸರು ಹಾಗೂ ಅಗ್ನಿ ಶಾಮಕದಳದವರು ಸಾಹಸ ಪಟ್ಟು ರಕ್ಷಿಸಿದ್ದರು. ಆದರೆ ಕೃಷ್ಣಪ್ಪ ಹಾಗು ಧನುಷ್ ನೀರು ಪಾಲಾಗಿದ್ದರು.

ಭಾರೀ ಮಳೆಯಾಗುತ್ತಿರುವ ಹಿನ್ನಲೆ ದೇವದುರ್ಗಾದ ಗೌರಂಪೇಟೆಯಲ್ಲಿ ಗುಡ್ಡದ ಬಂಡೆಯೊಂದು ಉರುಳಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಮಳೆಯಿಂದಾಗಿ ಗುಡ್ಡದ ಮಣ್ಣು ಕುಸಿದು, ಇದರೊಂದಿಗೆ ಬಂಡೆಯೊಂದು ಉರುಳಿದೆ. ಈ ಸಂದರ್ಭದಲ್ಲಿ ಆಟವಾಡುತ್ತಿದ್ದ ರಮೇಶ, ವೀರೇಶ ಎಂಬಿಬ್ಬರು ಬಾಲಕರು ಸಾವನ್ನಪ್ಪಿದ್ದಾರೆ. ಮೌನೇಶ ಗಾಯಗೊಂಡು ದೇವದುರ್ಗಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಸಿಂಗನೋಡಿ ಗ್ರಾಮದಲ್ಲಿ ಗುಡುಗು ಸಿಡಿಲಿನೊಂದಿಗೆ ಮಳೆಯಾಗಿದೆ, ಸಿಡಿಲು ಬಡಿದು ಗುಡಿಸಲಿನಲ್ಲಿದ್ದಾಗ ಸಿಡಿಲಿಗೆ ಗೋವಿಂದ ಹಾಗೂ ರವಿಚಂದ್ರ ಎಂಬಿಬ್ಬರು ಸಹೋದರರು ಬಲಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಮಹಾದೇವಿ ಎಂಬುವವರು ಮೂರ್ಛೆ ಹೋಗಿದ್ದಾರೆ.

ರಾಯಚೂರು ಜಿಲ್ಲೆಯ ಮೂರು ಪ್ರತ್ಯೇಕ ಘಟನೆಯಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ. ಇದರಿಂದಾಗಿ ಬಿಸಿಲುನಾಡು ರಾಯಚೂರಿನಲ್ಲಿ ಮಳೆ ಆವಾಂತರ ಸೃಷ್ಠಿಸಿದೆ.

Comments are closed.