ಕರ್ನಾಟಕ

ಚಿನ್ನದ ಕಿರೀಟ ಅರ್ಪಿಸಿದರೂ ಜೈಲು ಶಿಕ್ಷೆಯಿಂದ ದೇವರು ಕಾಪಾಡಲಿಲ್ಲ; ಶ್ರೀರಾಮುಲುಗೆ ಸಿದ್ದರಾಮಯ್ಯ

Pinterest LinkedIn Tumblr


ಬೆಂಗಳೂರು (ಜು. 16): ಕರ್ನಾಟಕದಲ್ಲಿ ಇನ್ನು ಎರಡು ತಿಂಗಳಲ್ಲಿ ಕೊರೋನಾ ಸೋಂಕು ಹೆಚ್ಚಳವಾಗಲಿದೆ. ಕೊರೋನಾದಿಂದ ದೇವರೇ ನಮ್ಮನ್ನು ಕಾಪಾಡಬೇಕು ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿಕೆ ನೀಡಿದ್ದರು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಟ್ವೀಟ್ ಮಾಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜನದ್ರೋಹಿಗಳನ್ನು, ಭ್ರಷ್ಟರನ್ನು ದೇವರು ಕೂಡ ಕಾಪಾಡಲಾರ ಎಂದು ಲೇವಡಿ ಮಾಡಿದ್ದಾರೆ.

ಈಗಲೂ ರಾಜ್ಯದ ಜನರನ್ನು ಕಾಪಾಡುತ್ತಿರುವುದು ದೇವರೇ ವಿನಃ ಸರ್ಕಾರವಲ್ಲ. ಆದರೆ, ಜನದ್ರೋಹಿಗಳನ್ನು, ಭ್ರಷ್ಟರನ್ನು ಆ ದೇವರು ಕೂಡ ಕಾಪಾಡಲಾರ. ನಿಮ್ಮನ್ನು ದೇವರು ಕಾಪಾಡುತ್ತಾನೆ ಎಂಬ ನಿರೀಕ್ಷೆಯೂ ಬೇಡ. ತಿರುಪತಿ ತಿಮ್ಮಪ್ಪನಿಗೆ ಚಿನ್ನದ ಕಿರೀಟ ಅರ್ಪಿಸಿದರೂ ಭ್ರಷ್ಟರು ಜೈಲಿಗೆ ಹೋಗುವುದು ತಪ್ಪಲಿಲ್ಲ ಎಂಬುದನ್ನು ಮರೆಯಬೇಡಿ ಎಂದು ಶ್ರೀರಾಮುಲುಗೆ ಟ್ವೀಟ್ ಮೂಲಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಈ ಹಿಂದೆ ಗಾಲಿ ಜನಾರ್ದನ್ ರೆಡ್ಡಿ ತಿರುಪತಿ ವೆಂಕಟೇಶ್ವರ ಸ್ವಾಮಿಗೆ ಚಿನ್ನದ ಕಿರೀಟವನ್ನು ದಾನವನ್ನಾಗಿ ನೀಡಿದ್ದರು. ಆದರೂ ಅವರು ಭ್ರಷ್ಟಾಚಾರದ ಆರೋಪದಲ್ಲಿ ಜೈಲು ಸೇರುವಂತಾಯಿತು. ಈ ಪ್ರಕರಣವನ್ನು ನೆನಪಿಸುವ ಮೂಲಕ ಜನಾರ್ದನ ರೆಡ್ಡಿ ಅವರ ಆಪ್ತ ಶ್ರೀರಾಮುಲುಗೆ ಸಿದ್ದರಾಮಯ್ಯ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಬುಧವಾರ ಚಿತ್ರದುರ್ಗದಲ್ಲಿ ಮಾತನಾಡಿದ್ದ ಆರೋಗ್ಯ ಸಚಿವ ಬಿ. ಶ್ರೀರಾಮುಲು, ಕೊರೋನಾ ನಿಯಂತ್ರಣ ಯಾರ ಕೈಯಲ್ಲಿದೆ? ಆ ದೇವರೇ ನಮ್ಮನ್ನು ಕಾಪಾಡಬೇಕು. ಮುಂದಿನ ಎರಡು ತಿಂಗಳಲ್ಲಿ ಇಡೀ ವಿಶ್ವದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತದೆ. ಹಾಗಾಗಿ, ಎಲ್ಲರೂ ಜಾಗೃತರಾಗಿ ಇರಬೇಕಿದೆ. ಇದು ಆಡಳಿತ ಪಕ್ಷ, ಶ್ರೀಮಂತರು ಬಡವರು ಎಂಬುದಾಗಿ ವಿಭಾಗ ಮಾಡಿ ಬರುತ್ತಿಲ್ಲ. ಮುಂದಿನ 2 ತಿಂಗಳಲ್ಲಿ ಜಾಸ್ತಿ ಆಗುವ ಅವಕಾಶ ನೂರಕ್ಕೆ ನೂರು ಪರ್ಸೆಂಟ್ ಇದೆ. ನಾವೇನಾದರೂ ತಪ್ಪು ಮಾಡಿದ್ದರೆ ಪ್ರಾಯಶ್ಚಿತ್ತ ಅನುಭವಿಸಲು ಸಿದ್ದರಿದ್ದೇವೆ. ಇದು ಬಹಳ ಸಂದಿಗ್ದ ಸಂದರ್ಭ. ಇದರಲ್ಲಿ ಕಾಂಗ್ರೆಸ್​ನವರು ರಾಜಕೀಯ ಮಾಡಬಾರದು ಎಂದು ಹೇಳಿದ್ದರು. ಈ ಮೂಲಕ ರಾಜ್ಯ ಸರ್ಕಾರದ ವೈಫಲ್ಯವನ್ನು ಸಚಿವರೇ ಬಹಿರಂಗವಾಗಿ ಒಪ್ಪಿಕೊಂಡಿದ್ದರಿಂದ ಸರ್ಕಾರಕ್ಕೆ ಮುಜುಗರ ಉಂಟಾಗಿತ್ತು.

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕೊರೋನಾ ಸೋಂಕಿನ ಪರಿಸ್ಥಿತಿಯನ್ನು ನಿರ್ವಹಿಸಲು ಸಾಧ್ಯವಿಲ್ಲ, ದೇವರೇ ನಮ್ಮನ್ನು ಕಾಪಾಡಬೇಕು ಎಂದು ಒಪ್ಪಿಕೊಳ್ಳುವವರು ಅಧಿಕಾರದಲ್ಲಿ ಯಾಕಿರಬೇಕು? ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗಲಿ. ಅದು ಕೇವಲ ಸಚಿವ ಶ್ರೀರಾಮುಲು ಹೇಳಿಕೆ ಅಲ್ಲ, ಸರ್ಕಾರದ ಹೇಳಿಕೆ. ಈಗ ಮುಖ್ಯಮಂತ್ರಿಯರವರ ಟೀಂ ನಾವು ಏನೂ ಮಾಡಕ್ಕೆ ಆಗಲ್ಲ ದೇವರೇ ಕಾಪಾಡಬೇಕು ಎಂದರೆ ಹೇಗೆ? ರಾಜ್ಯದಲ್ಲಿ ಕೊರೋನಾ ಪರಿಸ್ಥಿತಿ ನಿಭಾಯಿಸೋಕೆ ಆಗದಿದ್ದರೆ ಅವರೆಲ್ಲ ಅಧಿಕಾರದಲ್ಲಿ ಯಾಕಿರಬೇಕು? ಎಂದು ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಶ್ನಿಸಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಆರೋಗ್ಯ ಸಚಿವ ಬಿ. ಶ್ರೀರಾಮುಲು, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಸೋಂಕು ಹೆಚ್ಚಾಗಲು, ಸರ್ಕಾರದ ನಿರ್ಲಕ್ಷ್ಯ, ಮಂತ್ರಿಗಳ ಬೇಜವಾಬ್ದಾರಿ, ಸರ್ಕಾರದಲ್ಲಿ ಹೊಂದಾಣಿಕೆ ಇಲ್ಲ ಎಂಬ ಪ್ರತಿಪಕ್ಷಗಳ ಆರೋಪಗಳಿಗೆ ಉತ್ತರಿಸುವ ಸಂದರ್ಭದಲ್ಲಿ ಆ ಆರೋಪಗಳು ‘ಸತ್ಯಕ್ಕೆ ದೂರವಾದದ್ದು’ ಎಂದು ನಾನು ಹೇಳಿದ್ದೆ ಎಂದು ಶ್ರೀರಾಮುಲು ಟ್ವೀಟ್ ಮಾಡಿದ್ದರು.

‘ಸೋಂಕು ತಡೆಯಲು ಜನರಲ್ಲಿ ಜಾಗೃತಿ ಬರಬೇಕು, ಸೋಂಕು ತಡೆಯುವಲ್ಲಿ ಇದು ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಇಲ್ಲಿ ಎಡವಿದರೆ ಪರಿಸ್ಥಿತಿ ಕ್ಲಿಷ್ಟಕರ’ ಎಂದು ಹೇಳುವ ಸಂರ್ಭದಲ್ಲಿ, ‘ಇನ್ನೂ ಎಡವಿದರೆ ದೇವರೇ ಕಾಪಾಡಬೇಕು’ ಎಂದು ಹೇಳಿದ ಎಚ್ಚರಿಕೆಯ ಮಾತುಗಳನ್ನಾಡಿದ್ದೆ. ಆದರೆ, ಅದನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ ಎಂದು ಸಚಿವ ಶ್ರೀರಾಮುಲು ಸ್ಪಷ್ಟನೆ ನೀಡಿದ್ದರು.

Comments are closed.