ಕರ್ನಾಟಕ

ಕೊರೊನಾದಿಂದ ಗುಣಮುಖರಾಗಿ ಕರ್ತವ್ಯಕ್ಕೆ ಮರಳಿದ ಮೈಸೂರಿನ 45 ಪೊಲೀಸರು..!

Pinterest LinkedIn Tumblr


ಮೈಸೂರು: ಕೊರೊನಾ ಸೋಂಕಿನ ವಿರುದ್ಧ ಸಾರ್ವಜನಿಕರ ರಕ್ಷಣೆಗಾಗಿ ಹೋರಾಡುವ ಭರದಲ್ಲಿ ತಾವೇ ಕೊರೊನಾ ಸೋಂಕು ಪೀಡಿತರಾಗಿದ್ದ ಆರಕ್ಷಕರು ಈಗ ಗುಣಮುಖರಾಗಿದ್ದು, ಮತ್ತೆ ಸೇವಾ ಅಖಾಡಕ್ಕೆ ಇಳಿದಿದ್ದಾರೆ.

ಕೊರೊನಾ ಸೋಂಕಿನ ವಿರುದ್ಧ ಮೊದಲು ತಾವು ಗೆದ್ದು, ಈಗ ಮತ್ತೆ ಕೊರೊನಾದಿಂದ ಸಾರ್ವಜನಿಕರನ್ನು ರಕ್ಷಣೆ ಮಾಡಲು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ.

ಮೈಸೂರು ನಗರದಲ್ಲಿರುವ ಕೆಎಸ್‌ಆರ್‌ಪಿಯ 5ನೇ ಬೆಟಾಲಿಯನ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 53 ಮಂದಿ ಪೊಲೀಸರು, ಸಾರ್ವಜನಿಕರನ್ನು ಕೊರೊನಾ ಸೋಂಕಿನಿಂದ ರಕ್ಷಣೆ ಮಾಡುವಾಗ ಅನಿವಾರ‍್ಯವಾಗಿ ಸೋಂಕು ತಗುಲಿಸಿಕೊಂಡಿದ್ದರು.

ಅವರನ್ನು ಕೋವಿಡ್‌ ಆಸ್ಪತ್ರೆಗೆ ದಾಖಲಿಸಿದ ಪೊಲೀಸ್‌ ಇಲಾಖೆಯ ಮೇಲಧಿಕಾರಿಗಳು, ಸೂಕ್ತ ಚಿಕಿತ್ಸೆಯೊಂದಿಗೆ ಹೇಗೆ ಮುಂಜಾಗ್ರತೆಯಾಗಿ ಕಾರ್ಯ ನಿರ್ವಹಿಸಬೇಕು ಎಂಬುದರ ಬಗ್ಗೆ ಮನೋಸ್ಥೈರ್ಯ ತುಂಬುವ ಪ್ರಯತ್ನ ಮಾಡಿದರು.

ಸತತ ಎರಡರಿಂದ ಮೂರು ವಾರಗಳ ಕಾಲ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದರೊಂದಿಗೆ ಕ್ವಾರಂಟೈನ್‌ನಲ್ಲಿ ಇದ್ದು ದೈಹಿಕ ಆರೋಗ್ಯ ರಕ್ಷಣೆಯೊಂದಿಗೆ ಮಾನಸಿಕ ಆರೋಗ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡು ಹೊರ ಬಂದಿದ್ದು, ಕರ್ತವ್ಯಕ್ಕೆ ಹಾಜರಾಗಲು ಸಿದ್ಧರಾಗಿದ್ದಾರೆ.

ಮೈಸೂರಿನ ಕೆಎಸ್‌ಆರ್‌ಪಿ ಬೆಟಾಲಿಯನ್‌ನ 53 ಮಂದಿ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಮೈಸೂರು, ಮಂಡ್ಯ, ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣದ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಹೊಸ ಸವಾಲಿನ ಕೆಲಸ ನಿರ್ವಹಿಸಿದ ಆರಕ್ಷಕರಿಗೆ
ಕರ್ತವ್ಯ ಮುಗಿಸಿ ಹಿಂದಿರುಗುವ ವೇಳೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿತ್ತು. ಅವರಲ್ಲಿ ಈಗ 45 ಮಂದಿ ಸಂಪೂರ್ಣ ಗುಣಮುಖರಾಗಿ ಮನೆಗೆ ಹಿಂದಿರುಗಿದ್ದು, ಕುಟುಂಬದೊಂದಿಗೆ ಕೆಲ ದಿನಗಳು ನೆಮ್ಮದಿಯಿಂದ ಕಾಲ ಕಳೆದಿದ್ದು, ಈಗ ಕರ್ತವ್ಯಕ್ಕೆ ಹಾಜರಾಗಲು ಸಿದ್ಧರಾಗಿದ್ದಾರೆ ಎನ್ನುತ್ತಾರೆ ಕೆಎಸ್‌ಆರ್‌ಪಿಯ ಸಹಾಯಕ ಕಮಾಂಡೆಂಟ್‌ ಸತ್ಯನಾರಾಯಣ್‌.

ಕೆಎಸ್‌ಆರ್‌ಪಿ ಪಡೆಯ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಕೊರೊನಾ ನಿಯಂತ್ರಣಕ್ಕೆ ಬೆಂಗಳೂರು ಸೇರಿದಂತೆ ಹಲವೆಡೆ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಈ ವೇಳೆ 53 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಕೋವಿಡ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಗುಣಮುಖರಾಗಿದ್ದಾರೆ. ಈಗ ಅಗತ್ಯ ಮುಂಜಾಗ್ರತೆಯೊಂದಿಗೆ ಕರ್ತವ್ಯ ನಿರ್ವಹಿಸಲು ಸಿದ್ಧರಾಗಿದ್ದಾರೆ ಎಂದು ಕೆಎಸ್‌ಆರ್‌ಪಿ 5ನೇ ಬೆಟಾಲಿಯನ್‌ ಕಮಾಂಡೆಂಟ್‌ ಜನಾರ್ದನ್‌ ಮಾಹಿತಿ ನೀಡಿದ್ಧಾರೆ.

ಸಾಕಷ್ಟು ಕಡೆ ಹಲವು ಸನ್ನಿವೇಶಗಳಲ್ಲಿ ಕೆಲಸ ಮಾಡಿದ್ದೇವೆ. ಆದರೆ, ಈ ಅನುಭವ ಹೊಸತು. ಜನಸಾಮಾನ್ಯರ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ನಮಗೂ ಸೋಂಕು ಇರುವುದು ಪತ್ತೆಯಾಯಿತು. ಕುಟುಂಬದವರು ಆತಂಕಗೊಂಡರು. ಅವರಿಗೂ ಧೈರ್ಯ ತುಂಬಿ, ಸೂಕ್ತ ಚಿಕಿತ್ಸೆ ಪಡೆದು ಗುಣಮುಖವಾಗಿ ಹೊರ ಬಂದಿದ್ದೇನೆ. ಮತ್ತೆ ಜನ ಸಾಮಾನ್ಯರಿಗೆ ಕೊರೊನಾ ಬಗ್ಗೆ ಎಚ್ಚರಿಕೆ ನೀಡಲು ಕರ್ತವ್ಯಕ್ಕೆ ತೆರಳಲು ಸಿದ್ಧವಾಗಿದ್ದೇನೆ ಎನ್ನುತ್ತಾರೆ, ಎಎಸ್‌ಐ ದಿವಾಕರ್‌.

ಬೆಂಗಳೂರಿನಲ್ಲಿ ಕಂಟೈನ್‌ಮೆಂಟ್‌ ವಲಯಗಳಲ್ಲಿ ಸಾಕಷ್ಟು ಮುಂಜಾಗ್ರತೆ ವಹಿಸಿಕೊಂಡೇ ಕರ್ತವ್ಯ ನಿರ್ವಹಿಸಿದೆವು. ಆದರೂ ಕೊರೊನಾ ಸೋಂಕು ತಗುಲಿತು. ಇದರಿಂದ ಮನೆಯವರು ಆತಂಕಪಟ್ಟರು. ಈಗ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖನಾಗಿದ್ದು, ಜನ ಸಾಮಾನ್ಯರ ರಕ್ಷಣೆಗೆ ಅಂತಹ ಪ್ರದೇಶಗಳಲ್ಲಿಯೇ ಮತ್ತೆ ನಿರ್ವಹಿಸಲು ತೆರಳುತ್ತೇನೆ ಎನ್ನುತ್ತಾರೆ, ಪೇದೆ ಯಶವಂತ್‌.

Comments are closed.