ಕರ್ನಾಟಕ

ಲಾಕ್ ಡೌನ್: ಬೆಂಗಳೂರಿನಿಂದ ಊರುಗಳಿಗೆ ತೆರಳಲು ಪ್ರಯಾಣಿಕರ ನೂಕುನುಗ್ಗಲು!

Pinterest LinkedIn Tumblr


ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಹಾಮಾರಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಅದನ್ನು ತಡೆಯಲು ರಾಜ್ಯ ಸರ್ಕಾರ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಮಂಗಳವಾರದಿಂದ ಒಂದು ವಾರ ಲಾಕ್ ಡೌನ್ ಜಾರಿಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಜನ ಭಾರೀ ಸಂಖ್ಯೆಯಲ್ಲಿ ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದು, ಬಸ್ಸುಗಳಲ್ಲಿ ಪ್ರಯಾಣಿಸಲು ಭಾರೀ ಪೈಪೋಟಿ ಕಂಡು ಬಂದಿದೆ. ಮೆಜಸ್ಟಿಕ್ ನಲ್ಲಿ ಪ್ರಯಾಣಿಕರ ನೂಕುನುಗ್ಗಲು ಸಹ ಉಂಟಾಗಿದೆ.

ತುಮಕೂರು, ಮೈಸೂರು, ಬಳ್ಳಾರಿ ರಸ್ತೆಗಳಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳದ ಬಸ್ ಚಾಲಕರೊಂದಿಗೆ ಪ್ರಯಾಣಿಕರು ಗಲಾಟೆ ಮಾಡಿದ್ದಾರೆ. ತುಮಕೂರು ಟೋಲ್ ಬಳಿ ಬಸ್ ತಡೆದು ಪ್ರತಿಭಟನೆ ನಡೆಸಿರುವುದು ಸಹ ಕಂಡು ಬಂದಿದೆ.

ಪ್ರಯಾಣಿಕರ ಬೇಡಿಕೆಗಳಿಗೆ ಅನುಗುಣವಾಗಿ ಮಂಗಳವಾರ ರಾತ್ರಿವರೆಗೆ ಹೆಚ್ಚುವರಿಯಾಗಿ 1, 600 ಬಸ್ ಗಳಿಗೆ ವ್ಯವಸ್ಥೆ ಮಾಡಲಾಗಿದೆ. ಆದರೂ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದರಿಂದ ಬಸ್ ಗಳಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಲಾಗಿರುವುದರಿಂದ ಆತಂಕಪಡಬೇಕಿಲ್ಲ ಎಂದು ಕೆಎಸ್‌ಆರ್‌ಟಿಸಿ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ವ್ಯಕ್ತಿಗತ ಅಂತರ ಖಚಿತಪಡಿಸಿಕೊಂಡ ನಂತರ ಮತ್ತು ಥರ್ಮಲ್ ಸ್ಕ್ರೀನಿಂಗ್ ನಡೆಸಿ ಪ್ರಯಾಣಿಕರಿಗೆ ಪ್ರಯಾಣಿಸಲು ಅವಕಾಶ ನೀಡಲಾಗುವುದು. ಹೆಚ್ಚುವರಿ ಬಸ್ಸುಗಳನ್ನು ಓಡಿಸಲು ಈಗಾಗಲೇ ಯೋಜಿಸಲಾಗಿದೆ ಎಂದು ನಿಗಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ನಗರದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಆತಂಕ ಮತ್ತು ಲಾಕ್‍ಡೌನ್ ನಿಂದಾಗಿ ಇಂದು ಬೆಳಗ್ಗೆಯಿಂದಲೇ ಸಾವಿರಾರು ಜನ ಬೆಂಗಳೂರು ಬಿಡುತ್ತಿದ್ದಾರೆ. ಸಿಕ್ಕ ಸಿಕ್ಕ ವಾಹನಗಳಲ್ಲಿ ಊರು ಸೇರಿಕೊಳ್ಳುವ ಅವಸರದಲ್ಲಿ ಜನರಿದ್ದಾರೆ. ಇನ್ನು ಕೆಲವರು ಮನೆಗಳನ್ನು ಖಾಲಿ ಮಾಡಿಕೊಂಡು ಗಂಟು ಮೂಟೆ ಸಹಿತ ಊರಿನತ್ತ ಪ್ರಯಾಣ ಬೆಳೆಸುತ್ತಿದ್ದಾರೆ.

Comments are closed.