ಕರ್ನಾಟಕ

ಬೆಂಗಳೂರಿನಲ್ಲಿ ಲಾಕ್ಡೌನ್: : ಏನಿರುತ್ತೆ? ಏನಿರಲ್ಲ? ಇಲ್ಲಿದೆ ಸಂಪೂರ್ಣ ಮಾಹಿತಿ

Pinterest LinkedIn Tumblr

ಬೆಂಗಳೂರು: ಮಾರಕ ಕೊರೋನಾ ವೈರಸ್ ಸೋಂಕು ಗಣನೀಯವಾಗಿ ಹೆಚ್ಚಾಗುತ್ತಿರುವ ಪರಿಣಾಮ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ 7 ದಿನಗಳ ಕಾಲ ಲಾಕ್ ಡೌನ್ ಜಾರಿ ಮಾಡಲಾಗಿದ್ದು, ಈ ಸಂದರ್ಭದಲ್ಲಿ ಯಾವೆಲ್ಲ ಸೇವೆಗಳು ಇರಲಿವೆ ಮತ್ತು ಯಾವೆಲ್ಲಾ ಸೇವೆಗಳು ಇರುವುದಿಲ್ಲ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಜು.14ರಿಂದ ಜು.22ರವರೆಗೆ ಈ ಎರಡು ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್​ಡೌನ್​ ಜಾರಿಯಾಗಲಿದೆ. ಈ ಅವಧಿಯಲ್ಲಿ ಎಂದಿನಂತೆ ಆಸ್ಪತ್ರೆಗಳು, ದಿನಸಿ, ಹಾಲು, ಹಣ್ಣು, ತರಕಾರಿ, ಔಷಧಿ ಮೊದಲಾದ ದಿನಬಳಕೆಯ ಅಗತ್ಯ ವಸ್ತುಗಳು ಲಭ್ಯವಿರುತ್ತವೆ.

ಆದರೆ ಸರ್ಕಾರಿ ಸಾರಿಗೆ ಸೇವೆಗಳಾದ ಕೆಎಸ್ಆರ್ ಟಿಸಿ ಮತ್ತು ಬಿಎಂಟಿಸಿ ಬಸ್ ಸೇವೆಗಳು ಸಂಪೂರ್ಣ ಸ್ಥಗಿತವಾಗಲಿದೆ. ಆದರೆ ಕೆಲ ತುರ್ತು ಸೇವೆಗಳಿಗೆ ಕೆಲ ಬಿಎಂಟಿಸಿ ಬಸ್ ಗಳನ್ನು ನಿಯೋಜಿಸಲಾಗಿದ್ದು, ಈ ಬಸ್ ಗಳು ಮಾತ್ರ ಲಾಕ್ ಡೌನ್ ಸಂದರ್ಭದಲ್ಲಿ ಚಲಿಸಲಿದೆ. ಕ್ಯಾಬ್ ಸೇವೆ, ಆಟೋ ಸೇವೆ ಕೂಡ ಸ್ಥಗಿತವಾಗಲಿದೆ. ಅಲ್ಲದೆ ಅಗತ್ಯವಲ್ಲದ ದಿನಬಳಕೆಯಲ್ಲದ ವಸ್ತುಗಳ ಅಂಗಡಿಗಳು ಬಂದ್ ಆಗಲಿವೆ. ಹೊಟೆಲ್ ಸೇವೆ ಬಂದ್ ಆಗಲಿದ್ದು, ಸೋಮವಾರ ಬಿಡುಗಡೆಯಾಗುವ ಮಾರ್ಗಸೂಚಿಯಲ್ಲಿ ಹೊಟೆಲ್ ನಲ್ಲಿ ಪಾರ್ಸೆಲ್ ಗೆ ಅವಕಾಶ ನೀಡುವ ಸಾಧ್ಯತೆ ಇದೆ. ಮಾಲ್ ಗಳು-ರೆಸ್ಟೋರೆಂಟ್ ಗಳು ಸಂಪೂರ್ಣ ಬಂದ್ ಆಗಲಿದೆ.

ಇನ್ನು ಮಂಗಳವಾರ ರಾತ್ರಿಯಿಂದಲೇ ಮದ್ಯದಂಗಡಿಗಳು ಬಂದ್ ಆಗಲಿವೆ. ಸೋಮವಾರದಿಂದ ಮಂಗಳವಾರ ಸಂಜೆವರೆಗೂ ಬಾರ್ ಗಳು ತೆರೆಲಿವೆ. ಈ ಸಂದರ್ಭದಲ್ಲಿ ಮದ್ಯಪ್ರಿಯರು ಮದ್ಯ ಖರೀದಿ ಮಾಡಬಹುದು.

ಆಸ್ಪತ್ರೆಗಳು, ಮೆಡಿಕಲ್ ಸ್ಟೋರ್ ಗಳು, ದಿನಸಿ ಅಂಗಡಿಗಳು, ಹಣ್ಣು ತರಕಾರಿ ಅಂಗಡಿಗಳು ತೆರೆದಿರುತ್ತವೆ. ಇದರ ಜೊತೆ ಈಗಾಗಲೇ ನಿಗದಿಯಾಗಿರುವ ವೈದ್ಯಕೀಯ ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳು ನಡೆಯಲಿವೆ. ಇನ್ನು ಈ ಬಾರಿ ಲಾಕ್ಡೌನ್ ಕಟ್ಟುನಿಟ್ಟಿನಿಂದ ಕೂಡಿರಲಿದೆ ಎಂದು ಹೇಳಲಾಗುತ್ತಿದ್ದು, ದಿನಬಳಕೆ ವಸ್ತುಗಳ ಖರೀದಿಗೆ ತೆರಳುವಾಗ ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧರಿಸುವುದು ಕಡ್ಡಾಯವಾಗಿರಲಿದೆ.

ಈ ಸಂಬಂಧ ಟ್ವೀಟ್ ಮೂಲಕ ರಾಜ್ಯದ ಜನತೆಗೆ ಸಿಎಂ ಬಿಎಸ್ ಯಡಿಯೂರಪ್ಪ ಮನವಿ ಮಾಡಿದ್ದು, ಇದೇ ಸೋಮವಾರ ಲಾಕ್ಡೌನ್ ಮಾರ್ಗಸೂಚಿ ಬಿಡುಗಡೆ ಮಾಡುತ್ತೇವೆ. ಸರ್ಕಾರ ಹೊರಡಿಸುವ ಲಾಕ್ ಡೌನ್ ಸಂಬಂಧಿತ ಎಲ್ಲಾ ಮಾರ್ಗಸೂಚಿಗಳನ್ನು ಸಾರ್ವಜನಿಕರು ಪಾಲಿಸಿ ಸಹಕರಿಸಬೇಕಿದೆ. ತಾವು ಲಾಕ್‍ಡೌನ್ ಸಂದರ್ಭದಲ್ಲಿ ಮನೆಯಲ್ಲೇ ಇರುವ ಮೂಲಕ ಕೋವಿಡ್-19ರ ನಿಯಂತ್ರಣಕ್ಕೆ ಕೈ ಜೋಡಿಸಿ ಎಂದು ಸಿಎಂ ಯಡಿಯೂರಪ್ಪ ಅವರು ಮನವಿ ಮಾಡಿಕೊಂಡಿದ್ದಾರೆ.

ಅಂತೆಯೇ ಕೋವಿಡ್-19 ಸೋಂಕು ಹರಡುವುದನ್ನು ನಿಯಂತ್ರಿಸಲು ಹಗಲಿರಳು ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಮತ್ತು ಪೊಲೀಸ್ ಸಿಬ್ಬಂದಿಗಳು ಹಾಗೂ ಎಲ್ಲಾ ಅಧಿಕಾರಿಗಳು, ಸ್ವಯಂ ಸೇವಕರು ಮನೆ ಮನೆಗೂ ಕೋವಿಡ್-19 ಕುರಿತು ಮಾಹಿತಿ ನೀಡುತ್ತಿರುವ ಪತ್ರಕರ್ತರು ಮತ್ತು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರ್ಯನಿರ್ವಹಿಸುತ್ತಿರುವ ಎಲ್ಲರಿಗೂ ನಾನು ಇನ್ನೊಮ್ಮೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

Comments are closed.