ಕರ್ನಾಟಕ

ಹತ್ಯೆ ಪ್ರಕರಣದಲ್ಲಿ ಟಿಕ್‍ಟಾಕ್ ಸ್ಟಾರ್ ನವೀನ್ ಸೇರಿ ನಾಲ್ವರು ಪೊಲೀಸರಿಗೆ ಶರಣು

Pinterest LinkedIn Tumblr

ಬೆಂಗಳೂರು: ಕಾರ್ಪೋರೇಟರ್ ಅಣ್ಣನ ಮಗನ ಕೊಲೆ ಮಾಡಿರುವ ಪ್ರಕರಣದಲ್ಲಿ ಟಿಕ್‍ಟಾಕ್ ಸ್ಟಾರ್ ನವೀನ್ ಸೇರಿದಂತೆ ನಾಲ್ವರು ಪೊಲೀಸರಿಗೆ ಶರಣಾಗಿದ್ದಾರೆ.

ಬುಧವಾರ ಕಗ್ಗಲಿಪುರ ಬಳಿ ಕಾರ್ಪೋರೇಟರ್ ಸೋಮಣ್ಣನ ಅಣ್ಣನ ಮಗ ವಿನೋದನನ್ನು ತಲೆ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಕೊಲೆ ಪ್ರಕರಣದಲ್ಲಿ ಟಿಕ್‍ಟಾಕ್ ಸ್ಟಾರ್ ನವೀನ್ ಅಲಿಯಾಸ್ ಸ್ಮೈಲ್ ನವೀನ್ ಮತ್ತು ರೌಡಿ ಶೀಟರ್ ಮಂಜೇಶ್ ಕುಮಾರ್ ಅಲಿಯಾಸ್ ಅವಲಹಳ್ಳಿ ಮಂಜ ಸೇರಿದಂತೆ ನಾಲ್ವರು ಆರೋಪಿಗಳು ಕಗ್ಗಲಿಪುರ ಪೊಲೀಸ್ ಠಾಣೆಗೆ ತಡರಾತ್ರಿ ಬಂದು ಶರಣಾಗಿದ್ದಾರೆ.

ಮೊಬೈಲ್ ಹಿಡಿದುಕೊಂಡು ಟಿಕ್‍ಟಾಕ್ ಮಾಡಿ ಫೇಮಸ್ ಆಗಿದ್ದ ನವೀನ್ ಈಗ ಲಾಂಗ್ ಹಿಡಿದು ರೌಡಿಯಾಗಿದ್ದಾನೆ. ಕಗ್ಗಲಿಪುರದಲ್ಲಿ ಒಬ್ಬನೇ ಬರುತ್ತಿದ್ದ ವಿನೋದ್‍ನನ್ನು ಅಡ್ಡಿಗಟ್ಟಿದ್ದ ಈ ನಾಲ್ವರು ಬ್ಯಾಟ್ ಹಾಗೂ ಆಯುಧಗಳಿಂದ ಆತನನ್ನು ಕೊಚ್ಚಿ, ತಲೆಯನ್ನು ಜಜ್ಜಿ ಬರ್ಬರವಾಗಿ ಕೊಲೆ ಮಾಡಿದ್ದರು. ಈ ಕೊಲೆಯ ಮೂಲಕ ಮಂಜ ತನ್ನ ಗುರುವನ್ನು ಕೊಂದವರ ವಿರುದ್ಧ ರಿವೇಂಜ್ ತೆಗೆದುಕೊಂಡಿದ್ದಾನೆ.

2013ರಲ್ಲಿ ತಲಘಟ್ಟಪುರ ರೌಡಿ ಶೀಟರ್ ಮಂಜನ ಗುರು ಕೆಂಬತ್ತಹಳ್ಳಿ ಪರಮೇಶನ ಕೊಲೆಯಾಗಿತ್ತು. ಈ ಕೊಲೆಗೆ ವಿನೋದ್ ಸಾಥ್ ನೀಡಿದ್ದ. ಪರಮೇಶನನ್ನು ನಾಗ ಮತ್ತವನ ತಂಡ ಕೊಲೆ ಮಾಡಿತ್ತು. ಇದಕ್ಕೆ ವಿನೋದ್ ಹಣ ಸಹಾಯ ಮಾಡಿದ್ದ. ಈ ಕೊಲೆಯ ಪ್ರತಿಕಾರವಾಗಿ ಮಂಜ, ನಾಗ ಮತ್ತು ಅವನ ಸ್ನೇಹಿತನ್ನು ಡಬಲ್ ಮರ್ಡರ್ ಮಾಡಿ ಜೈಲು ಸೇರಿದ್ದ. ಕಳೆದ ಐದು ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದ.

ಈ ನಂತರ ಜಮೀನಿನ ವಿಷಯದಲ್ಲಿ ವಿನೋದ ಮತ್ತು ಮಂಜ ತಕರಾರು ಮಾಡಿಕೊಂಡಿದ್ದರು. ಈ ಮೊದಲೇ ಗುರುವಿನ ಕೊಲೆ ಸಾಥ್ ನೀಡಿದ್ದಕ್ಕೆ ವಿನೋದನ ಮೇಲೆ ಮಂಜ ಕತ್ತಿ ಮಸೆಯುತ್ತಿದ್ದ. ಹೀಗಾಗಿ ತನ್ನ ಜೊತೆ ಪುಡಿ ರೌಡಿಯಾಗಿದ್ದ ಸ್ಮೈಲ್ ನವೀನನ್ನು ಸೇರಿಸಿಕೊಂಡು ವಿನೋದ್ ಕೊಲೆಗೆ ಸ್ಕೆಚ್ ಹಾಕಿದ್ದ. ಅಂತಯೇ ಬುಧವಾರ ವಿನೋದನನ್ನು ಕೊಲೆ ಮಾಡಿದ್ದರು. ಈ ಸಂಬಂಧ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Comments are closed.