ಕರ್ನಾಟಕ

ಹೊಸಕೋಟೆ ಶಾಸಕ ಶರತ್‌ ಬಚ್ಚೇಗೌಡಗೆ ಕೊರೊನಾ ವೈರಸ್ ದೃಢ

Pinterest LinkedIn Tumblr


ಬೆಂ.ಗ್ರಾಮಾಂತರ: ಇಡೀ ವಿಶ್ವವನ್ನೇ ನಡುಗಿಸಿರುವ ಕೊರೊನಾ ವೈರಸ್‌ ಜನಪ್ರತಿನಿಧಿಗಳನ್ನು ಬಿಡುತ್ತಿಲ್ಲ. ಈಗಾಗಲೇ ಅನೇಕ ಸಂಸದರು ಹಾಗೂ ಶಾಸಕರು ಸೋಂಕಿಗೆ ತುತ್ತಾಗಿದ್ದಾರೆ. ಈಗ ಆ ಪಟ್ಟಿಗೆ ಹೊಸ ಸೇರ್ಪಡೆ ಎಂಬಂತೆ ಹೊಸಕೋಟೆ ಶಾಸಕ ಶರತ್‌ ಬಚ್ಚೇಗೌಡ ಸೇರಿದ್ದಾರೆ.

ಹೌದು, ಶಾಸಕ ಶರತ್‌ ಬಚ್ಚೇಗೌಡ ಅವರಿಗೆ ಬುಧವಾರ ಸೋಂಕು ದೃಢವಾಗಿದೆ. ಅವರ ಜೊತೆ ಅವರ ಪತ್ನಿ ಪ್ರತಿಭಾ ಶರತ್‌ ಅವರಿಗೂ ಕೂಡ ಕೊರೊನಾ ತಗುಲಿದೆ. ಈ ಬಗ್ಗೆ ಸ್ವತಃ ಶರತ್‌ ಬಚ್ಚೇಗೌಡ ಫೇಸ್‌ಬುಕ್‌ನಲ್ಲಿ ತಿಳಿಸಿದ್ದು, ಮನೆಯಲ್ಲಿಯೇ ಕ್ವಾರಂಟೈನ್‌ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ.

ಜುಲೈ 6, ಸೋಮವಾರದಂದು ಸ್ವಲ್ಪ ಮೈ ಕೈ ನೋವು ಕಾಣಿಸಿಕೊಂಡಿತ್ತು. ನಿರಂತರವಾಗಿ ಕ್ಷೇತ್ರದ ಕಾರ್ಯಗಳಲ್ಲಿ ತೊಡಗಿದ್ದರಿಂದ ಮತ್ತು ಕೊರೊನಾ ಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟಿದ್ದರಿಂದ, ಕೋವಿಡ್ 19 ಪರೀಕ್ಷೆಗೆ ನಾನು ಮತ್ತು ನನ್ನ ಧರ್ಮಪತ್ನಿ ಶ್ರೀಮತಿ ಪ್ರತಿಭಾ ಶರತ್ ಒಳಗಾಗಿದ್ದೇವು ಎಂದು ಶರತ್‌ ತಿಳಿಸಿದ್ದಾರೆ.

ಬುಧವಾರ ಸಂಜೆ ಇಬ್ಬರಿಗೂ ಪಾಸಿಟಿವ್‌ ಎಂಬ ವರದಿ ಬಂದಿದ್ದು, ಕೊರೊನಾ ವೈರಸ್‌ನ ಯಾವುದೇ ರೋಗ ಲಕ್ಷಣ ಕಂಡುಬಂದಿಲ್ಲ. ಆದ್ದರಿಂದ ವೈದ್ಯರಿಂದ ಅಗತ್ಯ ಸಲಹೆಗಳನ್ನು ತೆಗೆದುಕೊಂಡು, ಮನೆಯಲ್ಲಿಯೇ ಕ್ವಾರಂಟೈನ್‌ಗೆ ಒಳಪಟ್ಟಿದ್ದೇವೆ ಎಂದು ಅವರು ಹೇಳಿದ್ದಾರೆ.

ಈಗಾಗಲೇ ಅವರನ್ನು ಭೇಟಿಯಾದ ವ್ಯಕ್ತಿಗಳ ವಿವರಗಳನ್ನು ಸರಕಾರಕ್ಕೆ ನೀಡಿದ್ದು, ಪ್ರಾಥಮಿಕ ಸಂಪರ್ಕದಲ್ಲಿರುವವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿದೆ. ಇನ್ನು, ಮಂಡ್ಯ ಸಂಸದೆ ಸುಮಲತಾ, ಕುಣಿಗಲ್‌ ಶಾಸಕ ಡಾ.ರಂಗನಾಥ್ ಸೇರಿ ಅನೇಕ ಜನಪ್ರತಿನಿಧಿಗಳಿಗೆ ಸೋಂಕು ದೃಢವಾಗಿದೆ.

Comments are closed.