ಕರ್ನಾಟಕ

ಕೊರೊನಾ ಅಧಿಕವಾಗಿರುವ ಕಡೆ ಲಾಕ್‌ಡೌನ್‌ಗೆ ಚಿಂತನೆ – ಬಿ ಶ್ರೀರಾಮುಲು‌

Pinterest LinkedIn Tumblr


ದಾವಣಗೆರೆ: ರಾಜ್ಯದ ಯಾವ ಭಾಗದಲ್ಲಿ ಕೊರೊನಾ ಸೋಂಕಿತರು ಹೆಚ್ಚು ಕಂಡು ಬರುತ್ತಿದ್ದಾರೆಯೋ ಆ ಪ್ರದೇಶದಲ್ಲಿ ಮಾತ್ರ ಲಾಕ್‌ಡೌನ್‌ ಮಾಡುವ ಚಿಂತನೆ ಸರಕಾರದ ಮುಂದಿದೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ತಿಳಿಸಿದರು.

ನಗರದ ಜಿಲ್ಲಾ ಚಿಗಟೇರಿ ಆಸ್ಪತ್ರೆ ಆವರಣದಲ್ಲಿ ಶನಿವಾರ ತಾಯಿ ಮತ್ತು ಮಕ್ಕಳ 100 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತ್ತೊಮ್ಮೆ ರಾಜ್ಯಾವ್ಯಾಪಿ ಲಾಕ್‌ಡೌನ್‌ ಮಾಡುವ ಉದ್ದೇಶ ಸರಕಾರಕ್ಕೆ ಇಲ್ಲ. ಆದರೆ ಹೆಚ್ಚು ಪ್ರಕರಣಗಳು ಕಂಡು ಬರುತ್ತಿರುವ ಪ್ರದೇಶಗಳಲ್ಲಿ ಲಾಕ್‌ ಡೌನ್‌ ಹೇರುವ ಚಿಂತನೆ ಸರಕಾರದ ಮುಂದಿದ್ದು, ಪರಿಶೀಲನೆ ನಡೆಸುತ್ತಿದ್ದೇವೆ ಎಂದರು.

ಕುಣಿಯಲು ಬಾರದೇ ಇದ್ದವರು ನೆಲಡೊಂಕು ಅಂದ್ರು
ಮಾಸ್ಕ್‌, ಸ್ಯಾನಿಟೈಸರ್‌ ಖರೀದಿಯಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ. ಕುಣಿಯಲು ಬಾರದವರಿಗೆ ನೆಲ ಡೊಂಕು ಎಂಬಂತೆ ವಿಪಕ್ಷಗಳು ವರ್ತಿಸುತ್ತಿವೆ. ಕೋವಿಡ್‌ ಸಂದರ್ಭದಲ್ಲಿ ವಿಪಕ್ಷದವರು ಏನು ಕೆಲಸ ಮಾಡಿದ್ದಾರೆ. ಕೇವಲ ಆರೋಪದಿಂದ ಪ್ರಯೋಜನವಿಲ್ಲ ಎಂದರು.

ನಿರ್ದಿಷ್ಟ ಸಾಕ್ಷಿ ನೀಡಲಿ

ಮಾಜಿ ಸಿಎಂ ಸಿದ್ದರಾಮಯ್ಯರವರಿಗೆ ಮುಖ್ಯಮಂತ್ರಿಗಳಾಗಿ ಕೆಲಸ ಮಾಡಿದ ಅನುಭವ ಇದೆ. ರಾಜ್ಯದಲ್ಲಿ ಕೊರೊನಾ ನಿಯಂತ್ರಣ ವಿಚಾರದಲ್ಲಿ ಪ್ರಧಾನಿಗಳೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಇಂಥಹ ಸಂದರ್ಭದಲ್ಲಿ ಕೇವಲ ಪ್ರಚಾರಕ್ಕಾಗಿ ಸಿದ್ದರಾಮಯ್ಯ ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ. ಆರೋಪ ಮಾಡುವುದಾದರೆ ನಿರ್ದಿಷ್ಟವಾದ ಸಾಕ್ಷಿಗಳನ್ನು ಇಟ್ಟುಕೊಂಡು ಮಾಡಬೇಕು. ಈ ರೀತಿಯ ಆರೋಪ ಮಾಡುವವರಿಗೆ ಸರಿಯಾದ ದಾಖಲೆಗಳನ್ನು ನೀಡಲು ಸಿದ್ದರಿದ್ದೇವೆ. ಶ್ವೇತಪತ್ರ ಹೊರಡಿಸಲು ಸಿದ್ಧವಿರುವುದಾಗಿ ಬಿ ಶ್ರೀರಾಮುಲು ತಿಳಿಸಿದರು.

ತನಿಖೆಗೆ ಸಿದ್ಧ

ಕೊರೊನಾ ಕಿಟ್‌ ಇತರೆ ಪರಿಕರಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದ್ದರೆ ಯಾವುದೇ ತನಿಖೆಗೆ ನಾವು ಸಿದ್ದರಿದ್ದೇವೆ. ಮಾಹಿತಿ ಹಕ್ಕು ಕಾಯಿದೆ ಅಡಿ ಬೇಕಾದ ಮಾಹಿತಿ ಪಡೆಯಲು ಅವಕಾಶವಿದೆ. ಇಂಥಹ ಪರಿಸ್ಥಿತಿಯಲ್ಲಿ ನಮ್ಮ ಸರಕಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸುಳ್ಳು ಆರೋಪ ಮಾಡಬಾರದು. ಕಾಂಗ್ರೆಸ್‌ ಕಾರ್ಯಕರ್ತರು ಮುಖಂಡರು ಕೊರೊನಾ ನಿಯಂತ್ರಣಕ್ಕೆ ಯಾವುದೇ ಸಹಕಾರ ನೀಡಿಲ್ಲ. ಈ ರೀತಿಯ ಆರೋಪ ಮಾಡುವುದನ್ನು ಬಿಟ್ಟು ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಮುಖಂಡರು ಕೊರೊನಾ ನಿಯಂತ್ರಣಕ್ಕೆ ಸರಕಾರದ ಜೊತೆ ಕೈ ಜೋಡಿಸಲಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಚಿವ ಭೈರತಿ ಬಸವರಾಜ್‌, ಸಂಸದ ಸಿದ್ದೇಶ್‌, ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ, ಎಸ್‌.ಎ.ರವೀಂದ್ರನಾಥ್‌ ಇತರರು ಇದ್ದರು.

Comments are closed.