ಬೆಂಗಳೂರು: ಇಡೀ ದೇಶದ ಗಮನ ಸೆಳೆದಿದ್ದ ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ಕೊರೋನಾ ಸೋಂಕಿನ ನಡುವೆಯೂ ಬಹುತೇಕ ಯಶಸ್ವಿಯಾಗಿ ನಿರ್ವಹಿಸಲಾಗಿದೆ.
ಎಂಟು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೋಂಕು ನಿಯಂತ್ರಣ ಕ್ರಮಗಳ ನಡುವೆ ಪರೀಕ್ಷೆ ಬರೆದಿದ್ದಾರೆ. ಶನಿವಾರ ಕೊನೆಯ ಪರೀಕ್ಷೆ ಇದ್ದು, ಈವರೆಗೆ ನಿರಾತಂಕವಾಗಿ ಪರೀಕ್ಷೆ ನಡೆದಿದೆ. ಈ ಮೂಲಕ ಇಡೀ ದೇಶಕ್ಕೆ ರಾಜ್ಯ ಸರ್ಕಾರ ಸಂದೇಶ ರವಾನಿಸಿದೆ.
ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಗಳನ್ನು ನಡೆಸುವ ಬಗ್ಗೆಯೇ ಹಲವು ದಿನ ಚರ್ಚೆ ನಡೆದಿತ್ತು. ಅನೇಕ ಭಿನ್ನಾಭಿಪ್ರಾಯಗಳ ನಡುವೆ ಎಸ್ಎಸ್ಎಲ್ಸಿ ಪರೀಕ್ಷೆಗಳನ್ನು ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿತು.
ಪರೀಕ್ಷೆ ಸುಗಮವಾಗಿ ನಡೆಯಲು ಹಲವು ಇಲಾಖೆಗಳ ಹೆಚ್ಚುವರಿ ಸಿಬ್ಬಂದಿಯ ನೆರವು ಪಡೆದು ಚುನಾವಣೆ ಸಂದರ್ಭದಲ್ಲಿ ವಹಿಸುವಷ್ಟು ಮುನ್ನೆಚ್ಚರಿಕೆ ಕೈಗೊಳ್ಳಲಾಗಿತ್ತು.
ಪ್ರತಿಯೊಬ್ಬ ವಿದ್ಯಾರ್ಥಿಗೂ ಮಾಸ್ಕ್, ಸ್ಯಾನಿಟೈಸರ್ ನೀಡುವ ಮೂಲಕ ವ್ಯಕ್ತಿಗತ ಅಂತರ ಕಾಯ್ದುಕೊಳ್ಳಲು ಕ್ರಮ ತೆಗೆದುಕೊಳ್ಳಲಾಗಿತ್ತು. ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಅತ್ಯಂತ ಎಚ್ಚರಿಕೆ ವಹಿಸುತ್ತಿರುವ ಕುರಿತು ಪ್ರತಿಯೊಬ್ಬ ಪೋಷಕರಿಗೂ ಭರವಸೆ ನೀಡಲಾಗಿತ್ತು. ಕೊರೋನಾ ಸೋಂಕಿನಿಂದ ಈಗ ಪರೀಕ್ಷೆ ಬರೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ನಡೆಸುವಾಗ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ಅಂತಹ ವಿದ್ಯಾರ್ಥಿಗಳಿಗೆ ಮೊದಲ ಪ್ರಯತ್ನ ಎಂದೇ ಪ್ರಮಾಣ ಪತ್ರದಲ್ಲಿ ನಮೂದಿಸಲಾಗುವುದು ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕಿ ಸುಮಂಗಲ ಸಂತಸ ವ್ಯಕ್ತಪಡಿಸಿದರು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಕೊನೆಯ ದಿನವಾದ ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅನೇಕಲ್ ತಾಲೂಕಿನ ವಿವಿಧ ಎಸ್.ಎಸ್.ಎಲ್.ಸಿ. ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ, ಕೋವಿಡ್-19 ನಿಯಂತ್ರಣಕ್ಕೆ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಕುರಿತು ಪರಿಶೀಲನೆ ನಡೆಸಿದರು.
ಬಳಿಕ ಅವರು ಕೊರೋನಾ ಸೋಂಕಿನಿಂದ ಎಸ್ಎಸ್ಎಲ್ಸಿ ಪರೀಕ್ಷೆಗೆ ಗೈರಾಗಿರುವವರಿಗೆ ಪೂರಕ ಪರೀಕ್ಷೆಯಲ್ಲಿ ಅವಕಾಶ ಕಲ್ಪಿಸಲಾಗುವುದು. ಪರೀಕ್ಷಾ ಕೇಂದ್ರಗಳಲ್ಲಿ ಸೋಂಕು ತಡೆಗೆ ಕಟ್ಟುನಿಟ್ಟಿನ ಕ್ರಮವಹಿಸಲಾಗಿದೆ ಎಂದರು.
ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಮಾನವೀಯತೆ ದೃಷ್ಟಿಯಿಂದ ಯಾವುದೇ ಶಾಲೆಗಳು ಶುಲ್ಕವನ್ನು ಹೆಚ್ಳಳ ಮಾಡಬಾರದು, ಶುಲ್ಕ ಪಾವತಿ ಸಂಬಂಧ ಹಲವು ಶಾಲೆಗಳು ಪೋಷಕರಿಗೆ ಒತ್ತಡ ಹೇರುತ್ತಿದ್ದು, ಈ ಕುರಿತು ದೂರುಗಳ ದಾಖಲೆಗೆ ಸಹಾಯವಾಣಿ ತೆರೆದಿದ್ದು, ಪರೀಕ್ಷೆ ನಂತರ ಖುದ್ದು ಪರಿಶೀಲಿಸಿ ಸೂಕ್ತ ಕ್ರಮ ಕೈಗೂಳ್ಳಲಾಗುವುದು ಎಂದು ತಿಳಿಸಿದರು.
Comments are closed.