ಕರ್ನಾಟಕ

ಬೆಂಗಳೂರಿನ ಪರಪ್ಪನ ಅಗ್ರಹಾರದ 20 ಕೈದಿಗಳು, 6 ಸಿಬ್ಬಂದಿಗೆ ಕೊರೋನಾ ಸೋಂಕು

Pinterest LinkedIn Tumblr


ಬೆಂಗಳೂರು (ಜು. 2): ಬೆಂಗಳೂರಿನಲ್ಲಿ ಈಗಾಗಲೇ 30ಕ್ಕೂ ಹೆಚ್ಚು ಪೊಲೀಸ್ ಠಾಣೆಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿರುವುದರಿಂದ ಸೀಲ್​ಡೌನ್ ಮಾಡಲಾಗಿದೆ. ಬಂಧಿತರಾಗುವ ಕೈದಿಗಳಿಂದ ಜೈಲುಗಳಲ್ಲಿ ಕೊರೋನಾ ಆತಂಕ ಹೆಚ್ಚಾಗಿದೆ. ಇಂತಹ ಹಲವಾರು ಪ್ರಕರಣಗಳು ಬೆಂಗಳೂರಿನಲ್ಲಿ ಕಾಣಿಸಿಕೊಂಡಿದ್ದರಿಂದ ಎಷ್ಟೇ ಎಚ್ಚರ ವಹಿಸಿದರೂ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ.

ಬೆಂಗಳೂರಿನ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರ ಜೈಲಿನಲ್ಲೂ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಇಲ್ಲಿನ ಬರೋಬ್ಬರಿ 26 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. 20 ವಿಚಾರಣಾಧೀನ ಕೈದಿಗಳು, ಆರು ಮಂದಿ ಜೈಲಿನ ಸಿಬ್ಬಂದಿಗೆ ಕೊರೋನಾ ದೃಢಪಟ್ಟಿದೆ. ಪರಪ್ಪನ ಅಗ್ರಹಾರ ಕಾರಾಗೃಹದ ಹೊರಗಿರುವ ವಿಶೇಷ ಜೈಲಿನಲ್ಲಿರುವ ಕೈದಿಗಳಿಗೆ ಸೋಂಕು ಕಾಣಿಸಿಕೊಂಡಿದೆ. ಕೊರೋನಾ ಭೀತಿಯಿಂದಾಗಿ ಹೊಸದಾಗಿ ಬಂಧಿತರಾದ ವಿಚಾರಣಾಧೀನ ಕೈದಿಗಳನ್ನು ಪರಪ್ಪನ ಅಗ್ರಹಾರದ ಹೊರಗಿರುವ ಮಹಿಳಾ ವಿಶೇಷ ಜೈಲಿನಲ್ಲಿ ಇರಿಸಿ, ಕ್ವಾರಂಟೈನ್ ಮಾಡಲಾಗುತ್ತಿತ್ತು. ಆ ಆರೋಪಿಗಳಲ್ಲಿ 20 ಜನರಿಗೆ ಸೋಂಕು ದೃಢಪಟ್ಟಿದೆ.

ಜೈಲಿನ ಸಿಬ್ಬಂದಿಗೆ ಪಾಸಿಟಿವ್ ಬಂದ ಬೆನ್ನಲ್ಲೇ ಹೊಸ ಭಯ ಶುರುವಾಗಿದೆ. ವಿಶೇಷ ಮಹಿಳಾ ಜೈಲಿನಲ್ಲಿ ಕೆಲಸ ಮಾಡುತ್ತಿದ್ದ ಆರು ಮಂದಿ ಸಿಬ್ಬಂದಿ ಕೇಂದ್ರ ಕಾರಾಗೃಹಕ್ಕೂ ಬಂದು ಹೋಗಿದ್ದರು. ಜೈಲಿನ ಒಳಗಡೆ ಕೆಲಸಕ್ಕೆ ಅವರನ್ನು ನಿಯೋಜಿಸಿರಲಿಲ್ಲವೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ, ಕಾರಾಗೃಹದಲ್ಲಿ ಕೆಲಸ ನಿರ್ವಹಿಸ್ತಿದ್ದ ಕೆಲ ಆತ್ಮೀಯ ಸಿಬ್ಬಂದಿ ಜೊತೆ ಅವರು ಓಡಾಡಿದ್ದರು. ಹೀಗಾಗಿ, ಸೆಂಟ್ರಲ್ ಜೈಲಿನಲ್ಲಿ ಯಾರಿಗಾದರೂ ಸೋಂಕು ಕಾಣಿಸಿಕೊಂಡರೆ ಏನು ಮಾಡೋದು ಎಂಬ ಭಯ ಕಾಡುತ್ತಿದೆ. ಈಗಾಗಲೇ ಕೊರೋನಾ ಪಾಸಿಟಿವ್ ಬಂದ ಸಿಬ್ಬಂದಿಯ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಲಾಗಿದೆ.

ಜೈಲಿನ ಹೊರ ಭಾಗದಲ್ಲಿ ಓಡಾಡಿದ್ದ ಕೆಲ ಸಿಬ್ಬಂದಿಗೂ ತಪಾಸಣೆ ಮಾಡಿಸಲು ಸಿದ್ದತೆ ನಡೆಸಲಾಗಿದೆ. ಇನ್ನು ವಿಶೇಷ ಜೈಲಿನಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿ ಕಾರಾಗೃಹದ ಕಡೆ ಬರದಂತೆ ಸೂಚಿಸಲಾಗಿದೆ. ಕಾರಾಗೃಹದಲ್ಲಿ ಐದು ಸಾವಿರಕ್ಕೂ ಹೆಚ್ಚು ಕೈದಿಗಳಿದ್ದು ಜೈಲಾಧಿಕಾರಿಗಳಲ್ಲಿ ಆತಂಕ ಬೇರೆ ಶುರುವಾಗಿದೆ. ಅಷ್ಟೇ ಅಲ್ಲದೆ ವಿಶೇಷ ಮಹಿಳಾ ಜೈಲಿನಲ್ಲಿ ಕೆಲಸ ಮಾಡಲು ಉಳಿದ ಸಿಬ್ಬಂದಿಗೆ ಭಯ ಶುರುವಾಗಿದ್ದು, ಅಧಿಕಾರಿಗಳು ಧೈರ್ಯ ಹೇಳಿದ್ದಾರೆ.

ಈ ನಡುವೆ ಜೈಲಿನಲ್ಲಿ ಎಲ್ಲಾ ಕೈದಿಗಳಿಗೂ ಬ್ಯಾರಕ್ ಬಿಟ್ಟು ಹೊರ ಬರದಂತೆ ಸೂಚಿಸಲಾಗಿದೆ.. ಹಾಗೇ ಸಿಬ್ಬಂದಿ ಸುಮ್ಮನೆ ವಿಚಾರಣಾಧಿನಾ ಕೈದಿಗಳೊಂದಿಗೆ ಚರ್ಚಿಸದಂತೆ ಖಡಕ್ ವಾರ್ನಿಂಗ್ ಕೊಡಲಾಗಿದೆ. ವಿಚಾರಣಾಧೀನ ಕೈದಿಗಳು ಉಳಿದಿದ್ದ ಬ್ಯಾರಕ್ ಗಳನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದ್ದು,ಯಾರೂ ಆ ಕಡೆ ಹೋಗದಂತೆ ನಿರ್ಬಂಧಿಸಲಾಗಿದೆ..

Comments are closed.