ಕರ್ನಾಟಕ

ರಾಜ್ಯದಲ್ಲಿ 11 ವೈದ್ಯರು, 11 ನರ್ಸ್‌ಗಳಿಗೆ ಕೊರೋನಾ ಸೋಂಕು!

Pinterest LinkedIn Tumblr


ಬೆಂಗಳೂರು: ಕೊರೊನಾ ಸೋಂಕು ದೇಶಕ್ಕೆ ಕಾಲಿಟ್ಟ ನಂತರ ವೈದ್ಯರುಗಳು ಬಿಡುವಿಲ್ಲದೆ ದುಡಿಯುತ್ತಿದ್ದಾರೆ. ಇಡೀ ದೇಶವೇ ಬಿಳಿ ಕೋಟು ಧರಿಸುವ ವೈದ್ಯರುಗಳು ಹಾಗೂ ನರ್ಸ್‌ಗಳಿಗೆ ಎಷ್ಟೇ ಧನ್ಯವಾದ ಸಲ್ಲಿಸಿದರು ಕಮ್ಮಿಯೇ. ಇದೀಗ ತಮ್ಮ ಜೀವವನ್ನು ಪಣಕ್ಕಿಟ್ಟು ಜನರ ರಕ್ಷಣೆಗೆ ನಿಂತಿರುವ ವೈದ್ಯರನ್ನು ಈ ಮಹಾಮಾರಿ ಕೊರೊನಾ ಕಾಡುತ್ತಿದೆ. ರಾಜ್ಯದ 11 ವೈದ್ಯರು ಹಾಗೂ 11 ನರ್ಸ್‌ಗಳಿಗೆ ಜೂ.30ರಂದು ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ದಕ್ಷಿಣ ಕನ್ನಡದ 10 ವೈದ್ಯರಿಗೆ ಕೊರೊನಾ ಸೋಂಕು ಇರುವುದು ಖಚಿತವಾಗಿದೆ. ಕಳೆದ ಎರಡು ತಿಂಗಳಿನಿಂದ ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿಕೊಂಡಿದ್ದ ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಯ ಮುಖ್ಯ ವೈದ್ಯರಿಗೆ ಸೋಂಕು ತಗುಲಿದ್ದು, ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಇನ್ನು ಮುಖ್ಯ ವೈದ್ಯರಿಗೆ ಸೋಂಕು ತಗುಲಿದ ಹಿನ್ನೆಲೆ ಅವರ ಸಂಪರ್ಕಕ್ಕೆ ಬಂದ ಆಸ್ಪತ್ರೆಯ ವೈದ್ಯರುಗಳು ಹಾಗೂ ಸಿಬ್ಬಂದಿಗಳು ಹೋಂ ಕ್ವಾರಂಟೈನ್‌ಗೆ ಒಳಪಟ್ಟಿದ್ದಾರೆ. ಇನ್ನು ಮಂಗಳೂರಿನ ಮೂರು ಖಾಸಗಿ ಆಸ್ಪತ್ರೆಯ ಒಂಭತ್ತು ವೈದ್ಯರುಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಆಸ್ಪತ್ರೆಗಳ ಆರುವತ್ತಕ್ಕೂ ಹೆಚ್ಚು ಸಿಬ್ಬಂದಿಗಳನ್ನ ಕ್ವಾರಂಟೈನ್‌ ಮಾಡಲಾಗಿದೆ.

ಸಚಿವರುಗಳ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೈದ್ಯೆ!
ಇನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಒಬ್ಬ ವೈದ್ಯೆ ಹಾಗೂ 11 ನರ್ಸ್‌ಗಳಿಗೆ ಕೊರೊನಾ ಸೋಂಕು ತಗಲಿರುವುದು ಖಚಿತವಾಗಿದೆ. ವೈದ್ಯೆಯು ಸಚಿವರು ಹಾಗೂ ಶಾಸಕರು ಏರ್ಪಡಿಸಿದ್ದ ಸಭೆಯಲ್ಲಿ ಭಾಗವಹಿಸಿದ್ದರು. ಆದರೆ, ಅವರೆಲ್ಲರೂ ಕ್ವಾರಂಟೈನ್‌ಗೊಳಗಾಗುವ ಕುರಿತು ಖಚಿತವಾಗಿಲ್ಲ. ಕಂದಾಯ ಸಚಿವ ಆರ್‌.ಅಶೋಕ್‌, ಎಸ್‌.ಆರ್‌.ವಿಶ್ವನಾಥ್‌, ಸಂಸದ ತೇಜಸ್ವಿ ಸೂರ್ಯ ಅವರು ವಿಕ್ಟೋರಿಯಾದಲ್ಲಿ ನಡೆದಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದರು.

ಆಸ್ಪತ್ರೆಯ ಚಟುವಟಿಕೆಗಳ ಕುರಿತು ವೈದ್ಯೆ ಸಭೆಗೆ ಮಾಹಿತಿ ನೀಡಿದ್ದರು. ವೈದ್ಯೆ ಲಕ್ಷಣ ರಹಿತರಾಗಿದ್ದು, ಮನೆಯಲ್ಲೇ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಇವರೂ ಸೇರಿದಂತೆ ಈವರೆಗೆ ಒಟ್ಟು 12 ನರ್ಸ್‌ಗಳು, 8 ವೈದ್ಯರು ಮತ್ತು 3 ಗ್ರೂಪ್‌ ಡಿ ನೌಕರರು ಸೋಂಕಿತರಾಗಿದ್ದಾರೆ. ಸೋಂಕಿಗೊಳಗಾದ ವ್ಯಕ್ತಿಯ ಜತೆ 15 ನಿಮಿಷವಿದ್ದರೆ ಅವರನ್ನು ಪ್ರಾಥಮಿಕ ಸಂಪರ್ಕ ಎಂದು ಪರಿಗಣಿಸಿ ಕ್ವಾರಂಟೈನ್‌ ಮಾಡಬೇಕೆಂಬ ನಿಯಮವಿದೆ. ಆದರೆ ಸಚಿವರು, ಶಾಸಕರ ಕ್ವಾರಂಟೈನ್‌ ಬಗ್ಗೆ ಮಾಹಿತಿ ಇಲ್ಲ.

Comments are closed.