ನವದೆಹಲಿ (ಜೂ. 1): ಕೊರೋನಾ ಆರ್ಭಟ ಹೆಚ್ಚಾಗಿರುವುದರಿಂದ ಬಹುತೇಕ ಎಲ್ಲ ದೇಶಗಳೂ ಬೇರೆ ದೇಶಗಳ ಜನರ ಪ್ರಯಾಣದ ಮೇಲೆ ನಿರ್ಬಂಧ ವಿಧಿಸಿವೆ. ಬಹುತೇಕ ದೇಶಗಳಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರಕ್ಕೆ ಅವಕಾಶ ನೀಡುತ್ತಿಲ್ಲ. ಭಾರತದಲ್ಲಿಯೂ ಇದೇ ನಿಯಮವನ್ನು ಜಾರಿಗೊಳಿಸಲಾಗಿದೆ. ಆದರೆ, ಐರೋಪ್ಯ ರಾಷ್ಟ್ರಗಳ ಒಕ್ಕೂಟ ಇಂದಿನಿಂದ 15 ದೇಶಗಳ ಜನರಿಗೆ ತನ್ನ ಗಡಿಯೊಳಗೆ ಪ್ರವೇಶಿಸಲು ಅನುಮತಿ ನೀಡಿದೆ. ಆ ಪಟ್ಟಿಯಲ್ಲಿ ಅಮೆರಿಕ, ಭಾರತ, ಬ್ರೆಜಿಲ್, ರಷ್ಯಾದ ಹೆಸರನ್ನು ಕೈಬಿಡಲಾಗಿದೆ.
ವಿಶ್ವದ ಕೊರೋನಾ ಸೋಂಕಿತರ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದೆ. ಬ್ರೆಜಿಲ್, ರಷ್ಯಾ, ಭಾರತ ಟಾಪ್ ನಾಲ್ಕರ ಸ್ಥಾನದಲ್ಲಿದೆ. ಈ ದೇಶಗಳಲ್ಲಿ ಕೊರೋನಾ ಅತಿಹೆಚ್ಚಾಗಿ ಮತ್ತು ವೇಗವಾಗಿ ಹರಡುತ್ತಿರುವುದರಿಂದ ಈ ದೇಶಗಳ ಜನರಿಗೆ ಯುರೋಪ್ ರಾಷ್ಟ್ರಗಳಿಗೆ ಪ್ರಯಾಣಿಸಲು ಅವಕಾಶ ನಿರಾಕರಿಸಲಾಗಿದೆ. ಕೊರೋನಾ ಸೋಂಕಿಗೆ ಕಾರಣವಾದ ದೇಶವಾದ ಚೀನಾದಲ್ಲಿ ಈಗಾಗಲೇ ಕೇಸ್ಗಳು ಕಡಿಮೆಯಾಗುತ್ತಿವೆ. ಹೀಗಾಗಿ, ಈನಾಗೂ ಯುರೋಪ್ ರಾಷ್ಟ್ರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.
ಕೊರೋನಾ ಸೋಂಕು ವಿಪರೀತವಾಗಿ ವ್ಯಾಪಿಸಲು ಆರಂಭಿಸಿದ ಬಳಿಕ ಬೇರೆ ದೇಶಗಳಿಂದ ಬರುವವರಿಗೆ ಐರೋಪ್ಯ ಒಕ್ಕೂಟದ ಸದಸ್ಯ ರಾಷ್ಟ್ರಗಳು ನಿರ್ಬಂಧ ಹೇರಿದ್ದವು. ಕೊರೋನಾ ವೈರಸ್ ಹರಡುವುದನ್ನು ತಡೆಯುವ ಸಲುವಾಗಿ ಐರೋಪ್ಯೇತರ ಪ್ರಜೆಗಳಿಗೆ ದೇಶದ ಗಡಿಗಳನ್ನು ಮುಚ್ಚುವ ನಿರ್ಧಾರವನ್ನು ಮಾರ್ಚ್‌ನಲ್ಲಿ ಕೈಗೊಳ್ಳಲಾಗಿತ್ತು. ಇದಕ್ಕೂ ಮೊದಲು ಅಮೆರಿಕ ಕೂಡ ಯುರೋಪ್ ದೇಶಗಳಿಗೆ ಪ್ರವಾಸ ಹೋಗುವುದನ್ನು ನಿರ್ಬಂಧಿಸಿತ್ತು.
ಇದೀಗ 15 ದೇಶಗಳ ಪ್ರಜೆಗಳಿಗೆ ಯುರೋಪ್ ರಾಷ್ಟ್ರಗಳಿಗೆ ಪ್ರಯಾಣ ಬೆಳೆಸಲು ಅನುಮತಿ ನೀಡಲಾಗಿದೆ. ಅವುಗಳಲ್ಲಿ ಐರೋಪ್ಯ ರಾಷ್ಟ್ರಗಳ ಒಕ್ಕೂಟದ ಸದಸ್ಯ ರಾಷ್ಟ್ರಗಳೂ ಸೇರಿವೆ. ಆಸ್ಟ್ರೇಲಿಯ, ಅಲ್ಜೀರಿಯ, ಕೆನಡಾ, ಗಾರ್ಜಿಯ, ಜಪಾನ್, ಮೋಟೆನೆಗ್ರೋ, ಮೊರೊಕ್ಕೋ, ನ್ಯೂಜಿಲೆಂಡ್, ರ್ವಾಂಡಾ, ಸೆರ್ಬಿಯಾ, ಸೌತ್ ಕೊರಿಯಾ, ಥೈಲ್ಯಾಂಡ್, ತುನಿಸಿಯ, ಉರುಗ್ವೆ ದೇಶಗಳ ಜನರು ಯುರೋಪ್ ಪ್ರವಾಸ ಕೈಗೊಳ್ಳಬಹುದಾಗಿದೆ. ಪರಿಸ್ಥಿತಿಯನ್ನು ನೋಡಿಕೊಂಡು ಇನ್ನೂ ಹೆಚ್ಚಿನ ದೇಶಗಳಿಗೆ ಅನುಮತಿ ನೀಡಲಾಗುವುದು.
Comments are closed.