ಬೆಂಗಳೂರು (ಜು. 1): ವಿಶ್ವವನ್ನೇ ಕಂಗೆಡಿಸಿರುವ ಕೊರೋನಾ ವೈರಸ್ಗೆ ಡಾ. ಗಿರಿಧರ್ ಕಜೆ ಕಂಡುಹಿಡಿದಿರುವ ಔಷಧ ಪ್ರಯೋಗ ಯಶಸ್ವಿಯಾಗಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆದಿದ್ದು, ಕೊರೋನಾ ರೋಗಿಗಳಿಗೆ ನೀಡಿದ ಚಿಕಿತ್ಸೆ ಯಶಸ್ವಿಯಾಗಿದೆ. ಜೂನ್ 7ರಿಂದ ಜೂನ್ 25ರ ನಡುವೆ ಈ ವೈದ್ಯಕೀಯ ಪ್ರಯೋಗವನ್ನು ನಡೆಸಲಾಗಿತ್ತು.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ 23 ವರ್ಷದಿಂದ 65 ವರ್ಷದವರೆಗಿನ ಕೊರೋನಾ ರೋಗಿಗಳಿಗೆ ಈ ಚಿಕಿತ್ಸೆ ನೀಡಲಾಗಿತ್ತು. ಕೇವಲ ಎರಡರಿಂದ ನಾಲ್ಕು ದಿನಗಳಲ್ಲಿ ಸೋಂಕಿತರ ಶೀತ, ಕೆಮ್ಮು, ಜ್ವರ, ಸುಸ್ತು, ತಲೆನೋವು, ಉಸಿರಾಟದ ತೊಂದರೆ ಸಂಪೂರ್ಣ ಗುಣಮುಖವಾಗಿದೆ. 3ರಿಂದ 9 ದಿನಗಳಲ್ಲಿ ರೋಗಿಗಳ RT PCR ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದೆ.
ಹೃದ್ರೋಗ, ಕ್ಷಯ ರೋಗ, ಹೈಪರ್ ಟೆನ್ಷನ್, ಮಧುಮೇಹ ಇದ್ದ ರೋಗಿಗಳು ಗುಣಮುಖರಾಗಿದ್ದಾರೆ. ಕೊರೋನಾ ರೋಗ ಮುಂದಿನ ಹಂತಕ್ಕೆ ಹೋಗದೆ ಎಲ್ಲರಲ್ಲೂ ಗುಣವಾಗಿದೆ. ಅಡ್ಡ ಪರಿಣಾಮಗಳಲ್ಲದ ಚಿಕಿತ್ಸೆಯನ್ನು ನೀಡಿ ಕೊರೋನಾ ಸ್ಟಾಂಡರ್ಡ್ ಕೇರ್ನ ಜೊತೆಗೆ ಆರ್ಯುವೇದ ಔಷಧಿಗಳಿಂದ ಚಿಕಿತ್ಸೆ ನೀಡಲಾಗಿದೆ. ಅತಿ ಕಡಿಮೆ ವೆಚ್ಚದ ಚಿಕಿತ್ಸೆ ಇದಾಗಿದ್ದು, ಈ ಪ್ರಯೋಗ ಯಶಸ್ವಿಯಾಗಿದೆ.
ಆಯುರ್ವೇದದ ಈ ಔಷಧಿ ನೀಡುವುದರಿಂದ ಒಬ್ಬ ರೋಗಿಯ ಔಷಧಕ್ಕೆ 90ರಿಂದ 180 ರೂ. ತಗುಲುತ್ತದೆ. 23 ವರ್ಷಗಳಿಂದ ಆಯುರ್ವೇದ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಆಯುರ್ವೇದ ವೈದ್ಯ ಗಿರಿಧರ ಕಜೆ ತಾವು ಕಂಡುಹಿಡಿದ ಔಷಧನ್ನು ಪ್ರಯೋಗ ಮಾಡಲು ರಾಜ್ಯ ವೈದ್ಯಕೀಯ ಇಲಾಖೆ ಬಳಿ ಅನುಮತಿ ಪಡೆದಿದ್ದರು.
Comments are closed.