ಕರ್ನಾಟಕ

ಕೊರೊನಾ: ಗ್ರಾಹಕರಿಲ್ಲದೆ ಶೇ.40ರಷ್ಟು ಹೋಟೆಲ್‌ಗಳು ಬಂದ್‌

Pinterest LinkedIn Tumblr


ಮೈಸೂರು: ಲಾಕ್‌ಡೌನ್‌ ಬಳಿಕ ಹೋಟೆಲ್‌ಗಳು ಆರಂಭವಾದರೂ ಗ್ರಾಹಕರು ಬಾರದೆ ಮತ್ತೊಮ್ಮೆ ಮುಚ್ಚುತ್ತಿವೆ. ಹಲವು ಶಾಶ್ವತವಾಗಿ ಬಾಗಿಲು ಹಾಕಲು ತಯಾರಿ ನಡೆಸುತ್ತಿದ್ದು, ಕೆಲವೆಡೆ ಹೋಟೆಲ್‌ಗಳನ್ನೇ ಮಾರಾಟಕ್ಕಿಡಲಾಗಿದೆ. ಹಿಂದೆಂದೂ ಕಾಣದ ಶೋಚನೀಯ ಸ್ಥಿತಿಗೆ ಆತಿಥ್ಯ ವಲಯ ತಲುಪಿದ್ದು, ಸದ್ಯಕ್ಕೆ ಚೇತರಿಸಿಕೊಳ್ಳುವ ಲಕ್ಷಣಗಳು ಕಾಣಿಸುತ್ತಿಲ್ಲ.

”ನಾವೇ ಕೋಲು ಕೊಟ್ಟು ಹೊಡೆಸಿಕೊಂಡ ಸ್ಥಿತಿಯಲ್ಲಿದ್ದೇವೆ. ಹೋಟೆಲ್‌ಗಳನ್ನು ಆರಂಭಿಸಿ ಎಂದು ಮನವಿ ಕೊಟ್ಟವರು ನಾವೇ. ಇದೀಗ ತೆರೆದ ನಂತರ ಇರುವುದನ್ನೂ ಕಳೆದುಕೊಂಡು ಒಂದೊಂದೇ ಹೋಟೆಲ್‌ಗಳನ್ನು ಮುಚ್ಚುತ್ತಿದ್ದೇವೆ. ನಾನು ಕೂಡ ಈ ಸ್ಥಿತಿಯಿಂದ ಹೊರತಾಗಿಲ್ಲ. ಬೆಂಗಳೂರಿನ ಸೈಂಟ್‌ ಮಾರ್ಕ್ಸ್‌ ರಸ್ತೆಯಲ್ಲಿರುವ ಹೋಟೆಲ್‌ ಮುಚ್ಚಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ,”ಎನ್ನುತ್ತಾರೆ ಕರ್ನಾಟಕ ಪ್ರದೇಶ ಹೋಟೆಲ್‌ ಹಾಗೂ ರೆಸ್ಟೋರೆಂಟ್‌ ಮಾಲೀಕರ ಸಂಘದ ಅಧ್ಯಕ್ಷ ಬಿ.ಚಂದ್ರಶೇಖರ್‌ ಹೆಬ್ಬಾರ್‌.

ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆ
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಗ್ರಾಹಕರು ಹೋಟೆಲ್‌ಗಳತ್ತ ಬರುತ್ತಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಟೇಬಲ್‌ಗಳನ್ನು ಪ್ರತ್ಯೇಕವಾಗಿ ಜೋಡಿಸಿ, ಥರ್ಮಲ್‌ ಸ್ಕ್ರೀನಿಂಗ್‌ ವ್ಯವಸ್ಥೆ ಮಾಡಿದರೂ ಗ್ರಾಹಕರಿಗೆ ನಂಬಿಕೆ ಬರುತ್ತಿಲ್ಲ. ಎರಡು ತಿಂಗಳ ಕಾಲ ಮುಚ್ಚಿ ಮತ್ತೆ ಸಾವಿರಾರು ರೂ. ವೆಚ್ಚ ಮಾಡಿ ಪುನರಾರಂಭ ಮಾಡಿದರೂ ಜನರಿಲ್ಲದ ಹಿನ್ನೆಲೆಯಲ್ಲಿ ಭಾರಿ ನಷ್ಟಕ್ಕೆ ತುತ್ತಾಗುತ್ತಿದ್ದಾರೆ. ಕೆಲವು ಹೋಟೆಲ್‌ಗಳನ್ನು ಇದ್ದ ಸ್ಥಿತಿಯಲ್ಲಿ ಮಾರಾಟ ಮಾಡಲು ಖರೀದಿದಾರರನ್ನು ಹುಡುಕುತ್ತಿದ್ದಾರೆ. ಇನ್ನು ಕೆಲವು ಹೋಟೆಲ್‌ಗಳ ಪೀಠೋಪಕರಣಗಳನ್ನು ಮಾರಾಟಕ್ಕಿಡಲಾಗಿದೆ.

ರಮ್ಯ ಮಹೇಂದ್ರ ಇಂದು ಕೊನೆ
ಒಂದು ಕಾಲದಲ್ಲಿ ಹೋಟೆಲ್‌ ರಮ್ಯ ಮಹೇಂದ್ರ ಎಂದರೆ ಜನರು ಮುಗಿ ಬೀಳುತ್ತಿದ್ದರು. ಅದರಲ್ಲಿಯೂ ಇಲ್ಲಿನ ಮಸಾಲೆ ದೋಸೆ ಸವಿಯದವರು ಅಪರೂಪ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಅಚ್ಚುಮೆಚ್ಚಿನ ಹೋಟೆಲ್‌. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಇಲ್ಲಿಗೆ ತೆರಳಿ ದೋಸೆ ಸೇವಿಸುತ್ತಿದ್ದರು. ಈಗ ಹೋಟೆಲ್‌ ನಡೆಸಲು ಸಾಧ್ಯವಾಗದೆ ಮುಚ್ಚುತ್ತಿದ್ದಾರೆ. ಭಾನುವಾರ ತನ್ನ ಸೇವೆಯ ಕೊನೆಯ ದಿನ ಎಂದು ಹೋಟೆಲ್‌ ಪ್ರಕಟಣೆ ಹೊರಡಿಸಿದೆ.

ನಮ್ಮ ನಿರೀಕ್ಷೆ ಬುಡಮೇಲಾಗಿದೆ. ಹೋಟೆಲ್‌ಗಳು ಹಾಗೂ ಲಾಡ್ಜ್‌ಗಳಿಗೆ ಸದ್ಯಕ್ಕೆ ಜನರು ಬರುವ ಯಾವುದೇ ಲಕ್ಷಣಗಳಿಲ್ಲ. ಬಾಡಿಗೆ ಕಟ್ಟಡದಲ್ಲಿರುವ ಬಹುತೇಕ ಹೋಟೆಲ್‌ಗಳನ್ನು ಮುಚ್ಚಲಾಗುತ್ತಿದೆ. ಸದ್ಯಕ್ಕೆ ಪರಿಹಾರ ಕಾಣುತ್ತಿಲ್ಲ.

ನಾರಾಯಣ ಗೌಡ, ಮೈಸೂರು ಜಿಲ್ಲಾಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷರು

Comments are closed.