ಕರ್ನಾಟಕ

ಅನೈತಿಕ ಸಂಬಂಧ: ಅಮ್ಮನಿಂದಲೇ ನವವಿವಾಹಿತ ಪುತ್ರನ ಹತ್ಯೆ

Pinterest LinkedIn Tumblr


ಧಾರವಾಡ: ಹುಟ್ಟುತ್ತಾ ಅಣ್ಣ-ತಮ್ಮಂದಿರು, ಬೆಳೆಯುತ್ತಾ ದಾಯಾದಿಗಳು ಅನ್ನೋದು ಸಹೋದರರಿಗೆ ಸಂಬಂಧಿಸಿದ ಮಾತು. ಅದೇ ರೀತಿ ಜಗತ್ತಿನಲ್ಲಿ ಕೆಟ್ಟ ಮಕ್ಕಳಿರುತ್ತವೆಯೇ ಹೊರತು ಕೆಟ್ಟ ತಾಯಿ ಇರಲು ಸಾಧ್ಯವೇ ಇಲ್ಲ ಅನ್ನೋದು ಕೂಡ ಇದೆ. ದಾಯಾದಿ ಕಲಹ ಸಾಮಾನ್ಯವೆ. ಆದರೆ ತಾಯಿಯೇ ಕ್ರೂರಿಯಾಗಿ ಮಗನ ಕೊಲೆಗೆ ಟೊಂಕ ಕಟ್ಟಿ ನಿಂತರೆ..? ನಂಬಲು ಸಾಧ್ಯವಿಲ್ಲ. ಆದರೆ ಅಂಥ ತಾಯಿಯೊಬ್ಬಳು ಪ್ರಿಯಕರನ ಜೊತೆ ಸೇರಿ ಮಗನನ್ನು ಕೊಂದುಹಾಕಿದ ಘಟನೆ ಧಾರವಾಡದಲ್ಲಿ ಬೆಳಕಿಗೆ ಬಂದಿದೆ.

ಹನುಮಂತಗೌಡ ಪಾಟೀಲ್. ವಯಸ್ಸು ಈಗ ತಾನೇ 28 ವರ್ಷ. ಧಾರವಾಡ ತಾಲೂಕಿನ ನುಗ್ಗಿಕೇರಿ ಗ್ರಾಮದ ಈ ಯುವಕ ಲಾರಿ, ಟ್ರಕ್ ಚಾಲಕನಾಗಿ ದುಡಿಮೆ ಮಾಡಿಕೊಂಡು ಚೆನ್ನಾಗಿ ಜೀವನ ‌ನಡೆಸುತ್ತಿರುತ್ತಾನೆ. ಮೂರು ವರ್ಷಗಳ ಹಿಂದೆ ಬೇರೆ ಜಾತಿಯ ಯಶೋಧಾಳನ್ನು ಮದುವೆಯಾಗಿ ಕರೆದುಕೊಂಡು ಬಂದಿರುತ್ತಾನೆ. ತಾನಾಯಿತು, ತನ್ನ ಸಂಸಾರವಾಯಿತು ಅನ್ನುವಂತಿದ್ದ ಹನುಮಂತನ ಬದುಕಿನಲ್ಲಿ ನಡೆಯಬಾರದ ಘಟನೆಯೊಂದು ಸಂಭವಿಸಿ ಹೋಗುತ್ತದೆ.

ಈತನ ತಂದೆ ಐದಾರು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ತೀರಿಕೊಂಡಿರುತ್ತಾರೆ. ಮನೆಯ ಜವಾಬ್ದಾರಿ ಈತನ ಮೇಲೆಯೇ ಬಿದ್ದಿರುತ್ತದೆ. ಇದೆಲ್ಲದರ ನಡುವೆ ಆತನಿಗೆ ಕಾಡಿದ್ದು ಒಂದೇ ಸಮಸ್ಯೆ ಅಂದರೆ ಅದು ತನ್ನ ತಾಯಿಯ ಅನೈತಿಕ ಸಂಬಂಧ.

ಧಾರವಾಡ ನಗರದ ನವಲೂರು ಬಡಾವಣೆಯ ಮಹಾದೇವ ಗಾಯಕವಾಡ್ ಅನ್ನೋ ವ್ಯಕ್ತಿಯೊಂದಿಗೆ ತಾಯಿ ಸುನಂದಾ ಕಳೆದ 20 ವರ್ಷಗಳಿಂದಲೂ ಅನೈತಿಕ ಸಂಬಂಧ ಹೊಂದಿರುತ್ತಾಳೆ. ಅದು ಆಕೆಯ ಪತಿ ಸೋಮನಗೌಡನಿಗೂ ಗೊತ್ತಾಗಿ ಸಾಕಷ್ಟು ಬಾರಿ ಜಗಳಗಳೂ ಆಗಿರುತ್ತದೆ. ಆದರೆ ಯಾವಾಗ ಸೋಮನಗೌಡ ಮೃತಪಟ್ಟನೋ ಆಗ ಮಹಾದೇವ ನೇರವಾಗಿ ಬಂದು ಸುನಂದಾಳ ಮನೆಯಲ್ಲಿಯೇ ಠಿಕಾಣಿ ಹೂಡಿರುತ್ತಾನೆ. ಆಗಲೇ ನೋಡಿ ಸಮಸ್ಯೆ ಶುರುವಾಗುತ್ತದೆ.

ಮಹಾದೇವ ಈ ಮನೆಯಲ್ಲಿರೋದು ಹನುಮಂತನಿಗೆ ಕಿರಿಕಿರಿಯುಂಟು ಮಾಡತೊಡಗುತ್ತದೆ. ಹೀಗಾಗಿ ತಾನು ಇರೋ ಮನೆಯಲ್ಲಿಯೇ ಎರಡು ಭಾಗ ಮಾಡಿ, ತಾನು ಪ್ರತ್ಯೇಕವಾಗಿ ವಾಸ ಮಾಡಬೇಕೆಂದು ಆತ ನಿರ್ಧರಿಸುತ್ತಾನೆ. ಇದಕ್ಕೆ ಮನೆಯಲ್ಲಿಯೇ ವಿರೋಧ ವ್ಯಕ್ತವಾಗುತ್ತದೆ. ತಾಯಿ ಮತ್ತು ಸಹೋದರ ಇಬ್ಬರೂ ಇದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಾರೆ. ಆದರೆ ಅದಕ್ಕೆ ಜಗ್ಗದ ಹನುಮಂತ ಗ್ರಾಮದ ಹಿರಿಯರನ್ನೆಲ್ಲಾ ಕರೆಯಿಸಿ, ಪಂಚಾಯತಿ ಮಾಡಿಸುತ್ತಾನೆ. ಕೊನೆಗೆ ಹಿರಿಯರೆಲ್ಲಾ ಸೇರಿ ಮನೆಯ ಅರ್ಧ ಭಾಗದಲ್ಲಿ ಪ್ರತ್ಯೇಕ ಗೋಡೆ ಕಟ್ಟಿಕೊಂಡು ವಾಸ ಮಾಡುವಂತೆ ಸಮಸ್ಯೆ ಇತ್ಯರ್ಥಪಡಿಸುತ್ತಾರೆ. ಆದರೆ ಒಳಗೊಳಗೇ ಹನುಮಂತನ ಮೇಲೆ ಮೂವರೂ ಕೂಡ ಹಗೆತನ ಸಾಧಿಸುವುದನ್ನ ಮುಂದುವರೆಸುತ್ತಾರೆ.

ಕಳೆದ ವಾರ ಪತ್ನಿ ಯಶೋಧಾ ತವರು ಮನೆಗೆ ಹೋಗಿರುತ್ತಾಳೆ. ಬುಧವಾರ ರಾತ್ರಿ ಹನುಮಂತ ಹಾಗೂ ಮೂವರ ನಡುವೆ ಜಗಳ ಶುರುವಾಗಿದೆ. ಆಗ ಭೀಮನಗೌಡ ಖಾರದ ಪುಡಿಯನ್ನು ತಂದು ಅಣ್ಣನಿಗೆ ಎರಚಿದ್ದಾನೆ. ಕಣ್ಣಿಗೆ ಖಾರದ ಪುಡಿ ಬೀಳುತ್ತಿದ್ದಂತೆಯೇ ನೆಲಕ್ಕೆ ಬಿದ್ದ ಹನುಮಂತನ ಕಾಲು-ಕೈಗಳನ್ನು ಹಗ್ಗದಿಂದ ಕಟ್ಟಲಾಗಿದೆ. ಬಳಿಕ ದೊಣ್ಣೆಗಳಿಂದ ಹಿಗ್ಗಾಮುಗ್ಗಾ ಥಳಿಸಿ, ಕೊಂದಿದ್ದಾರೆ. ರಾತ್ರೋರಾತ್ರಿ ಶವವನ್ನು ಮನೆಯ ಹೊರಭಾಗದಲ್ಲಿ ಎಸೆದು ಅಲ್ಲಿಂದ ಪರಾರಿಯಾಗಿದ್ದಾರೆ. ಬೆಳಿಗ್ಗೆ ಗ್ರಾಮದವರ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣವನ್ನು ಭೇದಿಸಿ, ಇದೀಗ ಮೂವರನ್ನೂ ಬಂಧಿಸಿ ಜೈಲಿಗಟ್ಟಿದ್ದಾರೆ.ಇದನ್ನೂ ಓದಿ: ವಿಜಯಪುರ ಯುವಕನ ಸಾವು ಪ್ರಕರಣ; ಪೋಷಕರು, ಪೊಲೀಸರ ಹೇಳಿಕೆ ಬೇರೆ ಬೇರೆ, ಹಾಗಾದರೆ ಸತ್ಯಾಂಶವೇನು?

ಈ ಮಧ್ಯೆ ಸುನಂದಾಳ ಪತಿ ಸೋಮನಗೌಡನ ಸಾವಿನ ಬಗ್ಗೆಯೂ ಅನೇಕ ಪ್ರಶ್ನೆಗಳು ಎದ್ದಿವೆ. ಏಕೆಂದರೆ ಐದಾರು ವರ್ಷಗಳ ಹಿಂದೆ ಅದು ಅಪಘಾತ ಅಂತಾ ನಮೂದಾಗಿದೆಯಾದರೂ ಅದು ಆಗಿದ್ದು ಹೇಗೆ ಅನ್ನೋದರ ಬಗ್ಗೆ ಗ್ರಾಮಸ್ಥರಿಗೆ ಅನುಮಾನವಿದೆ.

ಒಟ್ಟಿನಲ್ಲಿ ಮಗನನ್ನೇ ಕೊಲ್ಲೋ ಮನಸ್ಥಿತಿಗೆ ತಾಯಿ ಹೋದರೆ, ಸಮಾಜದಲ್ಲಿ ಆ ಶಬ್ದಕ್ಕೆ ಇರೋ ಗೌರವ ಉಳಿದಯೋದಾದರೂ ಹೇಗೆ ಅನ್ನೋದೇ ಇದೀಗ ಎಲ್ಲರನ್ನ ಕಾಡುತ್ತಿರುವ ಪ್ರಶ್ನೆ.

Comments are closed.