ಕರ್ನಾಟಕ

ಹಾಸನದಲ್ಲಿ 10ನೇ ತರಗತಿ ವಿದ್ಯಾರ್ಥಿಗೆ ಕರೋನಾ ಪಾಸಿಟಿವ್

Pinterest LinkedIn Tumblr


ಹಾಸನ (ಜೂನ್ 27); ಹಾಸನದಲ್ಲಿ ಒಟ್ಟು 16 ಕೊರೋನಾ ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿದ್ದು, ಅರಕಲಗೂಡು ಮಲ್ಲಿ ಪಟ್ಟಣದ ಸರ್ಕಾರಿ ಶಾಲೆಯಲ್ಲಿ ಪರೀಕ್ಷೆ ಬರೆಯುತ್ತಿದ್ದ ಓರ್ವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗೆ ಕರೋನಾ ಪಾಸಿಟಿವ್ ದೃಢಪಟ್ಟಿರುವುದು ಇದೀಗ ಜಿಲ್ಲೆಯ ಜನರಲ್ಲಿ ಮತ್ತಷ್ಟು ಆತಂಕವನ್ನು ಸೃಷ್ಟಿಸಿದೆ.

ಡೆಂಗ್ಯೂ ಜ್ವರದಿಂದ ಅರಕಲಗೂಡು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿಯಲ್ಲಿ ಕೊರೋನಾ ಗುಣ ಲಕ್ಷಣಗಳು ಕಂಡು ಬಂದಿರಲಿಲ್ಲ. ಜ್ವರದ ಲಕ್ಷಣ ಇರಲಿಲ್ಲ ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಕೋವಿಡ್ ಪರೀಕ್ಷೆ ಮಾಡಿಸಲಾಗಿತ್ತು. ಇದೀಗ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಕಂಡು ಬಂದಿದೆ. ಹೀಗಾಗಿ ಈತನ ಜೊತೆಗೆ ಪರೀಕ್ಷಾ ಕೇಂದ್ರದಲ್ಲಿದ್ದ 18 ಮಕ್ಕಳು, ಒಬ್ಬರು ಶಿಕ್ಷಕರಿಗೆ ಕೋವಿಡ್ ಪರೀಕ್ಷೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಗಿರೀಶ್ ತಿಳಿಸಿದ್ದಾರೆ.

ಕೊರೋನಾ ಪಾಸಿಟಿವ್ ಕಂಡು ಬಂದ ವಿದ್ಯಾರ್ಥಿಗೆ ಥರ್ಮಲ್ ಸ್ಕ್ಯಾನ್‌ನಲ್ಲಿ ಯಾವುದೇ ಲಕ್ಷಣ ಇಲ್ಲ. ಕೊರೋನಾ ಲಕ್ಷಣ ಕಂಡು ಬರದ ಹಿನ್ನೆಲೆ ಒಟ್ಟಿಗೆ ಪರೀಕ್ಷೆ ಬರೆಸಿದ್ದೆವು ಎಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.

ಕೊರೋನಾ ಪಾಸಿಟಿವ್ ವಿದ್ಯಾರ್ಥಿಯನ್ನು ಎಲ್ಲರೊಟ್ಟಿಗೆ ಪರೀಕ್ಷೆ ಬರೆಸಿದ್ದಕ್ಕೆ ಜಿಲ್ಲಾಧಿಕಾರಿ ಗಿರೀಶ್ ಸಮರ್ಥನೆ ಮಾಡಿಕೊಂಡಿದ್ದು,”ಕೊರೋನಾ ಪಾಸಿಟಿವ್ ಬಂದ ವಿದ್ಯಾರ್ಥಿ ಜೊತೆ ಪರೀಕ್ಷೆ ಬರೆದಿದ್ದ ಉಳಿದ ವಿದ್ಯಾರ್ಥಿಗಳು ಮುಂದಿನ ಪರೀಕ್ಷೆ ಬರೆಯುವ ಬಗ್ಗೆಯೂ ಆತಂಕವಿದೆ. ಈ ಬಗ್ಗೆ ಇನ್ನೂ ಅಂತಿಮ‌ ನಿರ್ಧಾರ ಆಗಿಲ್ಲ” ಎಂದು ಮಾಹಿತಿ ನೀಡಿದ್ದಾರೆ.

ಅಲ್ಲದೆ, “ಈ ಬಗ್ಗೆ ಶಿಕ್ಷಣ ಇಲಾಖೆಗೆ ಮಾಹಿತಿ ಸಮೇತ ಪತ್ರ ಬರೆದಿದ್ದೇವೆ. ಪಾಸಿಟಿವ್ ಬಂದಿರುವ ವಿದ್ಯಾರ್ಥಿ ಜೊತೆ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಮುಂದೆ ಯಾವ ರೀತಿ ಪರೀಕ್ಷೆಗೆ ಅವಕಾಶ ನೀಡಬೇಕು ಎಂಬ ಮಾಹಿತಿ ಕೇಳಿದ್ದೇವೆ. ನಾಳೆ ಮಧ್ಯಾಹ್ನದ ವೇಳೆಗೆ ಈ ಬಗ್ಗೆ ಶಿಕ್ಷಣ ಇಲಾಖೆಯಿಂದ ಖಚಿತ ಮಾಹಿತಿ ಬರಲಿದೆ” ಎಂದು ಅವರು ತಿಳಿಸಿದ್ದಾರೆ.

Comments are closed.