ಬೆಂಗಳೂರು: ಕರಾವಳಿಯಲ್ಲಿ ಮಾತ್ರ ಚುರುಕಾಗಿರುವ ಮುಂಗಾರು ಸೋಮವಾರದಿಂದ ದಕ್ಷಿಣ ಒಳನಾಡಿನಲ್ಲೂ ಚುರುಕಾಗಿದೆ. ಜೂ.25ರ ನಂತರ ದಕ್ಷಿಣ ಒಳನಾಡಿನ ಎಲ್ಲೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಉತ್ತರ ಒಳನಾಡಿನಲ್ಲಿ ನೈಋುತ್ಯ ಮುಂಗಾರು ದುರ್ಬಲಗೊಂಡಿದೆ. ಕರಾವಳಿಯಲ್ಲಿ ಭಾರಿ ಮಳೆಯಾಗುತ್ತಿದ್ದು, ದಕ್ಷಿಣ ಒಳನಾಡಿನ ಕೆಲ ಭಾಗಗಳಲ್ಲಿ ಮಾತ್ರ ಸಾಧಾರಣ ಮಳೆ ಸುರಿಯುತ್ತಿದೆ.
“ದಕ್ಷಿಣ ಒಳನಾಡಿನಲ್ಲಿ ಮುಂಗಾರು ಮತ್ತೆ ಚುರುಕಾಗಿದ್ದು, ಜೂನ್ 25ರ ನಂತರ ಉತ್ತಮ ಮಳೆಯಾಗಲಿದೆ. ಅನುಕೂಲಕರ ವಾತಾವರಣವಿದ್ದರೆ ರಾಜ್ಯದಲ್ಲಿ ವ್ಯಾಪಕವಾಗಿ ಮಳೆಯಾಗುವ ಸಾಧ್ಯತೆ ಇದೆ,” ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್. ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ.
ಕದ್ರಾ, ಸುಬ್ರಹ್ಮಣ್ಯದಲ್ಲಿ 90 ಮಿ.ಮೀ., ಕೊಲ್ಲೂರಿನಲ್ಲಿ 80 ಮಿ.ಮೀ., ಉಪ್ಪಿನಂಗಡಿ, ಕಾರ್ಕಳದಲ್ಲಿ 70 ಮಿ.ಮೀ., ಪುತ್ತೂರು, ಬೆಳ್ತಂಗಡಿಯಲ್ಲಿ 60 ಮಿ.ಮೀ., ಸುಳ್ಯ, ಮಾಣಿ, ಧರ್ಮಸ್ಥಳ, ಭಾಗಮಂಡಲ, ಬೆಂಗಳೂರು ಕೆಐಎಎಲ್, ತಿಪಟೂರಿನಲ್ಲಿ 50 ಮಿ.ಮೀ., ಪಣಂಬೂರು, ಕುಂದಾಪುರ, ಸಿದ್ದಾಪುರದಲ್ಲಿ 40 ಮಿ.ಮೀ., ಮೂಡಬಿದಿರೆ, ಕೋಟ, ಗೋಕರ್ಣ, ಅಂಕೋಲಾ, ಮಡಿಕೇರಿಯಲ್ಲಿ 30 ಮಿ.ಮೀ. ಮಳೆಯಾಗಿದೆ.
Comments are closed.