ಕರ್ನಾಟಕ

ಕೊರೋನಾ ತಡೆಗೆ ಸಿಎಂ ಯಡಿಯೂರಪ್ಪ ತೆಗೆದುಕೊಂಡ ಕ್ರಮಕ್ಕೆ ಬೆನ್ನುತಟ್ಟಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ

Pinterest LinkedIn Tumblr

ಬೆಂಗಳೂರು: ಕೊರೋನಾ ಸೋಂಕು ಹರಡದಂತೆ ತಡೆಯಲು ದೆಹಲಿ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತಮಿಳುನಾಡಿನಲ್ಲಿ ಅಲ್ಲಿನ ಸರ್ಕಾರಗಳು ಸಾಕಷ್ಟು ಪರಿಶ್ರಮ ಪಡುತ್ತಿದ್ದು, ಈ ನಡುವೆ ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅತ್ಯಂತ ಕ್ಷಿಪ್ರಗತಿಯಲ್ಲಿ ಪೂರ್ವಭಾವಿ ಕ್ರಮಗಳನ್ನು ಕೈಗೊಂಡು ರಾಜ್ಯದಲ್ಲಿ ಸೋಂಕು ಹರಡದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರು ಶಹಬ್ಬಾಸ್ ಗಿರಿ ನೀಡಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಒಂದು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಭಾನುವಾರ ವರ್ಚುವಲ್ ವಿಡಿಯೋ ಕಾನ್ಫರೆನ್ಸ್ ಮೂಲಕ ಕರ್ನಾಟಕ ಜನ ಸಂವಾದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ಕೊಂಡಾಡಿದ್ದಾರೆ.

ಲಾಕ್’ಡೌನ್ ನಿಂದಾಗಿ ಸಂಕಷ್ಟಕ್ಕೆ ಒಳಗಾದ ಬಡವರು, ಕಾರ್ಮಿಕರು ಮುಂತಾದವರಿಗೆ ಮೋದಿ ಅವರ ಮಾದರಿಯಲ್ಲಿಯೇ ಯಡಿಯೂರಪ್ಪ ಅವರು ಆರ್ಥಿಕ ನೆರವು, ದಿನಸಿ, ಆಹಾರದ ಪ್ಯಾಕೆಟ್ ಗಲನ್ನು ನೀಡಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಸೋಂಕು ಹರಡದಂತೆ ತಡೆಯುವಲ್ಲಿ ಯಡಿಯೂರಪ್ಪ ನೇತೃತ್ವದ ತಂಡ ಅತ್ಯಂತ ಯಶಸ್ವಿಯಾಗಿದೆ. ನಾಲ್ಕು ಟಿ ಸೂತ್ರ ಮೂಲಕ ರಾಜ್ಯ ಹಾಗೂ ರಾಜಧಾನಿಯಲ್ಲಿ ಸೋಂಕು ತಡೆಯುವ ಕೆಲಸವನ್ನು ಮಾಡಲಾಗಿದೆ. ಕೋವಿಡ್ ಫಾರ್ಮೇಷನ್ ಸೆಂಟರ್ ಪೋರ್ಟಲ್ ಮೂಲಕ ಎಲ್ಲಾ ಕ್ವಾರಂಟೈನ್ ಕೇಂದ್ರ ಹಾಗೂ ಆಸ್ಪತ್ರೆಗಳನ್ನು ಜೋಡಿಸಲಾಗಿದೆ.

ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಆಸ್ಪತ್ರೆ, ಕೋವಿಡ್ ರೆಸ್ಪಾನ್ಸ್ ಟೀಮ್ ರಚನೆ ಮಾಡಿದ್ದಾರೆ. ಅದೇ ರೀತಿ ವಲಸೆ ಕಾರ್ಮಿಕರಿಗೆ ನೆರವಾಗಲು ಸಹಾಯವಾಣಿ ಸ್ಥಾಪಿಸಿದ್ದಾರೆ.

ಈ ಸಂಖ್ಯೆಗೆ ತೊಂದರೆಯಲ್ಲಿರುವ ಕಾರ್ಮಿಕ ಫೋನ್ ಮಾಡಿದರೆ ಹಿರಿಯ ಅಧಿಕಾರಿ ಅದನ್ನು ಸ್ವೀಕರಿಸಿ, ಆತ ಇದ್ದ ಸ್ಥಳಕ್ಕೆ ಊಟ ಪೂರೈಸುವ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಮಾಡಿದೆ. ಇದಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆಂದು ತಿಳಿಸಿದ್ದಾರೆ.

ಸಂಕಷ್ಟದ ಸಮಯದಲ್ಲಿಯೂ ರಾಜ್ಯ ಸರ್ಕಾರ ಭೂ ಸುಧಾರಣೆ ಕಾಯ್ದೆ. ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದೆ. ಜೊತೆಗೆ ಬಡ, ಮಧ್ಯಮವರ್ಗ ಹಾಗೂ ಕಾರ್ಮಿಕರಿಗಾಗಿ ರೂ.2100 ಕೋಟಿಗಳ ಪರಿಹಾರದ ಪ್ಯಾಕೇಜನ್ನು ಯಡಿಯೂರಪ್ಪ ಘೋಷಿಸಿದ್ದಾರೆ.

ದೋಬಿಗಳು, ಸವಿತಾ ಸಮಾಜಕ್ಕೆ ರೂ.5 ಸಾವಿರ ನಗದು ಪರಿಹಾರ ನೀಡಿದ್ದಾರೆ. ಸುಮಾರು 14 ಸಾವಿರ ನೇಕಾರರಿಗೆ ತಲಾ ರೂ.2 ಸಾವಿರ ಪರಿಹಾರ ನೀಡಲಾಗಿದೆ. ಕಟ್ಟಡ ಕಾರ್ಮಿಕರಿಗೆ ತಲಾ ರೂ.5 ಸಾವಿರ ನೀಡಲಾಗಿದೆ. ಆಶಾ ಕಾರ್ಯಕರ್ತರಿಗೆ ತಲಾ ರೂ.3 ಸಾವಿರ ನೀಡಿರುವುದು ಶ್ಲಾಘನೀಯ ಎಂದು ನಡ್ಡಾ ಹೇಳಿದ್ದಾರೆ.

Comments are closed.