ಕರ್ನಾಟಕ

ಪಾಕ್ ಪರ ಘೋಷಣೆ ಕೂಗಿದ್ದ ರಾಜ್ಯದ ಅಮೂಲ್ಯಾ ಲಿಯೋನಾಗೆ ಜಾಮೀನು!

Pinterest LinkedIn Tumblr


ಬೆಂಗಳೂರು (ಜೂನ್‌ 11); ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ವಿವಿಧ ಸಂಘಟನೆಗಳು ಬೆಂಗಳೂರಿನ ಫ್ರೀಡಂ ಪಾರ್ಕ್‌‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಬಹಿರಂಗವಾಗಿ ಪಾಕಿಸ್ತಾನದ ಪರ ಘೋಷಣೆ ಕೂಗುವ ಮೂಲಕ ದೇಶದ್ರೋಹ ಪ್ರಕರಣದಲ್ಲಿ ಬಂಧಿಯಾಗಿದ್ದ ಅಮೂಲ್ಯಾ ಲಿಯೋನಾ ಅವರಿಗೆ ನಗರದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಇಂದು ಜಾಮೀನು ಮಂಜೂರು ಮಾಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೂಲ್ಯ ಪರ ವಕೀಲರು ಜಾಮೀನಿಗಾಗಿ ಕೋರ್ಟ್‌ ಮೊರೆ ಹೋಗಿದ್ದರು. ನಿನ್ನೆ ಜಾಮೀನಿನ ಅರ್ಜಿ ವಿಚಾರಣೆ ನಡೆಸಿದ್ದ ಸಿವಿಲ್ ಮತ್ತು ಸೆಶನ್ಸ್ ಕೋರ್ಟ್, “ವಿದ್ಯಾರ್ಥಿಯಾಗಿರುವ 19 ವರ್ಷದ ಅಮೂಲ್ಯಾ ಬಿಡುಗಡೆಯಾದರೆ ತಲೆಮರೆಸಿಕೊಳ್ಳುವ ಸಾಧ್ಯತೆ. ಅಲ್ಲದೆ, ಇವರಿಗೆ ಜಾಮೀನು ನೀಡಿದರೆ, ಸಮಾಜದ ಶಾಂತಿ ಕದಡಬಲ್ಲ ಇಂತಹ ಅಪರಾಧಗಳಲ್ಲಿ ಮತ್ತೆ ಭಾಗಿಯಾಗುವ ಸಾಧ್ಯತೆ ಇದೆ” ಎಂದು ಅಭಿಪ್ರಾಯಪಟ್ಟಿತ್ತು. ಹೀಗಾಗಿ ಆಕೆಯ ಜಾಮೀನು ಅರ್ಜಿಯನ್ನು ರದ್ದು ಮಾಡಲಾಗಿತ್ತು.

ಆದರೆ, ಪಾಕಿಸ್ತಾನದ ಪರ ಅಮೂಲ್ಯಾ ಘೋಷಣೆ ಕೂಗಿದ್ದ ಪ್ರಕರಣದಲ್ಲಿ ಪೋಲೀಸರು ನಿಯಮದಂತೆ 90 ದಿನಗಳ ಒಳಗೆ ತನಿಖೆ ನಡೆಸಿ ಅಂತಿಮ ವರದಿ ಸಲ್ಲಿಸಬೇಕಿತ್ತು. ಆದರೆ, ಪೊಲೀಸರು ಅವಧಿ ಮೀರಿ ಜಾರ್ಜ್‌‌ಶೀಟ್‌ ಸಲ್ಲಿಸಿದ್ದಾರೆ. ಹೀಗಾಗಿ ಬೆಂಗಳೂರು ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಇಂದು ದೇಶದ್ರೋಹ ಪ್ರಕರಣದಲ್ಲಿ ಅಮೂಲ್ಯಾ ಲಿಯೋನಾ ಅವರಿಗೆ ಜಾಮೀನು ನೀಡಿ ಆದೇಶಿಸಿದೆ. ಹೀಗಾಗಿ ಕೆಲವು ದಾಖಲೆಗಳ ಪರಿಶೀಲನೆ ನಂತರ ಅಮೂಲ್ಯ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

Comments are closed.