ಕರ್ನಾಟಕ

BMTC ಚಾಲಕರೊಬ್ಬರಿಗೆ ಕೊರೋನಾ ಸೋಂಕು; ಆತಂಕದಲ್ಲಿ ಪ್ರಯಾಣಿಕರು

Pinterest LinkedIn Tumblr

ಬೆಂಗಳೂರು:ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಚಾಲಕರೊಬ್ಬರಿಗೆ ಕೊರೋನಾ ಸೋಂಕು ಪತ್ತೆಯಾಗಿದ್ದು, ಪ್ರಯಾಣಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಕೆ. ಆರ್. ಪುರಂನ ಡಿಪೋ ಸಂಖ್ಯೆ 24ರ, 500 ಬಿ ಮಾರ್ಗದಲ್ಲಿ ಇತ್ತೀಚಿಗೆ ಕರ್ತವ್ಯಕ್ಕೆ ಹಾಜರಾಗಿದ್ದ ಚಾಲಕನಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಸಹೋದ್ಯೋಗಿಗಳಲ್ಲಿ ಭೀತಿಯುಂಟಾಗಿದೆ.

ಕಲಬುರಗಿ ಜಿಲ್ಲೆ ಅಪ್ಜಲ್ ಪುರದ ನಿವಾಸಿಯಾಗಿರುವ ಚಾಲಕ ಜೂನ್ 6 ರಂದು ಕೋವಿಡ್ -19 ನಿಗದಿತ ಆಸ್ಪತ್ರೆಯಲ್ಲಿ ಸ್ವಯಂ ಪ್ರೇರಿತವಾಗಿ ಪರೀಕ್ಷೆ ಮಾಡಿಸಿದಾಗ ಸೋಂಕು ತಗುಲಿರುವುದು ಖಚಿತವಾಗಿದೆ. ನಂತರ ಅವರು ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದು ತಿಳಿದುಬಂದಿದೆ.

ಈ ಬಗ್ಗೆ ಸ್ಪಷ್ಟಪಡಿಸಿರುವ ಬಿಎಂಟಿಸಿ, ದೈನಂದಿನ ಕರ್ತವ್ಯಕ್ಕೆ ವರದಿ ಮಾಡುವಾಗ ಅವರಿಗೆ ಜ್ವರ ಅಥವಾ ಆರೋಗ್ಯ ಸಮಸ್ಯೆಯ ಯಾವುದೇ ಲಕ್ಷಣಗಳು ಇರಲಿಲ್ಲ. ಆರೋಗ್ಯ ಸಂಪರ್ಕ ಅಧಿಕಾರಿಗಳಿಂದ ಸಂಪರ್ಕ ಪತ್ತೆ ಹಚ್ಚುವಿಕೆಯನ್ನು ಪ್ರಾರಂಭಿಸಲಾಗಿದೆ. ಅವರು ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳಿಗೆ ಪ್ರಯಾಣದ ಇತಿಹಾಸ ಹೊಂದಿದ್ದಾರೆ.ನಿಗದಿತ ಮಾನದಂಡಗಳ ಮೂಲಕ ಕೆಲಸದ ಸ್ಥಳವನ್ನು ಸೋಂಕು ರಹಿತ ದ್ರಾವಣ ಬಳಸಿ ಸ್ವಚ್ಛಗೊಳಿಸಲಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳ ಸಲಹೆಯಂತೆ ಮುಂದಿನ ಕ್ರಮವನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದೆ.

ಬಿಎಂಟಿಸಿ ತನ್ನ ನೌಕರರು ಮತ್ತು ಸಾರ್ವಜನಿಕ ಪ್ರಯಾಣಿಕರ ಸುರಕ್ಷತೆಗಾಗಿ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

Comments are closed.