ರಾಷ್ಟ್ರೀಯ

ಆತ್ಮನಿರ್ಭರ್ ಭಾರತ ನಿರ್ಮಾಣಕ್ಕೆ ಸ್ವದೇಶೀ ಉತ್ಪನ್ನಗಳನ್ನೇ ಬಳಸಿ: ಪ್ರಧಾನಿ ಮೋದಿ ಮನವಿ

Pinterest LinkedIn Tumblr

ನವದೆಹಲಿ: ಇಂದು ಇಡೀ ವಿಶ್ವವೇ ಕೊರೋನಾ ವೈರಸ್ ಸೋಂಕಿನ ವಿರುದ್ಧ ಹೋರಾಡುತ್ತಿದೆ. ಭಾರತ ಕೂಡ ಇದಕ್ಕೆ ಹೊರತಾಗಿಲ್ಲ. ಇದರ ಜೊತೆಗೆ ನಾವು ಪ್ರವಾಹ, ಬೆಳೆಗಳ ಮೇಲೆ ಮಿಡತೆಗಳ ಹಾವಳಿ, ಆಲಿಕಲ್ಲು ಮಳೆ, ತೈಲ ಬಾವಿಯಲ್ಲಿ ಬೆಂಕಿ, ಸಣ್ಣ ಭೂಕಂಪಗಳು, ಚಂಡಮಾರುತಗಳು ಇವೆಲ್ಲಾ ಕಾಣಿಸಿಕೊಂಡಿದ್ದು ಇಂತಹ ಪ್ರಾಕೃತಿಕ ವಿಕೋಪಗಳನ್ನು ಎದುರಿಸಬೇಕಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಅವರು ಇಂದು ದೆಹಲಿಯಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಭಾರತೀಯ ವಾಣಿಜ್ಯ ಮಂಡಳಿಯ 95ನೇ ವಾರ್ಷಿಕೋತ್ಸವದ ಅಂಗವಾಗಿ ಮಾತನಾಡಿದರು. ನಮ್ಮ ದೇಶದ ಪ್ರತಿಯೊಬ್ಬ ನಾಗರಿಕ ಕೂಡ ಈ ಕೊರೋನಾ ಬಿಕ್ಕಟ್ಟನ್ನು ಅವಕಾಶವಾಗಿ ಬದಲಾಯಿಸಿಕೊಳ್ಳಬೇಕು. ಇದು ಈ ದೇಶಕ್ಕೆ ಮಹತ್ತರ ಬದಲಾವಣೆಗೆ ಸಿಕ್ಕಿರುವ ಅವಕಾಶ ಎಂದು ಭಾವಿಸಿ ಅದರತ್ತ ಹೆಜ್ಜೆ ಹಾಕಬೇಕು. ಹಾಗಾದರೆ ಆ ಮಹತ್ತರ ಬದಲಾವಣೆ ಅಂಶ ಯಾವುದು ಎಂದರೆ ಅದುವೇ ಸ್ವಾವಲಂಬನೆ ಎಂದರು.

ಅದಕ್ಕೆ ನಾವು ಮಾಡಬೇಕಾದ ಸರಳ ಕೆಲಸವೆಂದರೆ ಹೆಚ್ಚೆಚ್ಚು ಸ್ವದೇಶಿ ಉತ್ಪನ್ನಗಳನ್ನು ಬಳಸುವುದು. ಇತರರನ್ನು ಸ್ವದೇಶಿ ಉತ್ಪನ್ನಗಳನ್ನು ಬಳಸುವಂತೆ ಪ್ರೇರೇಪಿಸುವುದು ಮತ್ತು ಬೇರೆ ದೇಶಗಳಲ್ಲಿ ಭಾರತದ ವಸ್ತುಗಳಿಗೆ ಮಾರುಕಟ್ಟೆ ಲಭ್ಯವಾಗುವಂತೆ ಮಾಡುವ ಮೂಲಕ ಆತ್ಮನಿರ್ಭರ್ ಭಾರತ ರಚನೆ ಮಾಡಬೇಕು. ಈ ಮಾರ್ಗವನ್ನು ನಮಗೆ ಸ್ವಾಮಿ ವಿವೇಕಾನಂದರು ತೋರಿಸಿಕೊಟ್ಟಿದ್ದರು. ಅವರು ಹಾಕಿಕೊಟ್ಟ ಮಾರ್ಗದರ್ಶನ ಕೊರೋನಾ ನಂತರ ನಮಗೆ ಸ್ಪೂರ್ತಿಯಾಗಲಿದೆ ಎಂದರು.

ಇತ್ತೀಚೆಗೆ ಸರ್ಕಾರ ರೈತರ ವಿಷಯದಲ್ಲಿ ಮತ್ತು ಗ್ರಾಮೀಣ ಆರ್ಥಿಕ ವಿಚಾರದಲ್ಲಿ ತೆಗೆದುಕೊಂಡ ನಿರ್ಧಾರದಿಂದ ಹಲವು ವರ್ಷಗಳ ಗುಲಾಮಗಿರಿಯಿಂದ ಕೃಷಿ ಆರ್ಥಿಕತೆಯನ್ನು ಮುಕ್ತಗೊಳಿಸಿದೆ. ಇಂದು ರೈತರು ದೇಶದ ಯಾವುದೇ ಕಡೆಗಳಲ್ಲಿ ತಮ್ಮ ಉತ್ಪನ್ನಗಳನ್ನು ಮುಕ್ತವಾಗಿ ಮಾರಾಟ ಮಾಡಬಹುದು ಎಂದರು.

ಪಶ್ಚಿಮ ಬಂಗಾಳದಲ್ಲಿ ಉತ್ಪಾದನಾ ಕ್ಷೇತ್ರಗಳನ್ನು ಪುನರುಜ್ಜೀವನಗೊಳಿಸಬೇಕು. ಇದು ಗಟ್ಟಿ ನಿರ್ಧಾರ ಮಾಡಿ ಹೂಡಿಕೆ ಮಾಡುವ ಸಮಯ. ಸಂಪ್ರದಾಯಬದ್ಧ ನಿರ್ಧಾರ ಮಾಡುವ ಸಮಯ ಇದಲ್ಲ. ಕಳೆದ 5-6 ವರ್ಷಗಳಲ್ಲಿ ನೀತಿ, ಅಭ್ಯಾಸದಲ್ಲಿ ಭಾರತದ ಸ್ವಾವಲಂಬನೆಯ ಗುರಿ ಪ್ರಮುಖವಾಗಿದೆ; ಕೋವಿಡ್ ಬಿಕ್ಕಟ್ಟು ಪ್ರಯತ್ನಗಳನ್ನು ಹೇಗೆ ವೇಗಗೊಳಿಸುವುದು ಎಂಬುದರ ಕುರಿತು ಪಾಠವನ್ನು ಹೇಳಿಕೊಟ್ಟಿದೆ,ಜನಸ್ನೇಹಿ, ಜನಪರ ಮತ್ತು ಪರಿಸರ ಸ್ನೇಹಿ ಅಭಿವೃದ್ಧಿ ನಮ್ಮ ಆಡಳಿತದ ಭಾಗವಾಗಿದೆ ಎಂದರು.

Comments are closed.