ಕರ್ನಾಟಕ

ವಿಧಾನ ಪರಿಷತ್ ಚುನಾವಣೆ; ಬಿಜೆಪಿಯಲ್ಲಿ ಟಿಕೆಟ್ ಗಾಗಿ ಮುಗಿಬಿದ್ದ ಆಕಾಂಕ್ಷಿಗಳು!

Pinterest LinkedIn Tumblr

ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ಬಿಜೆಪಿ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಿದ ಬೆನ್ನಲ್ಲೇ ಬಿಜೆಪಿ ಕಚೇರಿ ಬಾಗಿಲು ತಟ್ಟುವವರ ಸಂಖ್ಯೆ ಹೆಚ್ಚಾಗಿದೆ. ಜೂನ್ 29 ರಂದು ನಡೆಯುವ ಪರಿಷತ್ ಚುನಾವಣೆಗೆ ಆಕಾಂಕ್ಷಿಳು ಮುಗಿಬೀಳುತ್ತಿದ್ದಾರೆ.

12 ಪರಿಷತ್ ಸ್ಥಾನಕಳು ತೆರವಾಗಿವೆ, ಅದರಲ್ಲಿ ನಾಮ ನಿರ್ದೇಶನ ಸ್ಥಾನಗಳು, ಬಿಜೆಪಿ ಸುಲಭವಾಗಿ 9 ಸ್ಥಾನ ಗೆಲ್ಲಬಹುದಾಗಿದೆ. 9 ಸ್ಥಾನಕ್ಕಾಗಿ ಸುಮಾರು 100 ಆಕಾಂಕ್ಷಿಗಳು ಲಾಬಿ ನಡೆಸಿದ್ದಾರೆ.

ರಾಜ್ಯಸಭೆ ಚುನಾವಣೆಗೆ ಈರಣ್ಣ ಕಡಾಡಿ ಮತ್ತು ಅಶೋಕ್ ಗಸ್ತಿ ಅವರಿಗೆ ಟಿಕೆಟ್ ನೀಡಿದ ಮೇಲೆ ಬಿಜೆಪಿ ಸ್ಥಿತಿ ಪಂಡೋರಾ ಬಾಕ್ಸ್ ನಂತಾಗಿದೆ. ತಳ ಮಟ್ಟದ ಕಾರ್ಯಕರ್ತರಿಗೆ ಬಿಜೆಪಿ ಟಿಕೆಟ್ ನೀಡಿದ ಮೇಲೆ ಸಾಮಾನ್ಯ ಕಾರ್ಯಕರ್ತರು ಖುಷಿಗೊಂಡಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ತೊರೆದು ಬಿಜೆಪಿ ಸೇರಿದ ಎಚ್ ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್ ಕೂಡ ಪರಿಷತ್ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ, ಇವರಿಗೆ ಸಚಿವ ಸ್ಥಾನ ನೀಡುವುದಾಗಿ ಸಿಎಂ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಆದರೆ ರಾಜ್ಯಸಭೆ ಟಿಕೆಟ್ ವಿಚಾರ ಬಿಎಸ್ ವೈ ಗೆ ಆಘಾತ ನೀಡಿದೆ. ರಾಜ್ಯ ವಿಧಾನ ಪರಿಷತ್‌ನ 7 ಸ್ಥಾನಗಳಿಗೆ ಜೂನ್‌ 29ರಂದು ಚುನಾವಣೆ ನಿಗದಿಯಾಗಿದೆ. ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದ ನಜೀರ್‌ ಅಹಮ್ಮದ್‌, ಜಯಮ್ಮ, ಎಂ.ಸಿ. ವೇಣುಗೋಪಾಲ್‌, ಎನ್‌.ಎಸ್‌. ಬೋಸರಾಜು, ಎಚ್‌.ಎಂ. ರೇವಣ್ಣ, ಟಿ.ಎ. ಸರವಣ ಹಾಗೂ ಡಿ.ಯು. ಮಲ್ಲಿಕಾರ್ಜುನ ಅವರ ಸೇವಾ ಅವಧಿ ಅಂತ್ಯವಾಗುತ್ತಿದೆ.

ಮೇಲ್ಮನೆ ಟಿಕೆಟ್ ಗಾಗಿ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದೆ. ಕನಿಷ್ಠ ಪಕ್ಷ ನೂರು ಅಭ್ಯರ್ಥಿಗಳು ಬಿಜೆಪಿ ಕಚೇರಿಗೆ ಬರುತ್ತಿದ್ದಾರೆ. ಎಲ್ಲಾ ಪರಿಶೀಲನೆ ನಂತರ 9 ಸೀಟು ಮಾತ್ರ ನಾವು ಆಯ್ಕೆ ಮಾಡಲು ಸಾಧ್ಯ. ರಾಜ್ಯ ಕೋರ್ ಕಮಿಟಿ ಮತ್ತು ಬಿಜೆಪಿ ರಾಷ್ಟ್ರೀಯ ನಾಯಕರು ನಿರ್ಧರಿಸುತ್ತಾರೆ ಎಂದು ಪ್ರವಾಸೋದ್ಯಮ ಸಚಿವ ಸಿಟಿ ರವಿ ಹೇಳಿದ್ದಾರೆ.

ಇನ್ನು ಅಭ್ಯರ್ಥಿಗಳ ಆಯ್ಕೆಯಾದ ನಂತರ ಅಸಮಾಧಾನ ಭಿನ್ನಾಭಿಪ್ರಾಯ ಸಾಮಾನ್ಯ. ಕೋರ್ ಕಮಿಟಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ. 2009 ರಲ್ಲಿ ಬಿಜೆಪಿ ಕೇವಲ ರಾಜ್ಯದಲ್ಲಿ ಮಾತ್ರ ಅಧಿಕಾರದಲ್ಲಿತ್ತು, ಆಧರೆ ಈ ಬಾರಿ ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ ಎಂದು ಮತ್ತೊಬ್ಬ ಬಿಜೆಪಿ ನಾಯಕ ತಿಳಿಸಿದ್ದಾರೆ.

ಜೂನ್ 18 ರೊಳಗೆ ಕೇಂದ್ರ ಮತ್ತು ರಾಜ್ಯ ನಾಯಕರು ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲಿದ್ದಾರೆ ಎಂದು ಬಿಜೆಪಿ ಎಂಎಲ್ ಸಿ ರವಿಕುಮಾರ್ ತಿಳಿಸಿದ್ದಾರೆ. ತಳಮಟ್ಟದ ಕಾರ್ಯಕರ್ತರಿಗೆ ಅವಕಾಶ ನೀಡುವುದರಿಂದ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿಗೊಳ್ಳುತ್ತದೆ ಎಂದು ಬಿಜೆಪಿ ವಿಭಾಗೀಯ ಸಂಚಾಲಕ ವೈ ವಿ ರವಿಶಂಕರ್ ಹೇಳಿದ್ದಾರೆ.

Comments are closed.