ಕರ್ನಾಟಕ

ಕರ್ನಾಟಕದಿಂದ ರಾಜ್ಯಸಭೆಗೆ ಹೊಸಬರಿಗೆ ಮಣೆ ಹಾಕಿರುವುದರಿಂದ ನೀಡಿದ ಸಂದೇಶವೇನು…? ಇದರಿಂದೆ ಯಾರಿದ್ದಾರೆ ….?

Pinterest LinkedIn Tumblr

ಬೆಂಗಳೂರು: ಕರ್ನಾಟಕದಿಂದ ರಾಜ್ಯಸಭೆಗೆ ಅಶೋಕ್ ಗಸ್ತಿ ಮತ್ತು ಈರಣ್ಣ ಕಡಾಡಿ ಆಯ್ಕೆ ರಾಜ್ಯ ಬಿಜೆಪಿ ಘಟಕಕ್ಕೆ ಅಚ್ಚರಿ ಮೂಡಿಸಿದೆ. ಜೊತೆಗೆ ಪ್ರಬಲ ಸಂದೇಶ ಕೂಡ ರವಾನಿಸಿದೆ.

ಹಲವು ಹೊಸಬರಿಗೆ ಸಚಿವ ಸ್ಥಾನ ನೀಡಿದ್ದ ಬಿಜೆಪಿ ಈಗ ಅಶೋಕ್ ಗಸ್ತಿ ಮತ್ತು ಈರಣ್ಣ ಕಡಾಡಿ ಅವರಿಗೆ ಟಿಕೆಟ್ ಘೋಷಣೆ ಮಾಡುವ ಮೂಲಕ ಹೊಸಬರಿಗೆ ಮಣೆ ಹಾಕುತ್ತಿದೆ.

ಕಡಾಡಿ ಕಳೆದ ಮೂರು ದಶಕಗಳಿಂದ ಬೆಳಗಾವಿ ಜಿಲ್ಲಾ ಪ್ರಭಾರಿಯಾಗಿ ಕೆಲಸ ಮಾಡುತ್ತಿದ್ದಾರೆ, ಇನ್ನೂ ಆಶೋಕ್ ಗಸ್ತಿ ವಕೀಲರಾಗಿದ್ದು, ಎಬಿವಿಪಿ ಮೂಲಕ ಕೆಲಸ ಆರಂಭಿಸಿ ಸದ್ಯ ಬಳ್ಳಾರಿ ಪ್ರಭಾರಿಯಾಗಿದ್ದಾರೆ, ಇಬ್ಬರಿಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಬೆಂಬಲವಿದೆ ಹಾಗೂ ಆರ್ ಎಸ್ ಎಸ್ ಕೃಪಕಟಾಕ್ಷವಿದೆ.

ಗಸ್ತಿ ಮತ್ತು ಕಡಾಡಿ ಆಯ್ಕೆ ಪಕ್ಷದ ಕಾರ್ಯಕರ್ತರಿಗೆ ಬಿಜೆಪಿ ಎಷ್ಟರ ಮಟ್ಟಿನ ಪ್ರಾಮುಖ್ಯತೆ ತೋರಿಸುತ್ತದೆ ಎಂದು ತಿಳಿಸುತ್ತದೆ, ಇದು ಬ್ಯೂಟಿ ಆಫ್ ಡೆಮಾಕ್ರಸಿ ಎಂದು ಸಂಸದ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ. ಇದು ಪಕ್ಷದ ಹೈಕಮಾಂಡ್ ನಿರ್ಧಾರವಾಗಿದೆ, ಅಮಿತ್ ಶಾ ಮತ್ತು ಜೆಪಿ ನಡ್ಡಾ ಅವರೇ ಆಯ್ಕೆ ಮಾಡಿದ್ದಾರೆ, ರಾಜ್ಯಸಭೆಗೆ ಹೊಸ ಹಾಗೂ ಉತ್ಸಾಹಿಗಳನ್ನು ಆರಿಸಿದ್ದಾರೆ. ಪಕ್ಷ ಯಾವುದೇ ಕಾರಣಕ್ಕೂ ಮೂರನೇ ಅಭ್ಯರ್ಥಿ ಹಾಕುವುದಿಲ್ಲ. ನಮ್ಮ ಬಳಿ ಕೇವಲ 26 ಮತಗಳು ಉಳಿಯುತ್ತವೆ ಮೂರನೇ ಅಭ್ಯರ್ಥಿ ಆಯ್ಕೆಗೆ 45 ಮತಗಳ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ.

ಎರಡು ಬಾರಿ ರಾಜ್ಯ ಸಭೆ ಸದಸ್ಯರಾಗಿ ಕೋರೆ ಕೆಲಸ ಮಾಡಿದ್ದರು, ಮೂರನೇ ಬಾರಿಗಾಗಿ ಅವರ ಹೆಸರನ್ನು ರಾಜ್ಯ ಘಟಕ ಶಿಫಾರಸು ಮಾಡಿತ್ತು. ಆದರೆ ನಮ್ಮ ಪಕ್ಷದಲ್ಲೆ ಕೇವಲ ಕೆಲವರಿಗೆ ಮಾತ್ರ 2 ಬಾರಿ ಟಿಕೆಟ್ ಸಿಗುತ್ತದೆ, ಯಾರಿಗೂ ಮೂರನೇ ಬಾರಿಗೆ ಅವಕಾಶವಿಲ್ಲ, ಅರುಣ್ ಜೈಟ್ಲಿ ಮತ್ತು ವೆಂಕಯ್ಯ ನಾಯ್ಡು ಅವರು ಮೂರು ಬಾರಿ ಆಯ್ಕೆಯಾಗಿದ್ದರು.

ಪ್ರಭಾಕರ್ ಕೋರೆ ಅವರಿಗೆ ಟಿಕೆಟ್ ತಪ್ಪಲು ಅವರಿಗೆ ಯಾವುದೇ ನೆಗೆಟಿವ್ ಅಂಶಗಳಿರಲಿಲ್ಲ ಎಂದು ಸಚಿವ ಕೆಎಸ್ ಈಶ್ವರಪ್ಪ ಹೇಳಿದ್ದಾರೆ. ಪಕ್ಷದ ಸಾಮಾನ್ಯ ಕಾರ್ಯಕರ್ತ ಕೂಡ ಉನ್ನತ ಹುದ್ದೆ ಅಲಂಕರಿಸಬಹುದಾಗಿದೆ.

ಈ ಸಂಬಂಧ ಫೋನ್ ನಲ್ಲಿ ಮಾತನಾಡಿದ ಅಭ್ಯರ್ಥಿ ಈರಣ್ಣ ಕಡಾಡಿ, ಆರಂಭದಲ್ಲಿ ನನಗೆ ನಂಬಲು ಆಗಲಿಲ್ಲ, ಇದೊಂದು ಸುಳ್ಳು ಸುದ್ದಿ ಎಂದುಕೊಂಡೇ, ನಾನು ಎಂಎಲ್ ಸಿ ಸ್ಥಾನ ಬಯಸಿದ್ದೆ, ನಾನು ಯಾವತ್ತೂ ರಾಜ್ಯಸಭೆ ಟಿಕೆಟ್ ಬಯಸಿರಲಿಲ್ಲ, ನನ್ನ ಹೆಸರು ಪ್ರಕಟಿಸಿದ್ದು ನೋಡಿ ನನಗೆ ಆಶ್ಚರ್ಯವಾಯಿತು ಎಂದು ಹೇಳಿದ್ದಾರೆ.

ನಾನು ಪಕ್ಷದ ನಿರ್ಧಾರವನ್ನು ಸ್ವಾಗತಿಸುತ್ತೇನೆ, ನಮ್ಮ ಪಕ್ಷ ಸಾಮಾನ್ಯ ಕಾರ್ಯಕರ್ತರನ್ನು ಗಮನಿಸುತ್ತದೆ, ನಾನು ಕೂಡ ಆಕಾಂಕ್ಷಿಯಾಗಿದ್ದೆ, ನಾನು ಈಗ ಅಶೋಕ್ ಗಸ್ತಿ ಮತ್ತು ಈರಣ್ಣ ಕಡಾಡಿ ಅವರನ್ನು ಬೆಂಬಲಿಸುತ್ತೇನೆ ಎಂದು ರಮೇಶ್ ಕತ್ತಿ ಹೇಳಿದ್ದಾರೆ.

ಅಶೋಕ್​​ ಗಸ್ತಿ
ಅಶೋಕ್​​ ಗಸ್ತಿ ಮೂಲತಃ ಲಿಂಗಸಗೂರು. ಇವರು ಸವಿತಾ ಸಮಾಜಕ್ಕೆ ಸೇರಿದವರು. ಅಶೋಕ್​​ ಗಸ್ತಿ 1982ರಲ್ಲೇ ಕಾಲೇಜಿನಲ್ಲಿದ್ದಾಗಲೇ ಹೋರಾಟಕ್ಕೆ ಧುಮಿಕಿದ್ದರು. ಕಾಲೇಜಿನಲ್ಲಿ ನಡೆಯುವ ಭ್ರಷ್ಟಾಚಾರ ವಿರುದ್ದ ಹೋರಾಟ ನಡೆಸಿ ಪ್ರಾಂಶುಲರನ್ನು ಅಮಾನತು ಮಾಡಿಸಿದ್ದರು.ಲಿಂಗಸಗೂರಿಗೆ ಪದವಿ ಕಾಲೇಜಿಗಾಗಿ 1982ರಲ್ಲಿ 18 ದಿನ ಉಪವಾಸ ಸತ್ಯಾಗ್ರಹ ನಡೆಸಿದರು. ಈ ಮೂಲಕ ಕಾಲೇಜು ಮಂಜೂರು ಮಾಡಲು ಹೋರಾಟ ರೂಪಿಸಿದ್ದರು. 1990ರಿಂದ ಬಿಜೆಪಿ ಪಕ್ಷದ ಕಾರ್ಯಕರ್ತನಾಗಿ ದುಡಿಯುತ್ತಿರುವ ಅಶೋಕ ಗಸ್ತಿ ಬಿಜೆಪಿ ಯುವ ಮೋರ್ಚ, ವಕೀಲರ ಘಟಕ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಸದ್ಯ ಅಶೋಕ್​​ ಗಸ್ತಿ ಬಳ್ಳಾರಿ ಹಾಗು ರಾಯಚೂರು ಪಕ್ಷದ ಸಂಘಟನಾ ಮುಖಂಡರಾಗಿ ಕೆಲಸ ಮಾಡುತ್ತಿದ್ದಾರೆ. 2001ರಲ್ಲಿ ರಾಯಚೂರು ನಗರಸಭೆಯ ಸದಸ್ಯರಾಗಿ ಆಯ್ಕೆಯಾದರು. 2012ರಲ್ಲಿ ದೇವರಾಜ ಅರಸು ಹಿಂದುಳಿದ ವರ್ಗಗಳ‌ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಹಲವು ದಿನಗಳ ಹೋರಾಟ ಬಿಜೆಪಿಯಲ್ಲಿ ಪಕ್ಷ ನಿಷ್ಠೆಯಿಂದಾಗಿ ಈಗ ರಾಜ್ಯಸಭಾ ಸ್ಥಾನದ ಟಿಕೆಟ್ ನೀಡಲಾಗಿದೆ.

ಈರಣ್ಣ ಕಡಾಡಿ
ಮೂಡಲಗಿ ತಾಲೂಕಿನ ಕಲ್ಲೊಳ್ಳಿ ಗ್ರಾಮದಲ್ಲಿ1966ರಂದು ಜನಿಸಿದ ಕಡಾಡಿ ಅವರು 1989ರಿಂದ ಬಿಜೆಪಿ ಪಕ್ಷದಲ್ಲಿ ಸಕ್ರಿಯರಾಗಿದ್ದಾರೆ. ಅರಭಾಂವಿ ಕ್ಷೇತ್ರದ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾಗಿ ರಾಜಕೀಯ ಜೀವನ ಪ್ರಾರಂಭಿಸಿ, ಗೋಕಾಕ್ ತಾಲೂಕು ಬಿಜೆಪಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಗಿದ್ದವರು. 1994 ರಲ್ಲಿ ಅರಭಾಂವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಕೌಜಲಗಿ ವಿರುದ್ಧ ಪರಾಭವಗೊಂಡಿದ್ದರು. 2004ರಲ್ಲಿ ಬೆಳಗಾವಿ ಗ್ರಾಮೀಣ ಘಟಕದ ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದರು. 2010ರಲ್ಲಿ ಬೆಳಗಾವಿ ಜಿ.ಪಂ.ಅಧ್ಯಕ್ಷರಾಗಿದ್ದರು. ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಮೊದಲಿನಿಂದಲೂ ಆರ್‌ಎಸ್‌ಎಸ್, ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಈರಣ್ಣ ಕಡಾಡಿ ಸದ್ಯ ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ವಿಜಯಪುರ, ಬೆಳಗಾವಿ ನಗರ, ಬೆಳಗಾವಿ ಗ್ರಾಮೀಣ ಭಾಗದ ಬಿಜೆಪಿ ವಿಭಾಗೀಯ ಪ್ರಭಾರಿಯಾಗಿದ್ದಾರೆ.

Comments are closed.