
ಪೀಣ್ಯ ದಾಸರಹಳ್ಳಿ (ಬೆಂಗಳೂರು): ಮಿಸ್ಡ್ ಕಾಲ್‌ನಿಂದ ಪರಿಚಯವಾಗಿ ಗೃಹಿಣಿಯ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಯುವಕ, ಆಕೆಯ ಪತಿ ಹಾಗೂ ಸಹೋದರನಿಂದ ಕೊಲೆಯಾಗಿದ್ದಾನೆ.
ಬೆಂಗಳೂರು ಉತ್ತರ ತಾಲೂಕಿನ ಮಾದಾವರ ನಿವಾಸಿ ಚಂದ್ರಶೇಖರ್ (20) ಮೃತ ದುರ್ದೈವಿ. ಚಂದ್ರಶೇಖರ್‌ಗೆ ಹಾಗೂ ಚೆನ್ನಾದೇವಿ ಅಗ್ರಹಾರ ನಿವಾಸಿ ರಘು ಪತ್ನಿ ಕಮಲಾ (ಹೆಸರು ಬದಲಿಸಲಾಗಿದೆ)ಗೆ ಮಿಸ್ಡ್‌ಕಾಲ್ ಮೂಲಕ ಪರಿಚಯವಾಗಿ, ಸ್ನೇಹ ಬೆಳೆದಿತ್ತು. ಇದು ಅಕ್ರಮ ಸಂಬಂಧಕ್ಕೂ ದಾರಿ ಮಾಡಿಕೊಟ್ಟಿತ್ತು.
ಇತ್ತೀಚೆಗೆ ಕಮಲ ತನ್ನ ಪತಿ ರಘುವನ್ನು ತೊರೆದು ಮಾದಾವರದಲ್ಲಿ ಚಂದ್ರಶೇಖರ್ ಜತೆ ವಾಸಿಸಲು ಆರಂಭಿಸಿದ್ದಳು. ಬಳಿಕ ರಘು ಹಾಗೂ ಕುಟುಂಬಸ್ಥರು ಹೋಗಿ ಕಮಲಳನ್ನು ಮನವೊಲಿಸಿ ವಾಪಸ್ ಕರೆತಂದಿದ್ದರು. ಕೆಲ ದಿನ ಪತಿ ಜತೆ ಇದ್ದ ಕಮಲ ಮತ್ತೆ ಚಂದ್ರಶೇಖರನ ಜತೆಗೆ ವಾಸಿಸಲು ಆರಂಭಿಸಿದ್ದಳು. ಇದರಿಂದಾಗಿ ರಘು ತನ್ನ ಸಹೋದರ ದೀಪು ಜತೆ ಚಂದ್ರಶೇಖರ, ಕಮಲ ಇದ್ದಲ್ಲಿಗೆ ಮಾತುಕತೆಗೆ ಬಂದಿದ್ದ.
ಈ ವೇಳೆ ವಾಗ್ವಾದ, ಹೊಡೆದಾಟ ನಡೆದಿದೆ. ಬಳಿಕ ನಾಲ್ವರು ಚೆನ್ನಾದೇವಿ ಅಗ್ರಹಾರಕ್ಕೆ ಬಂದಿದ್ದಾರೆ. ಅಲ್ಲೂ ಗಲಾಟೆ, ಹೊಡೆದಾಟ ನಡೆದಿದೆ. ಗಂಭೀರ ಗಾಯಗೊಂಡ ಚಂದ್ರಶೇಖರನನ್ನು ರಘುವೇ ಆಸ್ಪತ್ರೆಗೆ ದಾಖಲಿಸಿದ್ದಾನೆ. ಆದರೆ, ಆಸ್ಪತ್ರೆಯಲ್ಲಿ ಚಂದ್ರಶೇಖರ ಮೃತಪಟ್ಟಿದ್ದಾನೆ. ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.