ಕರ್ನಾಟಕ

ರಾಜ್ಯ ಬಿಜೆಪಿಯಲ್ಲಿ ಒತ್ತಡ ತಂತ್ರ ಮುಂದುವರಿಸಿದ ಅತೃಪ್ತರು

Pinterest LinkedIn Tumblr


ಬೆಂಗಳೂರು: ಬಿಜೆಪಿಯ ಅತೃಪ್ತ ಶಾಸಕರು ಒತ್ತಡ ತಂತ್ರ ಮುಂದುವರಿಸಿದ್ದು, ಹೈಕಮಾಂಡ್‌ ಭೇಟಿಗೂ ಯತ್ನ ನಡೆಸಿದ್ದಾರೆ. ಇದರ ಮಧ್ಯೆ ಭಿನ್ನರೊಂದಿಗೆ ಸಂಧಾನ ಮಾತುಕತೆ ನಡೆಸುವಂತೆ ಡಿಸಿಎಂ ಗೋವಿಂದ ಕಾರಜೋಳ ಹಾಗೂ ಸಂಪುಟದ ಹಿರಿಯ ಸದಸ್ಯ ಜಗದೀಶ ಶೆಟ್ಟರ್‌ ಅವರಿಗೆ ಸಿಎಂ ಬಿ.ಎಸ್‌.ಯಡಿಯೂರಪ್ಪ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಭಾನುವಾರವೂ ಕೆಲ ಶಾಸಕರು ಉಪಾಹಾರ ಕೂಟದ ನೆಪದಲ್ಲಿ ಹಿರಿಯ ಶಾಸಕರ ಮನೆಯಲ್ಲಿಸೇರಿ ಚರ್ಚೆ ನಡೆಸಿದ್ದಾರೆ. ಹೈಕಮಾಂಡ್‌ ಭೇಟಿಗೆ ಅವಕಾಶ ಮಾಡಿಕೊಡುವಂತೆ ದಿಲ್ಲಿಯಲ್ಲಿರುವ ನಾಯಕರೊಬ್ಬರಿಗೆ ದುಂಬಾಲು ಬಿದ್ದಿದ್ದಾರೆ. ಆದರೆ, ದಿಲ್ಲಿ ನಾಯಕರಿಂದ ಇದುವರೆಗೂ ಯಾವುದೇ ಸಂದೇಶ ಬಂದಿಲ್ಲವೆನ್ನಲಾಗಿದೆ.

ಈ ನಡುವೆ ಅತೃಪ್ತ ಶಾಸಕರ ಅಹವಾಲು ಆಲಿಸುವಂತೆ ಕಾರಜೋಳ ಹಾಗೂ ಶೆಟ್ಟರ್‌ ಅವರಿಗೆ ಪಟ್ಟ ಕಟ್ಟಿರುವ ಯಡಿಯೂರಪ್ಪ ಅವರು ವಾರದೊಳಗೆ ತಾವೂ ಶಾಸಕರೊಂದಿಗೆ ಸಭೆ ನಡೆಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇನ್ನು, ಪಕ್ಷ ವಿರೋಧಿ ಚಟುವಟಿಕೆಯನ್ನು ನಾವು ಸಹಿಸುವುದಿಲ್ಲ. ಹದ್ದು ಮೀರಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಎಚ್ಚರಿಕೆ ನೀಡಿದ್ದಾರೆ.

ಅನುದಾನ ನೀಡಲು ಸಿದ್ಧವೆಂದ ಸಿಎಂ
ಅತೃಪ್ತ ಶಾಸಕರು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಯಸಿದ್ದಾರೆ. ಈ ನಿಟ್ಟಿನಲ್ಲಿ ಗಮನ ಹರಿಸುವ ಭರವಸೆಯನ್ನು ಸಿಎಂ ನೀಡಿದ್ದಾರೆ. ಆದರೆ, ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ. ಈ ಬಗ್ಗೆ ನಿರ್ಧಾರ ಕೈಗೊಳ್ಳುವುದೂ ತಮ್ಮ ಕೈಯ್ಯಲ್ಲಿಲ್ಲ. ಹೈಕಮಾಂಡ್‌ ಸೂಚಿಸಿದರೆ ಯಾವುದೇ ಕ್ಷಣದಲ್ಲಿ ಸಂಪುಟ ವಿಸ್ತರಣೆ ಮಾಡಲು ಅಭ್ಯಂತರವಿಲ್ಲ ಎಂಬ ಸಂದೇಶವನ್ನೂ ಸಿಎಂ ನೀಡಿದ್ದಾರೆ.

Comments are closed.