ಕರ್ನಾಟಕ

ಬಿಜೆಪಿಯಲ್ಲಿ ಕಚ್ಚಾಟ, ಕಾದು ನೋಡುವ ತಂತ್ರಕ್ಕೆ ಮೊರೆ ಹೋದ ಕಾಂಗ್ರೆಸ್!

Pinterest LinkedIn Tumblr


ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಆಂತರಿಕ ಕಲಹ ತೀವ್ರಗೊಳ್ಳುತ್ತಿದ್ದು ಪರಿಸ್ಥಿತಿಯ ಲಾಭವನ್ನು ಸೂಕ್ತ ಸಂದರ್ಭದಲ್ಲಿ ಪಡೆಯಲು ಕಾಂಗ್ರೆಸ್ ಕಾದು ನೋಡುವ ತಂತ್ರದ ಮೊರೆ ಹೋಗಿದೆ. ಬಿಜೆಪಿ ಆಂತರಿಕ ಕಚ್ಚಾಟದ ಕುರಿತಾಗಿ ಸದ್ಯ ಯಾವುದೇ ಬಹಿರಂಗ ಹೇಳಿಕೆ ನೀಡದಂತೆ ಕೈ ಮುಖಂಡರಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ರಾಜ್ಯದಲ್ಲಿ ಕೋವಿಡ್‌-19 ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಎಡವಿದ್ದು ಪಕ್ಷದ ಭಿನ್ನಮತದ ಕುರಿತಾಗಿ ಚರ್ಚೆಗಳು ಮುನ್ನಲೆಗೆ ಬಂದರೆ ಜನರ ಸಮಸ್ಯೆಗಳ ಕುರಿತಾದ ಚರ್ಚೆ ಹಿಂದೆ ಸರಿಯುತ್ತದೆ. ಈ ನಿಟ್ಟಿನಲ್ಲಿ ಕೊರೊನಾ ವಿಚಾರವನ್ನೇ ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸಲು ಕಾಂಗ್ರೆಸ್ ಮುಂದಾಗಿದೆ.

ಸದ್ಯ ಬಿಜೆಪಿಯಲ್ಲಿ ಆಂತರಿಕ ಕಲಹ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಪಕ್ಷದ ನಾಯಕತ್ವದ ವಿರುದ್ಧವೇ ಶಾಸಕರು ಮಾತನಾಡುತ್ತಿದ್ದಾರೆ. ಬಹಿರಂಗವಾಗಿಯೇ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೋವಿಡ್‌-19 ವಿಚಾರವನ್ನೇ ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ದಾಳಿ ನಡೆಸಲು ಕಾಂಗ್ರೆಸ್ ಮುಂದಾಗಿದೆ.

ರಾಜ್ಯದ ಸರ್ಕಾರದ ಕೊರೊನಾ ಪರಿಹಾರ, ರೈತರ ಸಮಸ್ಯೆಗಳು, ನಿರುದ್ಯೋಗ, ವಲಸೆ ಕಾರ್ಮಿಕರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಮುಗಿಬೀಳಲು ತಂತ್ರಗಾರಿಕೆ ರೂಪಿಸುತ್ತಿದೆ. ಈ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪಕ್ಷದ ಶಾಸಕರಿಗೆ ಹಾಗೂ ಮುಖಂಡರಿಗೆ ಕೊರೊನಾ ನಿರ್ವಹಣೆ ವಿಚಾರವಾಗಿಯೇ ಸರ್ಕಾರ ವಿರುದ್ಧ ಧ್ವನಿ ಎತ್ತುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

Comments are closed.