ಕರ್ನಾಟಕ

ಇನ್ನು ಮುಂದೆ ಕೋವಿಡ್-19 ಬೆಳಗಿನ ಹೆಲ್ತ್ ಬುಲೆಟಿನ್ ಇರುವುದಿಲ್ಲ: ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಶನಿವಾರದಿಂದ ಕೋವಿಡ್-19 ಕುರಿತ ಬೆಳಗಿನ ಹೆಲ್ತ್ ಬುಲೆಟಿನ್ ಇರುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಜ್ಯದಲ್ಲಿ ಇಂದಿನಿಂದ ಕೊರೋನಾ ಕುರಿತ ಬೆಳಗಿನ ಹೆಲ್ತ್ ಬುಲೆಟಿನ್ ಇರುವುದಿಲ್ಲ. ಒಟ್ಟಾರೆಯಾಗಿ ಸಂಜೆ ವೇಳೆಯೇ ನೀಡಲಾಗುತ್ತದೆ. ಕೊರೋನಾ ಟಾಸ್ಕ್ ಫೋರ್ಸ್ ಸಲಹೆಯಂತೆ ರಾಜ್ಯ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಕಳೆದ ಕೆಲ ದಿನಗಳಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ, ಹೆಚ್ಚಿನ ಸೋಂಕಿತರ ಸಂಖ್ಯೆಯಿಂದ, ಅವರ ವಿವರಗಳನ್ನು ಸಂಗ್ರಹಿಸಿ ಮಧ್ಯಂತರ ಬುಲೆಟನ್ ಬಿಡುಗಡೆಗೊಳಿಸುವುದು ಸಿಬ್ಬಂದಿಗೆ ಸವಾಲಿನ ಕೆಲಸವಾದ್ದರಿಂದ ಅದನ್ನು ಸ್ಥಗಿತಗೊಳಿಸಲು ಇಲಾಖೆ ನಿರ್ಧರಿಸಿದೆ ಆರೋಗ್ಯ ಇಲಾಖೆ ನಿರ್ಧರಿಸಿದೆ.

ಇತರ ಹಲವು ರಾಜ್ಯಗಳಲ್ಲಿ ಮಧ್ಯಂತರ ವರದಿ ಬಿಡುಗಡೆಗೊಳಿಸುವ ಪರಿಪಾಠವಿಲ್ಲ. ಅದೇ ಪದ್ಧತಿಯನ್ನು ಇಲ್ಲಿ ಕೂಡ ಅನುಸರಿಸಲು ಕ್ರಿಯಾ ಪಡೆ ನಿರ್ಧರಿಸಿದೆ. ದಿನದ ಅಂತ್ಯದಲ್ಲಿ ಸಂಪೂರ್ಣ ಮಾಹಿತಿ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ಹಿಂದೆ ಬೆಳಗಿನ ಹೆಲ್ತ್ ಬುಲೆಟಿನ್ ನ್ನು ಆರೋಗ್ಯ ಇಲಾಖೆ ಬದಲಾಯಿಸಿತ್ತು. ಈ ಕುರಿತು ಹಲವು ಟೀಕೆ ಹಾಗೂ ಅನುಮಾನಗಳು ವ್ಯಕ್ತವಾಗಿತ್ತು. ಹೆಲ್ತ್ ಬುಲೆಟಿನ್ ನಮೂನೆ ಬದಲಾಯಿಸಿದ್ದ ಇಲಾಖೆಯು ಕೇವಲ ಸೋಂಕಿತರ ಸಂಖ್ಯೆಯಷ್ಟೇ ನೀಡಿತ್ತು. ಬಳಿಕ ಸ್ಪಷ್ಟನೆ ನೀಡಿದ್ದ ಸಚಿವ ಸುರೇಶ್ ಕುಮಾರ್ ಅವರು, ಮಧ್ಯಾಹ್ನದ ವೇಳೆ ಎಲ್ಲಾ ಮಾಹಿತಿಯನ್ನೂ ಹುಡುಕುವಲ್ಲಿ ಇಲಾಖೆ ಕೆಲ ಸಂಕಷ್ಟಗಳು ಎದುರಾಗುತ್ತಿವೆ. ಹೀಗಾಗಿ ರೋಗಿಗಳ ಮಾಹಿತಿಯನ್ನು ಪ್ರತ್ಯೇಕವಾಗಿ ಹಾಕಲಾಗುತ್ತಿದೆ ಎಂದಿದ್ದರು.

ಇದೀಗ ಸರ್ಕಾರ ಅಂತಿಮವಾಗಿ ಬೆಳಗಿನ ಹೆಲ್ತ್ ಬುಲೆಟಿನ್ ನೀಡುವುದನ್ನೇ ನಿಲ್ಲಿಸಿದ್ದು, ಒಟ್ಟಾರೆ ಸಂಜೆ ವೇಳೆಯೇ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡುವುದಾಗಿ ತಿಳಿಸಿದೆ ಎಂದು ತಿಳಿದುಬಂದಿದೆ.

Comments are closed.