ಕರ್ನಾಟಕ

ಅತೀ ಶೀಘ್ರದಲ್ಲಿಯೇ ರೈತರ ಖಾತೆಗೆ ಪರಿಹಾರದ ಹಣ ಜಮಾ; ಸಚಿವ ನಾರಾಯಣಗೌಡ

Pinterest LinkedIn Tumblr


ಬೆಂಗಳೂರು (ಮೇ.28); ಕೆಲವೇ ದಿನಗಳಲ್ಲಿ ರೈತರ ಅಕೌಂಟ್ ಗೆ ಲಾಕ್‌ಡೌನ್‌ ವಿಶೇಷ ಪ್ಯಾಕೇಜ್ ಪರಿಹಾರ ಹಣ ಜಮಾ ಆಗಲಿದೆ ಎಂದು ತೋಟಗಾರಿಕಾ ಸಚಿವ ನಾರಾಯಣಗೌಡ ಇಂದು ಸ್ಪಷ್ಟಪಡಿಸಿದ್ದಾರೆ.

ವಿಕಾಸಸೌಧದಲ್ಲಿ ಮಾತನಾಡಿದ ಅವರು, “ಹೂವು, ಹಣ್ಣು, ತರಕಾರಿ ಬೆಳೆಗಾರರ ಮಾಹಿತಿಯನ್ನು ಸರ್ಕಾರ ಈಗಾಗಲೇ ಕಲೆಹಾಕಿದೆ. ಇದರ ಆಧಾರದ ಮೇಲೆ ಸಂಪೂರ್ಣ ವಿವರ ಸಿದ್ದಪಡಿಸಿ ರೈತರ ಅಕೌಂಟ್ ಗೆ ಹಣ ವರ್ಗಾಯಿಸಲಾಗುವುದು” ಎಂದು ಅವರು ತಿಳಿಸಿದ್ದಾರೆ.

“ಕೋವಿಡ್ -19 ಹಿನ್ನೆಲೆಯಲ್ಲಿ ಘೋಷಿಸಲಾದ ಲಾಕ್‌ಡೌನ್‌ನಿಂದಾಗಿ ರೈತರಿಗೆ ಸಾಕಷ್ಟು ಬೆಳೆ ನಷ್ಟ ಆಗಿತ್ತು. ಹೂವಿನ ಬೆಳೆಗಾರರಂತು ದೊಡ್ಡ ಪ್ರಮಾಣದಲ್ಲಿ ನಷ್ಟ ಅನುಭವಿಸಿದ್ದರು. ಹೀಗಾಗಿ ಸರ್ಕಾರ ಮೊದಲು ಹೂವು ಬೆಳೆಗಾರರಿಗೆ ಪರಿಹಾರ ಘೋಷಣೆ ಮಾಡಿತ್ತು. ರಾಜ್ಯದಲ್ಲಿ ಒಟ್ಟು 12,735 ಹೆಕ್ಟೇರ್ ಪ್ರದೇಶದಲ್ಲಿ ಹೂ ಬೆಳೆಯಲಾಗಿದೆ. ಪರಿಹಾರವಾಗಿ ಪ್ರತಿ ಹೆಕ್ಟೇರ್ ಗೆ ತಲಾ 25,000 ರೂ. ನೀಡಲು 31.83 ಕೋಟಿ ರೂಪಾಯಿಯನ್ನು ಸರ್ಕಾರ ತೆಗೆದಿಟ್ಟಿದೆ.

ಅಲ್ಲದೆ ಹಣ್ಣು, ತರಕಾರಿ ಬೆಳೆದ ರೈತರಿಗೂ ಈ ಸಂದರ್ಭದಲ್ಲಿ ನಷ್ಟವಾಗಿದೆ. ಹೊರ ರಾಜ್ಯ ಹಾಗೂ ಹೊರ ದೇಶಕ್ಕೆ ರಫ್ತು ಸ್ಥಗಿತವಾಗಿತ್ತು. ಸಂಸ್ಕರಣಾ ಘಟಕ, ವೈನ್, ಡಿಸ್ಟಿಲರಿಸ್ ಘಟಕ ಎಲ್ಲವೂ ಬಂದ್ ಆಗಿತ್ತು. ಉತ್ತಮ ಮಳೆ ಕೂಡ ಆಗಿದ್ದರಿಂದ ಫಸಲು ಚನ್ನಾಗಿಯೆ ಬಂದಿತ್ತು. ಹೀಗಾಗಿ ಉತ್ಪಾದನೆ ಹೆಚ್ಚಾಗಿ ಮಾರಾಟ ಕಡಿಮೆಯಾಗಿತ್ತು. ಇದರಿಂದ ರೈತ ಸಂಕಷ್ಟಕ್ಕೆ ಸಿಲುಕಿದ್ದ. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಳಿ ಚರ್ಚಿಸಿದ್ದೆ. ನಮ್ಮ ಮನವಿಗೆ ಮುಖ್ಯಮಂತ್ರಿಗಳು ಸ್ಪಂಧಿಸಿದ್ದಾರೆ.

ರೈತರಿಗೆ ಪರಿಹಾರ ನೀಡಲು ಒಪ್ಪಿಗೆ ಸೂಚಿಸಿ, ತಕ್ಷಣವೆ ಘೋಷಣೆ ಕೂಡ ಮಾಡಿದ್ದಾರೆ. ರಾಜ್ಯದಲ್ಲಿ ಒಟ್ಟಾರೆ 50,083 ಹೆಕ್ಟೇರ್ ನಲ್ಲಿ ತರಕಾರಿ, 41,054 ಹೆಕ್ಟೇರ್ ನಲ್ಲಿ ಹಣ್ಣು ಬಳೆಯಲಾಗಿದೆ. ಪ್ರತಿ ಹೆಕ್ಟೇರ್ ಗೆ 15 ಸಾವಿರ ರೂ. ಪರಿಹಾರ ಘೋಷಣೆ ಮಾಡಲಾಗಿದೆ. ಇದಕ್ಕಾಗಿ ಸರ್ಕಾರ 137 ಕೋಟಿ ರೂ. ಘೋಷಿಸಿದೆ.

ಈಗಾಗಲೆ ಬೆಳೆ ಸಮೀಕ್ಷೆ ವರದಿ ಇಲಾಖೆಯಲ್ಲಿ ಲಭ್ಯವಿದೆ. ಪರಿಹಾರ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಬೆಳೆ ನಷ್ಟ ಆಗಿರುವ ಯಾವುದೆ ರೈತನ ಹೆಸರು ಪಟ್ಟಿಯಿಂದ ಕೈ ತಪ್ಪಿದ್ದಲ್ಲಿ, ಪಟ್ಟಿಗೆ ಸೇರಿಸಲು ಅವಕಾಶ ಇದೆ. ಸಂಪೂರ್ಣ ಮಾಹಿತಿ ಕಲೆ ಹಾಕಿ ಅತಿ ಶೀಘ್ರದಲ್ಲಿ ಹಣವನ್ನು ನೇರವಾಗಿ ರೈತರ ಖಾತೆಗೆ ಹಾಕುತ್ತೇವೆ. ಇನ್ನೂ ಪರಿಹಾರದ ಹಣ ಬಂದಿಲ್ಲ ಎಂದು ರೈತರು ಆತಂಕಗೊಳ್ಳೋದು ಬೇಡ. ಕೆಲವೇ ದಿನಗಳಲ್ಲಿ ರೈತರ ಖಾತೆಗೆ ಹಣ ಬರಲಿದೆ” ಎಂದು ತೋಟಗಾರಿಕೆ ಸಚಿವ ನಾರಾಯಣಗೌಡ ಮಾಹಿತಿ ನೀಡಿದ್ದಾರೆ.

Comments are closed.