ಕರ್ನಾಟಕ

ರಾಜ್ಯ ರಾಜಕೀಯದಲ್ಲಿ ಹೊಸ ಲೆಕ್ಕಾಚಾರದಲ್ಲಿ ದೇವೇಗೌಡರ ರಾಜ್ಯಸಭಾ ಸ್ಪರ್ಧೆಗೆ ಕಾಂಗ್ರೆಸ್ ಒಲವು

Pinterest LinkedIn Tumblr


ಬೆಂಗಳೂರು (ಮೇ 27): ದೊಡ್ಡ ಗೌಡರ ರಾಜ್ಯಸಭಾ ತಾಲೀಮು ಬಿರುಸಾಗಿ ನಡೆದಿದೆ. ಜೂನ್ 25ನೇ ತಾರೀಖಿಗೆ ಕುಪೇಂದ್ರ ರೆಡ್ಡಿ ಅವರ ರಾಜ್ಯಸಭಾ ಅವಧಿ ಅಂತ್ಯವಾಗಲಿದೆ. ಹಾಗಾಗಿ, ಜೆಡಿಎಸ್ ನ ಒಂದು ರಾಜ್ಯಸಭಾ ಸ್ಥಾನ ಖಾಲಿಯಾಗಲಿದೆ. ಖಾಲಿಯಾಗಲಿರುವ ಆ ಒಂದು ಸ್ಥಾನಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಹೆಸರು ಮುಂಚೂಣಿಗೆ ಬಂದಿದೆ. ಹಾಗೆ ಮುಂಚೂಣಿಗೆ ಬರಲು ಕಾರಣ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ.

ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರಿನಿಂದ ಸ್ಪರ್ಧಿಸಿದ್ದ ಮಾಜಿ ಪ್ರಧಾನಿ ದೇವೇಗೌಡರು ಸೋಲನ್ನು ಅನುಭವಿಸಿದ್ದರು. ಇದು ಅವರನ್ನು ಇನ್ನಿಲ್ಲದಂತೆ ನಿದ್ದೆಗೆಡಿಸಿರೋದು ನಿಜ. ಆ ಸೋಲಿನ ವೇದನೆಯಿಂದ ಮಾಜಿ ಪ್ರಧಾನಿ ದೇವೇಗೌಡರು ಇನ್ನೂ ಹೊರಬಂದಿಲ್ಲ ಅಂತ ಅವರ ಆಪ್ತ ಮೂಲಗಳೇ ಹೇಳುತ್ತವೆ. ಏಕೆಂದರೆ ದೇವೇಗೌಡರ ಚುನಾವಣೆಯ ಕೊನೆಯ ಕಾಲಘಟ್ಟದ ಸೋಲು ಅದಾಗಿತ್ತು. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿಪಕ್ಷಗಳ ನಾಯಕರೊಂದಿಗೆ ಉತ್ತಮ ಸಂಬಂಧ ಉಳಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರಿಗೆ ರಾಜ್ಯಸಭೆಗೆ ಈ ಬಾರಿ ನೀವು ಸ್ಫರ್ಧಿಸಿ, ನಿಮಗೆ ಅಗತ್ಯವಿರುವ ಮತಗಳನ್ನು ನಾವು ನೀಡುತ್ತೇವೆ ಎಂದು ಆಶ್ವಾಸನೆ ಕೊಟ್ಟಿದ್ದಾರಂತೆ.

ರಾಜ್ಯ ಸಭೆಗೆ ಆಯ್ಕೆಯಾಗಲು 48 ಶಾಸಕರ ಮತಗಳು ಬೇಕು. ಸದ್ಯಕ್ಕೆ ಜೆಡಿಎಸ್​ಗೆ ಇರುವುದು 34 ಶಾಸಕರ ಬಲ. ಉಳಿದ 14 ಮತಗಳನ್ನು ಕಾಂಗ್ರೆಸ್ ಕೊಡಲು ಸಿದ್ಧವಾಗಿದೆ. ಆದರೆ, ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರು ಮಾತ್ರ ರಾಜ್ಯಸಭೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ, ದೇವೇಗೌಡರ ರಾಜ್ಯಸಭೆ ಪ್ರವೇಶ ವಿಚಾರಕ್ಕೆ ಕುಟುಂಬದ ತಾಲೀಮು ನಡೆದಿದೆ. ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಶಾಸಕಿ ಅನಿತಾ ಕುಮಾರಸ್ವಾಮಿ, ಮಾಜಿ ಸಚಿವ ಹೆಚ್ ಡಿ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ಹೆಣ್ಣುಮಕ್ಕಳು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳಿಂದಲೂ ರಾಜ್ಯಸಭೆಗೆ ಹೋಗಲು ಒತ್ತಡ ಹಾಗೂ ಮನವಿಯನ್ನು ಮಾಡಲಾಗುತ್ತಿದೆ.

ಆದರೆ, ದೇವೇಗೌಡರು ಹೇಳೋದೇ ಬೇರೆ. ನಾನು ಇದುವರೆಗೂ ಹಿಂಬಾಗಿಲ ರಾಜಕಾರಣ ಮಾಡಿಲ್ಲ. ಹಿಂಬಾಗಿಲಿನಿಂದ ರಾಜ್ಯಸಭೆ ಪ್ರವೇಶ ಮಾಡೋದಲ್ಲ. ಸೋತು ಮತ್ತೆ ಕಾಂಗ್ರೆಸ್ಸಿಗರ ಮನೆ ಬಾಗಿಲಿಗೆ ಹೋಗಿ ರಾಜ್ಯಸಭೆ ಗಿಟ್ಟಿಸಿಕೊಂಡರೆಂಬ ಅಪವಾದ ಬೇಡ. ದೇವೇಗೌಡ ಅಧಿಕಾರ ಮೋಹಿ, ಅವಕಾಶವಾದಿ ಅನ್ನೋ ಪಟ್ಟ ಬೇಡವೇ ಬೇಡ. ಇದರಿಂದ ನನ್ನ ಇಷ್ಟು ವರ್ಷದ ರಾಜಕೀಯ ಇಮೇಜಿಗೆ ಡ್ಯಾಮೇಜ್ ಆಗುತ್ತದೆ. ಹಾಗಾಗಿ, ನಾನು ರಾಜ್ಯಸಭೆಗೆ ಹೋಗೋದಿಲ್ಲ ಎಂದು ಹಠ ತೊಟ್ಟಿದ್ದಾರಂತೆ ಮಾಜಿ ಪ್ರಧಾನಿ ದೇವೇಗೌಡರು.

ಆದರೆ, ದೇವೇಗೌಡರ ಕುಟುಂಬದವರ ವಾದವೇ ಬೇರೆ ಇದೆ. ನಿಮಗೆ ಮುಂದೆ ಲೋಕಸಭೆಗೆ ಸ್ಪರ್ಧಿಸಲು ಆಗುವುದಿಲ್ಲ. ಈಗಾಗಲೇ ವಯಸ್ಸು 88 ಆಗಿದೆ. ಮುಂದಿನ ಲೋಕಸಭಾ ಚುನಾವಣೆ ಹೊತ್ತಿಗೆ ವಯಸ್ಸು 92 ಆಗುತ್ತದೆ .ಆಗ ನಿಮ್ಮ ಮನಸ್ಸು ಸಕ್ರಿಯವಾಗಿದ್ದರೂ ದೇಹ ಸ್ಪಂದಿಸುವುದಿಲ್ಲ. ಹಾಸನ ಲೋಕಸಭಾ ಕ್ಷೇತ್ರವನ್ನು ಈಗಾಗಲೇ ಪ್ರಜ್ವಲ್ ಗೆ ಬಿಟ್ಟು ಕೊಡಲಾಗಿದೆ. ಬೇರೆ ಕ್ಷೇತ್ರದ ಪ್ರಯೋಗ ತುಮಕೂರಿನ ರೀತಿ ಆಗುತ್ತದೆ ಕಾಂಗ್ರೆಸ್ ಹೈಕಮಾಂಡೇ ಸ್ಪರ್ಧೆ ಮಾಡಿ ಎಂದು ಹೇಳಿದೆ. ಸಂಸತ್ತಿನಲ್ಲಿ ನಿಮ್ಮ ಹೋರಾಟ ಮುಂದುವರಿಸಬಹುದು. ರೈತರ ಪರ ಹಾಗೂ ಬಿ.ಜೆ.ಪಿ ಸರ್ಕಾರದ ವಿರುದ್ಧ ಧ್ವನಿಯೆತ್ತಲು ಇದು ಒಳ್ಳೆ ಅವಕಾಶ. ನೀವು ರಾಜ್ಯಸಭೆಗೆ ಹೋದರೆ ಜೆ.ಡಿ.ಎಸ್ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬರುತ್ತದೆ ಹಾಗೂ ಕಾರ್ಯಕರ್ತರನ್ನು ಹುರಿದುಂಬಿಸಬಹುದು ಎಂದು ದೇವೇಗೌಡರನ್ನು ರಾಜ್ಯಸಭೆಗೆ ಸ್ಪರ್ಧಿಸುವಂತೆ ಕುಟುಂಬ ಸದಸ್ಯರು ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ. ಇಷ್ಟೆಲ್ಲ ಆದರೂ ದೇವೇಗೌಡರು ಮಾತ್ರ ರಾಜ್ಯಸಭೆಗೆ ಸ್ಪರ್ಧಿಸುವ ಬಗ್ಗೆ ಗುಟ್ಟು ಬಿಟ್ಟುಕೊಡುತ್ತಿಲ್ಲ, ಈ ಬಗ್ಗೆ ಯೋಚನೆ ಮಾಡಲು ಇನ್ನಷ್ಟು ಸಮಯ ಬೇಕು ಎಂದಿದ್ದಾರಂತೆ.

ಗೌಡರ ರಾಜ್ಯಸಭೆ ಪ್ರವೇಶಕ್ಕೆ ಸಿದ್ದು ಟೀಮ್ ಅಸಮಾಧಾನ?:

ದೇವೇಗೌಡರ ರಾಜ್ಯಸಭೆ ಪ್ರವೇಶಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಟೀಮ್ ಒಳಗೊಳಗೆ ಬೇಸರ ಪಟ್ಟುಕೊಂಡಿದೆಯಂತೆ. ಅವಕಾಶ ಸಿಕ್ಕಾಗ ದೇವೇಗೌಡರು ಕಾಂಗ್ರೆಸ್ಸನ್ನು ಬಳಸಿಕೊಳ್ಳುತ್ತಾರೆ .ಕಾಂಗ್ರೆಸ್ ಪಕ್ಷದ ಸಹಾಯದಿಂದ ಪ್ರಧಾನಿ ಆದರು. ಕೊನೆಗೆ ಕಾಂಗ್ರೆಸ್ ವಿರುದ್ಧವೇ ಮಾತನಾಡಿದರು. ತುಮಕೂರಿನ ಲೋಕಸಭಾ ಸೋಲಿಗೆ ಕಾಂಗ್ರೆಸ್‌ ಪಕ್ಷ ಹಾಗೂ ಸಿದ್ದರಾಮಯ್ಯ ಹೊಣೆ ಎಂದು ಆರೋಪ ಮಾಡಿದರು. ಮಗ ಕುಮಾರಸ್ವಾಮಿ ಕಾಂಗ್ರೆಸ್​ನಿಂದ ಸಿಎಂ ಆದರೂ ಸ್ವಯಂಕೃತ ಅಪರಾಧದಿಂದ ಅಧಿಕಾರವನ್ನು ಕಳೆದುಕೊಂಡರು. ನಂತರ ಅಪ್ಪ-ಮಕ್ಕಳು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಾರ್ಟಿಯನ್ನು ಬೀದಿಯಲ್ಲಿ ಬೈದರು. ದೇವೇಗೌಡರು ರಾಜ್ಯಸಭೆಗೆ ಹೋಗೋದ್ರಿಂದ ಕಾಂಗ್ರೆಸ್ ಗೆ ಯಾವ ರೀತಿಯ ಲಾಭವೂ ಇಲ್ಲ. ಮುಂದೆ ನಮ್ಮ ವಿರುದ್ಧವೆ ತಿರುಗಿ ಬೀಳುತ್ತಾರೆ ಎಂಬುದು ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರು ದೇವೇಗೌಡರ ರಾಜ್ಯಸಭೆ ಪ್ರವೇಶಕ್ಕೆ ವಿರೋಧ ಮಾಡಲು ಮುಂದಿಟ್ಟಿರುವ ಕಾರಣಗಳು.
:

ದೇವೇಗೌಡರು ರಾಜ್ಯಸಭೆಗೆ ಪ್ರವೇಶ ಮಾಡಲು ಡಿ.ಕೆ.ಶಿ ಬೆಂಬಲ ಸೂಚಿಸಿದ್ದಾರೆ. ಇತ್ತೀಚೆಗೆ ದೇವೇಗೌಡರ ಹುಟ್ಟುಹಬ್ಬಕ್ಕೆ ಶುಭಕೋರಲು ಹೋದಾಗ ರಾಜ್ಯಸಭೆಗೆ ಸ್ಪರ್ಧೆ ಮಾಡಿ ಎಂದು ಮನವಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಡಿ.ಕೆ.ಶಿ ಗೌಡರಿಗೆ ಸಾಥ್ ನೀಡುವುದರ ಹಿಂದೆ ಬೇರೆಯದೇ ಲೆಕ್ಕಾಚಾರ ಇದೆಯಂತೆ. ಸಿಎಂ ಹುದ್ದೆಯ ಕನಸು ಕಾಣುತ್ತಿರುವ ಡಿ.ಕೆ. ಶಿವಕುಮಾರ್ ಗೆ ಮುಂದೆ ಜೆಡಿಎಸ್​ ನೆರವು ಬೇಕಾಗಬಹುದು. ಆ ಸಂದರ್ಭದಲ್ಲಿ ದೇವೇಗೌಡರು ಮತ್ತು ಅವರ ಕುಟುಂಬ ಡಿಕೆಶಿ ಬೆಂಬಲಕ್ಕೆ ನಿಲ್ಲಬಹುದು. ಖುದ್ದು ಡಿಕೆಶಿಯನ್ನೇ ಮುಖ್ಯಮಂತ್ರಿಯಾಗಿ ಮಾಡಿ ಎಂದು ಹೈಕಮಾಂಡ್​ಗೂ ಹೇಳಬಹುದು. ಹಾಗಾಗಿ ದೇವೇಗೌಡರ ರಾಜ್ಯಸಭೆ ಸ್ಪರ್ಧೆಗೆ ಡಿಕೆಶಿ ಭವಿಷ್ಯದ ಲೆಕ್ಕಾಚಾರ ಇಟ್ಟುಕೊಂಡೇ ಒಲವು ತೋರಿದ್ದಾರಂತೆ.

ಒಂದು ವೇಳೆ ದೇವೇಗೌಡರು ರಾಜ್ಯಸಭೆಗೆ ಪ್ರವೇಶಿಸಲು ಹಿಂದೇಟು ಹಾಕಿದರೆ ಜೆಡಿಎಸ್​ ಪಾಲಿನ ರಾಜ್ಯಸಭಾ ಸ್ಥಾನವನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟು ಕೊಡುತ್ತಾರೆಂತೆ. ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪಾಲಿನ ಎರಡು ವಿಧಾನ ಪರಿಷತ್ತಿನ ಸೀಟುಗಳನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡಿ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಬಳಿಯೇ ಬೇಡಿಕೆ ಇಡಲಿದ್ದಾರೆ ಎಂಬ ಮಾತುಗಳೂ ಕೇಳಿಬಂದಿವೆ.

Comments are closed.