ಕರ್ನಾಟಕ

ಮಂಡ್ಯದಲ್ಲಿ ನಿಯಂತ್ರಣಕ್ಕೆ ಬರುತ್ತಿರುವ ಕೊರೋನಾ

Pinterest LinkedIn Tumblr


ಮಂಡ್ಯ(ಮೇ27): ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ರಣಕೇಕೆ ಹಾಕುತ್ತಿದ್ದ ಕೊರೋನಾ ನಿಯಂತ್ರಣಕ್ಕೆ ಬಂದಿದೆ. ಜಿಲ್ಲೆಯಲ್ಲಿ ಕಳೆದ ವಾರ ಅಬ್ಬರಿಸಿ ದ್ವಿಶತಕದ ಗಡಿ ದಾಟಿದ್ದ ಕೊರೋನಾ, ಕಳೆದ ಮೂರು ದಿನಗಳಿಂದ ಒಂದಂಕಿಗೆ ಬಂದು‌ ನಿಂತಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಮೂರು ದಿನಗಳಿಂದ ಏರಿಕೆಯಾಗದೆ 255ಕ್ಕೆ ಬಂದು ನಿಂತಿರುವುದು ಜಿಲ್ಲಾಡಳಿತಕ್ಕೆ ಸ್ವಲ್ಪ ನೆಮ್ಮದಿ ನೀಡಿದೆ.

ಹೌದು! ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ಕಳೆದ ವಾರ ಕೊರೊನಾ ರಣಕೇಕೆ ಹಾಕ್ತಿತ್ತು. ಜಿಲ್ಲೆಯಲ್ಲಿ 50ರ ಒಳಗಿದ್ದ ಕೊರೋನಾ ಪ್ರಕರಣ ನೋಡ ನೋಡುತ್ತಿದ್ದಂತೆ ಶತಕ, ದ್ವಿಶತಕದ ಗಡಿ ದಾಟಿ ಜಿಲ್ಲಾಡಳಿತವನ್ನು ಕಂಗೆಡಿಸಿತ್ತು. ಮುಂಬೈ ವಲಸಿಗರು ಜಿಲ್ಲೆಗೆ ಎಂಟ್ರಿ ಕೊಡ್ತಿದ್ದಂತೆ ಸೋಂಕಿತ ಪ್ರಕರಣಗಳ ಸಂಖ್ಯೆ ದಿಢೀರ್ ಏರಿಕೆಯಾಗಿ ಜಿಲ್ಲೆಯನ್ನು ಸೋಂಕಿತರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಕೊಂಡೊಯ್ದಿತ್ತು. ಇದರಿಂದ ಜಿಲ್ಲಾಡಳಿತ ಸಾಕಷ್ಟು ಕಂಗಾಲಾಗಿತ್ತು. ಸಾಕಷ್ಟು ಕಠಿಣ ಕ್ರಮಗಳ ಮೂಲಕ ಕಡಿವಾಣ ಹಾಕಿ ಇದೀಗ ಕಳೆದ ಮೂರು ದಿನಗಳಿಂದ ಒಂದಂಕಿಗೆ ತಂದು ನಿಲ್ಲಿಸಿದೆ. ಇಂದು ಕೇವಲ ಒಂದು ಪ್ರಕರಣ ಮಾತ್ರ ಪಾಸಿಟಿವ್ ಬಂದಿದೆ.

ಇನ್ನು, ಪ್ರಕರಣಗಳ ಸಂಖ್ಯೆ ಏಕಾಏಕಿ ಏರಿಕೆಯಾಗ್ತಿರೋದು ಕಂಡು ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮದ ಮೂಲಕ ಕೊರೋನಾಗೆ ಕಡಿವಾಣ ಹಾಕಲು ಮುಂದಾಗಿತ್ತು. ಅದರಂತೆ ಮೊದಲು ಮುಂಬೈ ವಲಸಿಗರನ್ನು ಕಡ್ಡಾಯವಾಗಿ ಕ್ವಾರೆಂಟೈನ್​ಗೆ ಒಳಪಡಿಸಿತ್ತು. ಜೊತೆಗೆ ಹೆಚ್ಚು -ಹೆಚ್ಚು ಕೊರೋನಾ ಪರೀಕ್ಷೆಗಳನ್ನು ಮಾಡಿಸುವುದು ಸೇರಿ ವಲಸೆ ಬರುತ್ತಿದ್ದ ಮುಂಬೈ ಜನರಿಗೆ ಗಡಿಯಲ್ಲೇ ಕಡಿವಾಣ ಹಾಕುವ ಕೆಲಸಕ್ಕೆ ಮುಂದಾಗಿದ್ದು ಕಡೆಗೂ ಜಿಲ್ಲಾಡಳಿತಕ್ಕೆ ಫಲ ಕೊಟ್ಟಿದೆ. ಕಳೆದ ವಾರ ರಣಕೇಕೆ ಹಾಕ್ತಿದ್ದ ಕೊರೋನಾ ಇದೀಗ ಜಿಲ್ಲೆಯಲ್ಲಿ ಈ ವಾರ ಕಳೆದ ಮೂರು ದಿನದಿಂದ ಕೇವಲ 3 ಪ್ರಕರಣಗಳಷ್ಟೆ ಕಾಣಿಸಿಕೊಂಡು ಸಿಂಗಲ್ ಡಿಜಿಟ್ ಗೆ ಬಂದು ನಿಂತಿದ್ದು ಜಿಲ್ಲಾಡಳಿತದ ನೆಮ್ಮದಿಗೆ ಕಾರಣವಾಗಿದೆ. ಪ್ರಕರಣಗಳು ನಿಯಂತ್ರಣ ದಲ್ಲಿರೋ ಬಗ್ಗೆ ಡಿಸಿ ಮಾತನಾಡಿ‌ ಮೈ ಮರೆಯದೆ ಎಚ್ಚರ ವಹಿಸುವಂತೆ ಕರೆ ನೀಡಿದ್ದಾರೆ‌.

ಒಟ್ಟಾರೆ, ಸಕ್ಕರೆ ನಾಡು ಮಂಡ್ಯದಲ್ಲಿ ಜಿಲ್ಲಾಡಳಿತ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಾಣುತ್ತಿದೆ. ಪ್ರಕರಣಗಳ ಏರಿಕೆಯಿಂದ ಆತಂಕದಲ್ಲಿದ್ದ ಜಿಲ್ಲೆಯಲ್ಲಿ ಪ್ರಕರಣಗಳ ಸಂಖ್ಯೆ ಇಳಿಕೆಯಾಗ್ತಿರೋದು ಜಿಲ್ಲಾಡಳಿತದಲ್ಲಿ ಕೊಂಚ ನೆಮ್ಮದಿ ತಂದಿದೆ. ಆದರೂ ಸಹ ಮುಂಬೈ ವಲಸಿಗರಿಂದ ಮತ್ತೆ ಪ್ರಕರಣಗಳು ಏರಿಕೆಯಾಗಬಹುದೆಂಬ ಆತಂಕದಲ್ಲಿರೋದು ಸುಳ್ಳಲ್ಲ.

Comments are closed.