ಕರ್ನಾಟಕ

ದೇವೇಗೌಡ – ಚೆನ್ನಮ್ಮ ದಾಂಪತ್ಯಕ್ಕೆ 66 ವರ್ಷ

Pinterest LinkedIn Tumblr


ಬೆಂಗಳೂರು: ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಹಾಗೂ ಅವರ ಪತ್ನಿ ಚೆನ್ನಮ್ಮ ದಾಂಪತ್ಯಕ್ಕೆ ಇದೀಗ 66 ವಸಂತಗಳ ಸಂಭ್ರಮ. ತಾತ ಹಾಗೂ ಅಜ್ಜಿಯ ವಿವಾಹ ವಾರ್ಷಿಕೋತ್ಸವಕ್ಕೆ ಅವರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಶುಭಕೋರಿದ್ದಾರೆ.

ಟ್ವಿಟ್ಟರ್‌ನಲ್ಲಿ ಶುಭಾಶಯ ಸಲ್ಲಿಸಿದ ನಿಖಿಲ್ “ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ 66 ವಸಂತಗಳನ್ನು ಪೂರೈಸಿರುವ ನಾಡಿನ ಆದರ್ಶ ದಂಪತಿಗಳಾಗಿರುವ ಪ್ರೀತಿಯ ತಾತ ಎಚ್‌ಡಿ ದೇವೇಗೌಡ ಹಾಗೂ ಅಜ್ಜಿ ಚೆನ್ಮಮ್ಮ ಅವರಿಗೆ ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು” ಎಂದಿದ್ದಾರೆ.

ಎಚ್‌ಡಿ ದೇವೇಗೌಡ ಅವರು ಹಾಸನ ತಾಲ್ಲೂಕಿನ ಮುತ್ತಿಗೆ ಹಿರೇಹಳ್ಳಿಯ ಚೆನ್ನಮ್ಮ ಅವರನ್ನು 1954ರಲ್ಲಿ ವಿವಾಹವಾಗಿದ್ದರು. ದೇವೇಗೌಡರ ರಾಜಕೀಯ ಜೀವನದಲ್ಲೂ ಅವರ ಪತ್ನಿ ಚೆನ್ನಮ್ಮ ಮಹತ್ವದ ಪಾತ್ರವನ್ನು ವಹಿಸಿದ್ದಾರೆ.

ಇತ್ತೀಚೆಗೆ ರೇವತಿ ಅವರನ್ನು ವಿವಾಹವಾದ ನಿಖಿಲ್ ಕುಮಾರಸ್ವಾಮಿ ತಮ್ಮ ದಾಂಪತ್ಯ ಜೀವನಕ್ಕೆ ತಾತ, ಅಜ್ಜಿಯ ಜೀವನವೇ ಮಾದರಿ ಎನ್ನುವ ಮೂಲಕ ಗಮನಸೆಳೆದಿದ್ದರು. ದಾಂಪತ್ಯದಲ್ಲಿ ಪರಸ್ಪರ ಹೇಗೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬುವುದಕ್ಕೆ ನಮಗೆ ಅವರೇ ಮಾದರಿ ಎಂದಿದ್ದರು.

ಕೆಲ ದಿನಗಳ ಹಿಂದೆಯಷ್ಟೇ ಎಚ್‌ಡಿ ದೇವೇಗೌಡರು ತಮ್ಮ 87 ವರ್ಷದ ಜನ್ಮದಿನವನ್ನು ಆಚರಿಸಿದ್ದರು. ದೇವೇಗೌಡರ ಜನ್ಮದಿನಕ್ಕೆ ಸಾಕಷ್ಟು ಜನರು ಶುಭಹಾರೈಸಿದ್ದರು. ಇದೀಗ ದೇವೇಗೌಡ ಹಾಗೂ ಚೆನ್ನಮ್ಮ ದಂಪತಿ 66ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.

Comments are closed.