ಕರ್ನಾಟಕ

ಚಿಕ್ಕಬಳ್ಳಾಪುರದಲ್ಲಿ ಭಾನುವಾರ 27 ಕೊರೋನಾ ಪ್ರಕರಣಗಳು ಪತ್ತೆ

Pinterest LinkedIn Tumblr


ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಭಾನುವಾರ ಕೂಡ ನಿಯಂತ್ರಣಕ್ಕೆ ಬಂದಿಲ್ಲ. ಜಿಲ್ಲೆಯಲ್ಲಿ ಮೇ 24 ರಂದು 27 ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವ ಮೂಲಕ ಆತಂಕ ಮುಂದುವರಿದಿದೆ.

ಮಹಾರಾಷ್ಟ್ರದಿಂದ ಬಂದ ವಲಸಿಗರಲ್ಲಿ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಕಂಡುಬಂದಿತ್ತು. ಶುಕ್ರವಾರ ಒಂದೇ ದಿನ 105 ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿ ಆತಂಕ ಸೃಷ್ಟಿಯಾಗಿತ್ತು.

ಗುರುವಾರ ಮಹಾರಾಷ್ಟ್ರದಿಂದ ಗೌರಿಬಿದನೂರು, ಬಾಗೇಪಲ್ಲಿ ತಾಲೂಕಿಗೆ 3 ಬಸ್‌ಗಳಲ್ಲಿ ಬಂದಿದ್ದ ವಲಸಿಗರಲ್ಲಿ ಸೋಂಕು ಕಾಣಿಸಿಕೊಂಡ ಪರಿಣಾಮ ಜಿಲ್ಲೆಯಲ್ಲಿ ಕೋವಿಡ್‌-19 ತೀವ್ರ ಸ್ವರೂಪದಲ್ಲಿ ಹರಡಲು ಕಾರಣವಾಗಿದೆ.

ಈ ನಿಟ್ಟಿನಲ್ಲಿ ಸಾಕಷ್ಟು ಎಚ್ಚರಿಕೆಗಳನ್ನು ವಹಿಸಲಾಗಿತ್ತು. ಸ್ವತಃ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪನವರು ಚಿಕ್ಕಬಳ್ಳಾಪುರದ ಜಿಲ್ಲಾಧಿಕಾರಿಗಳ ಜೊತೆಗೆ ವಿಡಿಯೋ ಸಂವಾದ ನಡೆಸಿದ್ದರು. ಸೋಂಕು ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತಾಗಿ ಮಾಹಿತಿ ಪಡೆದುಕೊಂಡಿದ್ದರು.

ಇದೀಗ ಭಾನುವಾರ 27 ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಒಟ್ಟು ಸಂಖ್ಯೆ 126 ಕ್ಕೆ ತಲುಪಿದೆ. ಈ ಪೈಕಿ 18 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು 106 ಪ್ರಕರಣಗಳು ಸಕ್ರಿಯವಾಗಿದೆ. ಅಲ್ಲದೆ ಸೋಂಕಿಗೆ ಇಬ್ಬರು ಬಲಿಯಾಗಿದ್ದಾರೆ.

Comments are closed.