ಕರ್ನಾಟಕ

ಮಹಾರಾಷ್ಟ್ರದ ಪ್ರಯಾಣಿಕರು ರಾಜ್ಯ ಪ್ರವೇಶಿಸುವಂತಿಲ್ಲ; ಯಡಿಯೂರಪ್ಪ

Pinterest LinkedIn Tumblr


ಬೆಂಗಳೂರು (ಮೇ 22): ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಪ್ರತಿದಿನ 120ಕ್ಕೂ ಹೆಚ್ಚು ಹೊಸ ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿವೆ. ಮಹಾರಾಷ್ಟ್ರದಿಂದ ಪ್ರಯಾಣಿಸುವವರಿಗೆ ಅತಿಹೆಚ್ಚು ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವವರಿಗೆ ನಿಷೇಧ ಹೇರಲಾಗಿದೆ.

ರಾಜ್ಯದಲ್ಲಿ ಅತಿಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿರುವ ಮಂಡ್ಯಕ್ಕೆ ಮಹಾರಾಷ್ಟ್ರದಿಂದ ಬಂದ ಪ್ರಯಾಣಿಕರು ದೊಡ್ಡ ಸಂಕಷ್ಟ ತಂದಿದ್ದರು. ಇಂದು ಚಿಕ್ಕಬಳ್ಳಾಪುರದಲ್ಲಿ ಬರೋಬ್ಬರಿ 45 ಕೊರೋನಾ ಕೇಸ್​ಗಳು ಪತ್ತೆಯಾಗಿವೆ. ಚಿಕ್ಕಬಳ್ಳಾಪುರದಲ್ಲಿ ಪತ್ತೆಯಾಗಿರುವ ಹೊಸ ಕೊರೋನಾ ಕೇಸ್​ಗಳು ಕೂಡ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಹೀಗಾಗಿ, ಸಿಎಂ ಯಡಿಯೂರಪ್ಪ ಮಹಾರಾಷ್ಟ್ರದ ಪ್ರಯಾಣಿಕರಿಗೆ ನಿರ್ಬಂಧ ಹೇರಿದ್ದಾರೆ.

ಇಂದು ವಿಡಿಯೋ ಕಾನ್ಫರೆನ್ಸ್ ನಡೆಸಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಮಹಾರಾಷ್ಟ್ರದಿಂದ ಬರುವವರಿಗೆ ಪ್ರವೇಶ ನೀಡಬೇಡಿ ಎಂದು ಸೂಚನೆ ನೀಡಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ನಿಯಂತ್ರಣದಲ್ಲಿತ್ತು. ಆದರೆ, ಮಹಾರಾರಾಷ್ಟ್ರದಿಂದ ಬರುವವರ ಸಂಖ್ಯೆ ಹೆಚ್ಚಳದಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ, ಮಹಾರಾಷ್ಟ್ರದಿಂದ ಬರುವವರಿಗೆ ಸದ್ಯಕ್ಕೆ ಅನುಮತಿ ನೀಡುವುದು ಬೇಡ ಎಂದು ಮಂಡ್ಯ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾಡಳಿತಕ್ಕೆ ಮುಖ್ಯಮಂತ್ರಿಗಳು ಆದೇಶ ನೀಡಿದ್ದಾರೆ.

Comments are closed.