ಕೊಲ್ಕತ್ತಾ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪಶ್ಚಿಮ ಬಂಗಾಳದಲ್ಲಿ ಅಮ್ಫನ್ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳ ಸಮೀಕ್ಷೆ ನಡೆಸಿದ್ದಾರೆ. ಭಾರತೀಯ ವಾಯುಸೇನೆಯ ಹೆಲಿಕಾಪ್ಟರ್ ಮೂಲಕ ಅವರು ಚಂಡಮಾರುತದ ಹೊಡೆತಕ್ಕೆ ಒಳಗಾದ ಪ್ರದೇಶಗಳ ಸಮೀಕ್ಷೆ ನಡೆಸಿದ್ದಾರೆ. ಈ ವೇಳೆಗೆ ಅವರಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ರಾಜ್ಯದ ರಾಜ್ಯಪಾಲ ಜಗದೀಪ್ ಧನ್ಕಡ ಸಾಥ್ ನೀಡಿದ್ದಾರೆ. ಬಳಿಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಬಷೀರ್ ಘಾಟ್ ತಲುಪಿದ ಪ್ರಧಾನಿ ಸಮೀಕ್ಷಾ ಸಭೆ ನಡೆಸಿದ್ದಾರೆ.
ಈ ಸಭೆಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳಕ್ಕೆ ಒಂದು ಸಾವಿರ ಕೋಟಿ ರೂ.ಗಳ ಪರಿಹಾರ ಪ್ಯಾಕೇಜ್ ಘೋಷಿಸಿದ್ದಾರೆ. ಜೊತೆಗೆ ಈ ನೈಸರ್ಗಿಕ ವಿಕೋಪದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬ ಸದಸ್ಯರಿಗೆ 2 ಲಕ್ಷ ಹಾಗೂ ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ನೀಡುವುದಾಗಿ ಹೇಳಿದ್ದಾರೆ. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳದ ಬೆನ್ನಿಗೆ ನಿಲ್ಲಲಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಬಳಿಕ ಹೇಳಿಕೆ ನೀಡಿರುವ ಪ್ರಧಾನಿ ಮೋದಿ, ” ಕಳೆದ ಒಂದು ವರ್ಷಗಳ ಹಿಂದೆ ಬಂದ ಸೈಕ್ಲೋನ್ ನಿಂದ ಓಡಿಷಾ ರಾಜ್ಯಕ್ಕೆ ಅಪಾರ ಹಾನಿಯಾಗಿತ್ತು. ಇದೀಗ ಒಂದು ವರ್ಷದ ಬಳಿಕ ಮತ್ತೆ ಚಂಡಮಾರುತ ಭಾರತದ ಪೂರ್ವ ಭಾಗಕ್ಕೆ ಹಾನಿ ತಲುಪಿಸಿದೆ. ಇದ್ದರಿಂದ ಪಶ್ಚಿಮ ಬಂಗಾಳಕ್ಕೆ ಅಪಾರ ಹಾನಿ ಉಂಟಾಗಿದೆ. ಈ ನೈಸರ್ಗಿಕ ವಿಕೋಪದಲ್ಲಿ ಪ್ರಾಣ ಕಳೆದುಕೊಂಡವರಿಗೆ ನನ್ನ ಸಾಂತ್ವನ. ಇಂತಹ ಪರಿಸ್ಥಿತಿಯಲ್ಲಿ ಜನರಿಗೆ ಸಾಧ್ಯವಾದ ಸಹಾಯ ಮಾಡಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಒಟ್ಟಿಗೆ ಕೆಲಸ ಮಾಡಲಿವೆ. ಸದ್ಯ ನಾನು ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳ ಜೊತೆಗೆ ವಾಯು ಸಮೀಕ್ಷೆ ನಡೆಸಿದ್ದು, ಅವರು ನನಗೆ ಸದ್ಯಂದ ಪರಿಸ್ಥಿಯ ಕುರಿತು ಮಾಹಿತಿ ನೀಡಿದ್ದಾರೆ” ಎಂದಿದ್ದಾರೆ.
“ಈ ಪರಿಸ್ಥಿತಿಯಲ್ಲಿ ಸೂರು ಕಳೆದುಕೊಂಡವರಿಗೆ ಸೂರು ಒದಗಿಸಲು ಮತ್ತು ಪುನರ್ ನಿರ್ಮಾಣ ಕಾರ್ಯಗಳಿಗೆ ಸಂಬಂಧಿದ ಎಲ್ಲ ಕಾರ್ಯಗಳ ಮೇಲೆ ಗಮನ ಕೇಂದ್ರೀಕರಿಸುವುದು ಅಗತ್ಯವಿದೆ. ಪಶ್ಚಿಮ ಬಂಗಾಳ ಮತ್ತೆ ಎದ್ದು ನಿಲ್ಲಬೇಕು ಎಂಬುದು ನಮ್ಮೆಲ್ಲರ ಬಯಕೆ. ಹೀಗಾಗಿ ಈ ಎಲ್ಲ ಕಾರ್ಯಗಳಲ್ಲಿ ಕೇಂದ್ರ ಸರ್ಕಾರ, ಪಶ್ಚಿಮ ಬಂಗಾಳ ಸರ್ಕಾರದ ಜೊತೆಗೆ ನಿಲ್ಲಲಿದೆ. ವಿರೋಧಾಭಾಸಗಳ ನಡುವೆಯೂ ಕೂಡ ಪಶ್ಚಿಮ ಬಂಗಾಳ ಹೋರಾಡುತ್ತಿದ್ದು ಈ ಪ್ರತಿಕೂಲ ಪರಿಸ್ಥಿತಿಯಲ್ಲಿ ನಾವು ಪಶ್ಚಿಮ ಬಂಗಾಳದ ಜೊತೆಗೆ ಇರಲಿದ್ದೇವೆ” ಎಂದು ಅವರು ಹೇಳಿದ್ದಾರೆ.
“ನಾವು ಒಂದೆಡೆ ಮಹಾಮಾರಿಯ ವಿರುದ್ಧ ಹೋರಾಡುತ್ತಿದ್ದು, ಕೆಲ ಪ್ರದೇಶಗಳಲ್ಲಿ ಚಂಡಮಾರುತದ ಪರಿಸ್ಥಿತಿ ಎದುರಾಗಿದೆ. ಮಹಾಮಾರಿಯನ್ನು ಎದುರಿಸಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅವಶ್ಯಕವಾಗಿದೆ. ಆದರೆ. ಚಂಡಮಾರುತದ ಪರಿಸ್ಥಿತಿ ಎದುರಿಸಲು ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಲಾಗುತ್ತದೆ. ಪಶ್ಚಿಮ ಬಂಗಾಳ ಈ ಪರಿಸ್ಥಿತಿಯಿಂದ ಶೀಘ್ರವೇ ಹೊರಬೀಳಲಿದೆ ಎಂದು ನಾನು ಆಶಿಸುತ್ತೇನೆ” ಎಂದು ಪ್ರಧಾನಿ ಹೇಳಿದ್ದಾರೆ.
ಪಶ್ಚಿಮ ಬಂಗಾಳ ಮತ್ತು ಓಡಿಷಾ ಕರಾವಳಿಗೆ ಅಪ್ಪಳಿಸಿದ ಈ ಚಂದಮಾರುತದಲ್ಲಿ ಪಶ್ಚಿಮ ಬಂಗಾಳದಲ್ಲಿ 80 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ದೇಶಾದ್ಯಂತ ಜಾರಿಯಲ್ಲಿರುವ ಲಾಕ್ ಡೌನ್ ಹಿನ್ನೆಲೆ 83 ದಿನಗಳ ದೀರ್ಘಾವಧಿಯ ಬಳಿಕ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರ ರಾಜಧಾನಿ ದೆಹಲಿಯ ಹೊರಗೆ ಪ್ರಯಾಣ ಬೆಳೆಸಿದ್ದಾರೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಚಂಡಮಾರುತಕ್ಕೆ ಒಳಗಾದ ಜಿಲ್ಲೆಗಳು ಹಾಗೂ ಹಾನಿಗೊಳಗಾದ ಪ್ರದೇಶಗಳ ಪುನರ್ ನಿರ್ಮಾಣಕ್ಕೆ ನೆರವು ಒದಗಿಸುವಂತೆ ಕೋರಿದ್ದರು.
Comments are closed.