ಕರ್ನಾಟಕ

ಅಡಿಕೆ ಉದುರುವಿಕೆಯಿಂದ ಮಲೆನಾಡು ಬೆಳೆಗಾರರಿಗೆ ಮತ್ತೊಂದು ಆಘಾತ

Pinterest LinkedIn Tumblr


ಶಿವಮೊಗ್ಗ: ಕಳೆದ 15 ದಿನಗಳಿಂದ ತೋಟದಲ್ಲಿ ಇದ್ದಕಿದ್ದಂತೆ ಎಳೆ ಅಡಿಕೆ ಉದುರಲಾರಂಭಿಸಿದ್ದು, ಅಡಿಕೆ ಗೊನೆಗಳು ಶೇ.30ರಷ್ಟು ಖಾಲಿಯಾಗಿ ರೈತರ ನಿದ್ದೆಗೆಡಿಸಿದೆ. ಈ ವರ್ಷವೂ ಅಡಿಕೆ ಬೆಳೆ ಉಳಿಸಿಕೊಳ್ಳಲು ಸಾಧ್ಯವೇ ಎಂಬ ಆತಂಕ ಎದುರಾಗಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.

ಕಳೆದ ವರ್ಷ ವಿಪರೀತ ಗಾಳಿ, ಮಳೆ ಮತ್ತು ಕೊಳೆರೋಗಕ್ಕೆ ಸಿಕ್ಕಿ ಅರ್ಧಕ್ಕಿಂತ ಹೆಚ್ಚು ಬೆಳೆ ಕಳೆದುಕೊಂಡಿದ್ದರು. ಉಳಿದ ಅಲ್ಪಸ್ವಲ್ಪ ಅಡಿಕೆಗೂ ಉತ್ತಮ ಬೆಲೆ ಸಿಗದೆ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ.

ತಾಪಮಾನ ಏರಿಕೆ ಕಾರಣ

ಪ್ರತಿ ವರ್ಷವೂ ಏಪ್ರಿಲ್‌, ಮೇ ತಿಂಗಳಲ್ಲಿ ಮಣಿ ಉದುರುವುದು ಸಾಮಾನ್ಯ. ಆದರೂ ಶೇ. 5ರಷ್ಟು ಮಾತ್ರ ಬೆಳೆಹಾನಿ ಆಗುತಿತ್ತು. ಆದರೆ ಈ ವರ್ಷ ಶೇ.30ರಷ್ಟು ಬೆಳೆ ಹಾನಿಯಾಗಲು ಈ ವರ್ಷದ ವಿಪರೀತ ತಾಪಮಾನ ಏರಿಕೆಯೇ ಕಾರಣ ಎನ್ನಲಾಗುತ್ತಿದೆ. ನಿಟ್ಟೂರಿನಲ್ಲಿ ಪ್ರತಿ ವರ್ಷ ಸರಾಸರಿ 32-33 ಡಿಗ್ರಿ ಇರುತ್ತಿದ್ದ ತಾಪಮಾನ ಕಳೆದ ವಾರ ದಾಖಲೆ ಎಂಬಂತೆ 37 ಡಿಗ್ರಿಗೆ ಏರಿತ್ತು.

ಬೆಲೆ ಕುಸಿತ ಭೀತಿ, ಬಡ್ಡಿ ಭಾರ
ಫೆಬ್ರವರಿಯಲ್ಲಿ 40 ಸಾವಿರದಿಂದ 42 ಸಾವಿರ ರೂ.ವರೆಗೆ ಏರಿದ್ದ ಕೆಂಪಡಕೆ ಧಾರಣೆ ಮಾರ್ಚ್‌ನಲ್ಲಿ 33 ಸಾವಿರದಿಂದ 34 ಸಾವಿರ ರೂ.ಗೆ ಇಳಿಕೆಯಾಗಿತ್ತು. ಮತ್ತೆ ಬೆಲೆ ಏರಿಕೆ ಆಗಬಹುದೇನೋ ಎಂಬ ಆಸೆಯಿಂದ ಕಾಯುತ್ತಿದ್ದ ರೈತರಿಗೆ ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮಾರುಕಟ್ಟೆ ಬಂದ್‌ ಆಗಿ ನಿರಾಸೆ ಮೂಡಿಸಿತ್ತು. ಈಗ ಲಾಕ್‌ಡೌನ್‌ ಸಡಿಲಿಕೆಯಿಂದ ಮಾರುಕಟ್ಟೆ ಪುನಾರಂಭವಾದರೂ ಕೇವಲ ಚಾಲಿ ಅಡಿಕೆ ಮಾತ್ರ ಬಿಕರಿ ಆಗುತ್ತಿದ್ದು, ಕೆಂಪಡಕೆ ವ್ಯಾಪಾರ ಆರಂಭವಾಗದೆ ಸಮಸ್ಯೆ ಉಂಟಾಗಿದೆ. ಶಿರಸಿ ಮಾರುಕಟ್ಟೆಗಳಲ್ಲಿ 29 ರಿಂದ 31 ಸಾವಿರ ರೂ.ಗಳಿಗೆ ವ್ಯಾಪಾರ ಆಗಿ ನಿರೀಕ್ಷೆ ಹುಟ್ಟಿಸಿದ್ದ ಚಾಲಿ ಅಡಿಕೆ ದರ ಶಿವಮೊಗ್ಗ, ಸಾಗರ, ಹೊಸನಗರ ಮಾರುಕಟ್ಟೆಗಳಲ್ಲಿ ಕೇವಲ 22ರಿಂದ 24 ಸಾವಿರ ರೂ.ಗೆ ಬಿಕರಿ ಆಗುತ್ತಿರುವುದು ನಿರಾಸೆ ಮೂಡಿಸಿದೆ. ಮಾರುಕಟ್ಟೆಗಳಲ್ಲಿ ಬಿಕರಿ ಮಾಡಲು ತೆಗೆದುಕೊಂಡು ಹೋಗಿ ಮಾರಲಾಗದೇ ಸಹಕಾರಿ ಸಂಘ ಹಾಗೂ ಮಂಡಿಗಳಲ್ಲಿ ದಾಸ್ತಾನು ಮಾಡಿ ಮುಂಗಡ ಹಣ ಪಡೆದ ರೈತರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಕೆಂಪಡಕೆ ವ್ಯಾಪಾರವಿಲ್ಲದೇ ಮುಂಗಡ ಹಣಕ್ಕೆ ಹೆಚ್ಚುವರಿ ಬಡ್ಡಿ ತೆರಬೇಕಾದ ಅನಿವಾರ‍್ಯತೆ ಉಂಟಾಗಿದೆ.

ದಾವಣಗೆರೆ: ಭಾರೀ ಗಾಳಿ ಮಳೆಗೆ ನೆಲಕಚ್ಚಿದ ಭತ್ತದ ಬೆಳೆ

“ಅಡಿಕೆ ಬೆಳೆಗೆ ಉತ್ತಮ ಬೆಲೆ ದೊರಕಿಸುವುದರ ಜತೆಗೆ ಅವರ ಹಿತರಕ್ಷಣೆ ಕೂಡ ನಮ್ಮ ಸಂಸ್ಥೆಯ ಧ್ಯೇಯ. ಎಳೆ ಅಡಿಕೆ ಉದುರುವ ರೋಗದ ಬಗ್ಗೆ ತೋಟಗಾರಿಕಾ ತಜ್ಞರನ್ನು ಸಂಪರ್ಕಿಸಿ ಪರಿಹಾರ ಮಾರ್ಗದ ಬಗ್ಗೆ ಗಮನಹರಿಸುತ್ತೇವೆ.”– ಎ.ಓ. ರಾಮಚಂದ್ರರಾವ್‌ ಉಪಾಧ್ಯಕ್ಷ , ಅಡಿಕೆ ಪರಿಷ್ಕರಣ ಮತ್ತು ಮಾರಾಟ ಸಹಕಾರಿ ಸಂಘ ನಿಯಮಿತ, ಸಾಗರ

“ಕಳೆದ ವರ್ಷ ಕೊಳೆ ರೋಗಕ್ಕೆ ಶೇ.70ರಷ್ಟು ಅಡಿಕೆ ಬೆಳೆ ಹಾಳಾಗಿತ್ತು. ಇದರ ಬೆನ್ನಲ್ಲೇ ವಿಪರೀತ ಎನ್ನುವಷ್ಟು ಎಳೆ ಅಡಿಕೆ ಉದುರಿದೆ. ಸರಕಾರ ಅಡಿಕೆ ಬೆಳೆಗಾರರ ಸಂಕಷ್ಟ ಅರ್ಥ ಮಾಡಿಕೊಂಡು ನೆರವಿಗೆ ಬಾರದಿದ್ದರೆ ಬದುಕು ದುಸ್ತರವಾಗಲಿದೆ.”– ಕುಮಾರಸ್ವಾಮಿ ಅಟ್ಟಳ್ಳಿ ನಿಟ್ಟೂರು, ಅಡಿಕೆ ಬೆಳೆಗಾರ

“ಸಾಮಾನ್ಯವಾಗಿ ಏಪ್ರಿಲ್‌ನಿಂದ ಜೂನ್‌ವರೆಗೆ ಎಳೆ ಅಡಿಕೆ ಉದುರುವ ರೋಗ ಕಾಣಿಸಿಕೊಳ್ಳುತ್ತದೆ. ಅತಿಯಾದ ತಾಪಮಾನದ ಏರಿಕೆ, ನೀರಿನ ಕೊರತೆ, ಮಣ್ಣಿನಲ್ಲಿ ಪೊಟ್ಯಾಷ್‌ಕೊರತೆ, ಮೋಡ ಕವಿದ ವಾತಾವರಣ ಇದಕ್ಕೆ ಕಾರಣ. ಎಳೆ ಅಡಿಕೆ ಉದುರುವಿಕೆ ರೋಗ ಲಕ್ಷಣವೂ ಪ್ರಾದೇಶಿಕ ಭಿನ್ನತೆಯಿಂದ ಕೂಡಿದೆ. ತಜ್ಞರ ಮಾರ್ಗದರ್ಶನ ಪಡೆದು ಸೂಕ್ತ ಔಷಧ ಸಿಂಪಡಿಸಿದರೆ ರೋಗ ಹತೋಟಿ ಸಾಧ್ಯ.”– ಶೇಷಗಿರಿ ಭಟ್‌ ನಿವೃತ್ತ ತೋಟಗಾರಿಕೆ ತಜ್ಞ, ಅಡಿಕೆ ಸಂಶೋಧನಾ ಇಲಾಖೆ, ನವುಲೆ, ಶಿವಮೊಗ್ಗ

Comments are closed.