
ಬೆಂಗಳೂರು: ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಕಳೆದ ಮಾರ್ಚ್ 24ರಂದು ದೇಶಾದ್ಯಂತ ಲಾಕ್ಡೌನ್ ಘೋಷಿಸಲಾಯಿತು. ಅಂದಿನಿಂದಲೇ ದೇಶದ ಎಲ್ಲ ಮದ್ಯದ ಅಂಗಡಿಗಳನ್ನು ಮುಚ್ಚಲಾಗಿತ್ತು. ಇದೀಗ ಲಾಕ್ಡೌನ್ ಅನ್ನು ಎರಡು ವಾರಗಳ ಕಾಲ ಮೂರನೇ ಬಾರಿಗೆ ವಿಸ್ತರಣೆ ಮಾಡಲಾಗಿದ್ದರೂ ಎಣ್ಣೆ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.
ಅದರಂತೆ ರಾಜ್ಯದಲ್ಲಿ ಇಂದು 40 ದಿನಗಳ ನಂತರ ಮದ್ಯದ ಅಂಗಡಿಗಳನ್ನು ತೆರೆಯಲಾಗಿದೆ. (ಎಂಎಸ್ಐಎಲ್, ಎಂಆರ್ಪಿ ಮತ್ತು ವೈನ್ ಶಾಪ್) ಬೆಳಗ್ಗೆಯಿಂದಲೇ ಮದ್ಯಪ್ರಿಯರು ಸರತಿ ಸಾಲಿನಲ್ಲಿ ನಿಂತು ಮದ್ಯವನ್ನು ಖರೀದಿ ಮಾಡಿದ್ದಾರೆ. ಬಹುತೇಕ ಕಡೆ ಮಧ್ಯಾಹ್ನದ ವೇಳೆಗೆ ಅಂಗಡಿಯಲ್ಲಿದ್ದ ಮದ್ಯವೆಲ್ಲಾ ಖಾಲಿಯಾಗಿದೆ. ಇಂದು ತೆರೆದಿದ್ದ ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರವೆ ನಡೆದಿದೆ. ಇಂದು ಒಂದು ದಿನದಲ್ಲಿ (ಬೆಳಗ್ಗೆ 9ರಿಂದ ಸಂಜೆ 7ರವರೆಗೆ ಮಾತ್ರ) ಎಷ್ಟು ವಹಿವಾಟು ನಡೆದಿದೆ ಎಂಬ ಮಾಹಿತಿಯನ್ನು ನ್ಯೂಸ್ 18 ಕನ್ನಡಕ್ಕೆ ಅಬಕಾರಿ ಇಲಾಖೆ ನೀಡಿದೆ.
ಎಣ್ಣೆ ವ್ಯಾಪಾರಕ್ಕೆ ಅಬಕಾರಿ ಇಲಾಖೆ ಕೇವಲ ಶೇ.40ರಷ್ಟು ಮಾತ್ರ ಅವಕಾಶ ನೀಡಿದೆ. ಉಳಿದ ಶೇ.60ರಷ್ಟು ಬಾರ್ ಆ್ಯಂಡ್ ರೆಸ್ಟೋರೆಂಟ್, ಮಾಲ್ಗಳು, ಪಬ್ಗಳು, ಕ್ಲಬ್ಗಳಲ್ಲಿ ಎಣ್ಣೆ ವ್ಯಾಪಾರಕ್ಕೆ ಅನುಮತಿ ನೀಡಿಲ್ಲ. ಅಬಕಾರಿ ಇಲಾಖೆ ಮಾಹಿತಿ ಪ್ರಕಾರ, ಪ್ರತಿದಿನ ಸಾಮಾನ್ಯವಾಗಿ ಒಂದು ಅಂಗಡಿ ವ್ಯಾಪಾರ ಎರಡೂವರೆಯಿಂದ ಮೂರು ಲಕ್ಷ ರೂ.
ಆದರೆ, ಇವತ್ತು ವ್ಯಾಪಾರ ಪ್ರತಿ ಅಂಗಡಿಯಲ್ಲಿ 6ರಿಂದ 7 ಲಕ್ಷ ರೂಪಾಯಿ ವ್ಯಾಪಾರ ಆಗಿದೆ. ಇಂದು 3.9 ಲಕ್ಷ ಲೀಟರ್ ಬಿಯರ್, 8 ಲಕ್ಷ ಲೀಟರ್ ಲಿಕ್ಕರ್ ಒಂದೇ ದಿನದಲ್ಲಿ ಖಾಲಿಯಾಗಿದೆ. ಈ ಹಿಂದೆ ಶೇ. 40 ರಷ್ಟು ಲೈಸೆನ್ಸ್ ಅಂಗಡಿಗಳಲ್ಲಿ ಪ್ರತಿದಿನ 15ರಿಂದ 17 ಕೋಟಿ ರೂ. ವಹಿವಾಟು ನಡೆಯುತ್ತಿತ್ತು. ಆದರೆ, ಇಂದು ಪ್ರತಿ ಅಂಗಡಿಯಲ್ಲೂ ಡಬಲ್ ವ್ಯಾಪಾರ ಆಗಿದೆ. ಹಾಗಾಗಿ ಇವತ್ತಿನ ವಹಿವಾಟು 45 ಕೋಟಿ ರೂ. ದಾಟಿದೆ. ಇಷ್ಟು ಪ್ರಮಾಣದ ವಹಿವಾಟು ನಡೆದಿರುವುದು ಇತಿಹಾಸದಲ್ಲೇ ಇದೇ ಮೊದಲು ಎಂದು ಅಬಕಾರಿ ಇಲಾಖೆ ಮಾಹಿತಿ ನೀಡಿದೆ. ರಾತ್ರಿ 11 ಗಂಟೆಯವರೆಗೆ ಅಂಗಡಿ ತೆರೆಯಲು ಅವಕಾಶ ನೀಡಿದಿದ್ದರೆ 50 ಕೋಟಿಗೂ ಹೆಚ್ಚು ವ್ಯವಹಾರ ಆಗುತ್ತಿತ್ತು ಎಂದು ಹೇಳಿದೆ.
Comments are closed.